ಹೊಸದಿಲ್ಲಿ: ಬಾಹ್ಯಾಕಾಶಕ್ಕೆ ಕಾಲಿಟ್ಟ ಮೊಟ್ಟ ಮೊದಲ ಭಾರತೀಯರೆಂಬ ಹೆಗ್ಗಳಿಕೆ ಹೊಂದಿರುವ ರಾಕೇಶ್ ಶರ್ಮಾ ಅವರನ್ನೇ ಸ್ಫೂರ್ತಿ ಯಾಗಿಸಿಕೊಂಡಿದ್ದ ನನ್ನಲ್ಲಿ ಒಂದಲ್ಲ ಒಂದು ದಿನ ಬಾಹ್ಯಾಕಾಶಕ್ಕೆ ಹೋಗಿ ಬರುವ ಅದಮ್ಯ ಉತ್ಸಾಹವಿತ್ತು. ಆ ಕನಸು ಈಗ ನನಸಾಗುತ್ತಿದೆ. ಇದಕ್ಕೆ ನನ್ನ ಮನೆಯವರ ಪ್ರೋತ್ಸಾಹವೂ ಕಾರಣ
-ಇದು, ವರ್ಜಿನ್ ಗ್ಯಾಲಾ ಕ್ಟಿಕ್ ಕಂಪೆನಿಯಿಂದ ರವಿವಾರ ಖಗೋಳ ಯಾತ್ರೆ ಕೈಗೊಳ್ಳಲಿರುವ ಭಾರತ ಮೂಲದ ಶಿರಿಷಾ ಬಾಂದ್ಲಾರವರ ಮಾತು.
2003ರಲ್ಲಿ ನಿಧನ ಹೊಂದಿದ ಭಾರತ ಮೂಲದ ಖಗೋಳ ವಿಜ್ಞಾನಿಯಾದ ಕಲ್ಪನಾ ಚಾವ್ಲಾರ ಅನಂತರ ಬಾಹ್ಯಾಕಾಶಕ್ಕೆ ಕಾಲಿಡಲಿರುವ ಭಾರತದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆ ಶಿರಿಷಾ ಅವರದ್ದು. ಈ ಹಿನ್ನೆಲೆಯಲ್ಲಿ ಅವರನ್ನು ಮಾತನಾಡಿಸಿದ ಮಾಧ್ಯಮಗಳೊಂದಿಗೆ ತಾವು ಸಾಗಿಬಂದ ದಾರಿಯನ್ನು ಮೆಲುಕು ಹಾಕಿದ್ದಾರೆ.
ನಮ್ಮ ಪರಿಮಿತಿಗಳನ್ನು ದಾಟಿ ಮುಂದೆ ಸಾಗಬೇಕಾದರೆ ನಾವು ಯಾರನ್ನಾದರೂ ಆದರ್ಶವನ್ನಾಗಿಟ್ಟುಕೊಳ್ಳಬೇಕು. ಹಾಗಾಗಿ ನಾನು ರಾಕೇಶ್ ಶರ್ಮಾರನ್ನು ಸ್ಫೂರ್ತಿಯಾಗಿಟ್ಟುಕೊಂಡಿದ್ದೆ. ನನ್ನೀ ಗುರಿ ಈಡೇರಿಕೆಯಲ್ಲಿ ನನ್ನ ಮೂಲ ಹಾಗೂ ನನ್ನ ದೇಶದ ಸಂಸ್ಕೃತಿಯ ಶಕ್ತಿಯ ಪಾಲೂ ಮಹತ್ವದ್ದಾಗಿದೆ ಎಂದಿದ್ದಾರೆ.
“ನನ್ನ ಬಾಲ್ಯದ ಕನಸಿಗೆ ನನ್ನ ತಂದೆ-ತಾಯಿ ಹಾಗೂ ನನ್ನ ತಾತಂದಿರು ಯಾವತ್ತೂ ಅಡ್ಡಿಯಾಗಲಿಲ್ಲ. ನನ್ನಿಷ್ಟದಂತೆಯೇ ವೃತ್ತಿಜೀವನ ಕಟ್ಟಿಕೊಳ್ಳಲು ನನಗೆ ಪ್ರೋತ್ಸಾಹ ನೀಡಿದರು. ಅವಕಾಶ ಸಿಕ್ಕರೆ ಒಂದು ಬಾರಿಯಲ್ಲ, ಇನ್ನೂ ಹತ್ತು ಬಾರಿ ಬಾಹ್ಯಾಕಾಶಕ್ಕೆ ಹೋಗಿಬರಲು ನಾನು ಸಿದ್ಧ’ ಎಂದು ಅವರು ಹೇಳಿದ್ದಾರೆ.