Advertisement

ಕುತ್ತಿಗೆ ನೋವು ಉಪಶಮನಕ್ಕೆ ಸರಳ ವ್ಯಾಯಾಮ

10:57 PM Nov 18, 2019 | mahesh |

ಕೆಲ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಪೈಕಿ ಕುತ್ತಿಗೆ ನೋವು ಒಂದು. ಕೆಲವು ಸರಳ ಸೆಳೆತದ ವ್ಯಾಯಾಮಗಳನ್ನು ಅನುಸರಿಸುವ ಮೂಲಕ ಈ ನೋವನ್ನು ಬರದಂತೆ ಮಾಡಬಹುದು. ಅಂತಹ ಕೆಲ ಸರಳ ವ್ಯಾಯಾಮಗಳು ಇಲ್ಲಿವೆ.

Advertisement

ಕುತ್ತಿಗೆಯನ್ನು ತಿರುಗಿಸುವುದು
ಮೊದಲು ದೀರ್ಘ‌ವಾದ ಉಸಿರೆಳೆದುಕೊಂಡು ಎಡಕ್ಕೆ ಕುತ್ತಿಗೆಯನ್ನು ಎಷ್ಟು ಸಾಧ್ಯವೋ ಅಷ್ಟು ಎಡಕ್ಕೆ ತಿರುಗಿಸಿ ಕೆಲವು ಸೆಕೆಂಡು ಹಾಗೇ ಇರಿಸಿ ಅನಂತರ ನಿಧಾನವಾಗಿ ಬಲಗಡೆಗೆ ಸಾಧ್ಯವಾದಷ್ಟು ತಿರುಗಿಸಿ ನಂತರ ನಡುವಿಗೆ ತಂದು ಉಸಿರು ಬಿಡಿ. ಈ ವಿಧಾನವನ್ನು ಸುಮಾರು ಐದು ಬಾರಿ ಪುನರಾವರ್ತಿಸಿ.

ಕುತ್ತಿಗೆಯನ್ನು ಬಗ್ಗಿಸುವುದು
ದೀರ್ಘ‌ವಾಗಿ ಉಸಿರೆಳೆದುಕೊಂಡು ಮುಂದಕ್ಕೆ ಮುಖವನ್ನು ಬಗ್ಗಿಸಿ. ನಿಮ್ಮ ಗದ್ದ ಎದೆಗೆ ತಾಕುವಷ್ಟು ಬಾಗಿ. ಇದೇ ಭಂಗಿಯಲ್ಲಿ ಕುತ್ತಿಗೆಯನ್ನು ಪಕ್ಕಕ್ಕೆ ಬಾಗಿಸಿ ಭುಜವನ್ನು ಎತ್ತದೇ ಬಲಕಿವಿಯನ್ನು ಬಲಭುಜಕ್ಕೆ ತಾಕಿಸಲು ಯತ್ನಿಸಿ. ಇದೇ ರೀತಿ ಎಡಕಿವಿಯನ್ನು ಎಡಭುಜಕ್ಕೆ ತಾಕಿಸಲು ಯತ್ನಿಸಿ ಬಳಿಕ ಕುತ್ತಿಗೆ ನೆಟ್ಟಗಾಗಿಸಿ ಉಸಿರು ಬಿಡಿ. ಈ ವಿಧಾನವನ್ನು ಐದು ಬಾರಿ ಪುನರಾವರ್ತಿಸಿ.

ನಿಂತು ಕುತ್ತಿಗೆಯನ್ನು ನೀಳವಾಗಿಸುವುದು
ಎರಡೂ ಪಾದಗಳು ಕೊಂಚ ದೂರವಿರುವಂತೆ ಕಾಲುಗಳನ್ನು ಅಗಲಿಸಿ ನಿಂತುಕೊಳ್ಳಿ. ಈಗ ಪೂರ್ಣ ಉಸಿರೆಳೆದುಕೊಂಡು ಬಲಗಿವಿಯನ್ನು ಬಲಭುಜಕ್ಕೆ ತಾಗಿಸಲು ಯತ್ನಿಸಿ. ಇದೇ ರೀತಿ ಎಡಗಿವಿಯನ್ನು ಎಡಭುಜಕ್ಕೆ ತಾಕಿಸಲು ಯತ್ನಿಸಿ. ಈ ಕ್ರಮವನ್ನು ಆರೇಳು ಬಾರಿ ಪುನರಾವರ್ತಿಸಿ. ನೋವು ಉಂಟಾಗಿದ್ದರೆ ಈ ಕ್ರಮದಿಂದ ತಕ್ಷಣವೇ ಕಡಿಮೆಯಾಗುತ್ತದೆ.

ಹಿಂದಕ್ಕೆ ವಾಲಿ ಕುತ್ತಿಗೆಗೆ ಸೆಳೆತ ನೀಡುವುದು
ನಿಂತ ಭಂಗಿಯಲ್ಲಿ ನಿಮ್ಮ ಎರಡೂ ಹಸ್ತಗಳನ್ನು ಬೆನ್ನ ಹಿಂದೆ ತಂದು ಮೊದಲು ಬಲಮಣಿಕಟ್ಟನ್ನು ಎಡಹಸ್ತದಿಂದ ಗಟ್ಟಿಯಾಗಿ ಹಿಡಿದುಕೊಳ್ಳಿ. ಈಗ ನಿಮ್ಮ ಭುಜಗಳು ಕೊಂಚವೇ ಮುಂದಕ್ಕೆ ಬಾಗಿರುತ್ತವೆ. ಈಗ ಬಲಗಿವಿಯನ್ನು ಬಲಭುಜಕ್ಕೆ ತಾಗಿಸಲು ಯತ್ನಿಸಿ ಹಾಗೂ ಎಡಗಿವಿಯನ್ನು ಎಡಕ್ಕೆ ತಾಕಿಸಲು ಯತ್ನಿಸಿ. ಈಗ ಕೈಗಳನ್ನು ಬದಲಾಯಿಸಿ ಇದೇ ಕ್ರಮವನ್ನು ನಾಲ್ಕಾರು ಬಾರಿ ಪುನರಾವರ್ತಿಸಿ. ಈ ಕ್ರಮದಿಂದಲೂ ಕುತ್ತಿಗೆ ನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.

Advertisement

ಕೈಗಳನ್ನು ಹಿಂದೆ ಕಟ್ಟಿಕೊಂಡು ಸೆಳೆತ ನೀಡುವುದು
ಕುರ್ಚಿಯಲ್ಲಿ ಆರಾಮವಾಗಿ ಕುಳಿತು ಎರಡೂ ಕೈಗಳ ಬೆರಳುಗಳನ್ನು ತಲೆಯ ಹಿಂಭಾಗದಲ್ಲಿ ಬೆಸೆಯಿರಿ. ಈಗ ಕೈಗಳಿಂದ ಕುತ್ತಿಗೆಯನ್ನು ಮುಂದಕ್ಕೆ ಬಾಗಿಸಲು ಹಾಗೂ ಕುತ್ತಿಗೆಯನ್ನು ಹಿಂದಕ್ಕೆಳೆದುಕೊಳ್ಳಲು ಯತ್ನಿಸಿ. ಎರಡೂ ಶಕ್ತಿಗಳು ಒಂದಕ್ಕೊಂದು ಸರಿಯಾಗಿರುವಂತೆ ಕೆಲವು ಸೆಕೆಂಡುಗಳ ಕಾಲ ಇರಿ ಬಳಿಕ ಸಡಿಲವಾಗಿಸಿ. ಇದು ತಲೆನೋವು ಬಂದಾಗ ಅನುಸರಿಸಲು ಉಪಯುಕ್ತವಾದ ವ್ಯಾಯಾಮವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next