Advertisement

ಸರಳವಾಗಿ ಚನ್ನಕೇಶವ ದೇವರ ರಥೋತ್ಸವ ಆಚರಣೆ

07:38 PM Mar 22, 2020 | Lakshmi GovindaRaj |

ಬೇಲೂರು: ಕೊರೊನಾ ವೈರಸ್‌ ಭೀತಿಯ ಹಿನ್ನೆಲೆಯಲ್ಲಿ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವ ಹಾಗೂ ಇತರ ಉತ್ಸವಗಳನ್ನು ಸರಳವಾಗಿ ಆಚರಿಸಲಾಗುತ್ತಿದ್ದು ಭಕ್ತರು ಸಹಕರಿಸಬೇಕೆಂದು ಶಾಸಕ ಕೆ.ಎಸ್‌.ಲಿಂಗೇಶ್‌ ಮನವಿ ಮಾಡಿದರು.

Advertisement

ದೇಗುಲದ ದಾಸೋಹ ಸಭಾಂಗಣದಲ್ಲಿ ಕರೆಯಲಾಗಿದ್ದ ಅಡ್ಡೆಗಾರರ, ನಾಡಪಟೇಲರ ಹಾಗೂ ಅರ್ಚಕರ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಶ್ರೀಚನ್ನಕೇಶವಸ್ವಾಮಿ ರಥೋತ್ಸವವನ್ನು ಸರಳವಾಗಿ ದೇಗುಲದ ಪ್ರಾಂಗಣದೊಳಗೆ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ದೇಗುಲದ ಕಾರ್ಯನಿವಹಣಾಧಿಕಾರಿ ವಿದ್ಯುಲ್ಲತಾ ಮಾತನಾಡಿ, ಪ್ರತಿವರ್ಷ ಯುಗಾದಿ ಹಬ್ಬದಂದು ದೇವರಿಗೆ ಆಭರಣ ತೊಡಿಸಲಾಗುತ್ತಿತ್ತು. ಆದರೆ ಈ ವರ್ಷ ಅದನ್ನು ನಿಲ್ಲಿಸಲಾಗಿದೆ. ಸರ್ಕಾರಿ ಸೇವೆ ಮೂಲಕ ಉತ್ಸವಗಳನ್ನು ನಡೆಸಲಾಗುತ್ತಿದೆ.

ಹನುಮಂತ, ಗರುಡ ಇತ್ಯಾದಿ ದೊಡ್ಡ ಉತ್ಸವಗಳನ್ನು ಸ್ಥಗಿತಗೊಳಿಸಲಾಗಿದೆ. ಉಳಿದಂತೆ ಪ್ರತಿನಿತ್ಯ ದೇಗುಲದೊಳಗೆ ಬೆಳಗ್ಗೆ ಮತ್ತು ಸಂಜೆ ಉತ್ಸವಗಳು ನಡೆಯಲಿದೆ. ಏ.4,5 ರಂದು ಬ್ರಹ್ಮರಥ, ನಾಡರಥವನ್ನು ದೇಗುಲದೊಳಗೆ ಚಿಕ್ಕರಥ ಎಳೆಯುವ ಮೂಲಕ ರಥೋತ್ಸವ ನಡೆಸಲಾಗುವುದು ಎಂದರು.

ಮಂಗಳವಾದ್ಯ ಹೊರತು ಪಡಿಸಿದರೆ ಇತರೆ ವಾದ್ಯಗಳಿರುವುದಿಲ್ಲ. ದೇಗುಲಕ್ಕೆ ವಿದ್ಯುತ್‌ ಅಲಂಕಾರ ಇರುವುದಿಲ್ಲ ಎಂದರು. ಮಾ.28ರಿಂದ ಏ.10 ವರೆಗೆ ಅಡ್ಡೆಗಾರರು 40 ಜನ, ರಥೋತ್ಸವ ನಡೆಯುವ ಸಂದರ್ಭ ಏ.3 ಮತ್ತು 6 ರಂದು ನಾಡಪಟೇಲರು 16 ಜನ, ಏ.5ರಂದು ಕುರಾನ್‌ ಪಠಣಕ್ಕೆ ಒಬ್ಬರು , ಬಲಿಗೆ 2, ರಥದ ನಗಾರಿ ಬಾರಿಸಲು ಒಬ್ಬರು, ಏ. 5,6 ರಂದು ನಗಾರಿ ಬಾರಿರಲು ಒಬ್ಬರು, ಬಳ್ಳೂರು ಪಾಳ್ಯದವರು ಒಟ್ಟು 5 ಜನರು,

Advertisement

ಏ.4ರಂದು ವಿಶ್ವಕರ್ಮರು ಇಬ್ಬರು, ಏ.5 ರಂದು ದೇವರ ಉತ್ಸವ ಮಾಡಿಸಲು 12 ಬ್ರಾಹ್ಮಣರು ಸೇರಿದಂತೆ ಪ್ರತಿನಿತ್ಯ ನಾಲ್ವರು ಪತ್ರಕರ್ತರು 4 ಜನ, ಪೊಲೀಸ್‌ ಸಿಬ್ಬಂದಿ ಹಾಗೂ ದೇಗುಲದ ಅರ್ಚಕರು, ಸಿಬ್ಬಂದಿಯೊಂದಿಗೆ ಹೆಚ್ಚುವರಿಯಾಗಿ 4 ಜನ ಸಿಬ್ಬಂದಿ ಇರಲಿದ್ದಾರೆಂದರು. ದೇಗುಲದ ಮುಖ್ಯ ಅರ್ಚಕ ಕೃಷ್ಣಸ್ವಾಮಿ ಭಟ್ಟರ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next