ನನ್ನ ಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅವರ್ಯಾರೂ ಇರಲಿಲ್ಲ. ಸುಮಾರು 2 ತಿಂಗಳುಗಳ ಕಾಲ ಅಣ್ಣಂದಿರು ನನ್ನ ಬಳಿ ಮಾತಾಡಲಿಲ್ಲ. ನಾನು ಅವರ ನೆನಪಿನಲ್ಲಿ ಅತ್ತಿದ್ದೇ ಅತ್ತಿದ್ದು. ಊಟ ಸೇರಲಿಲ್ಲ, ನೆಮ್ಮದಿಯೂ ಇರಲಿಲ್ಲ. ನಾನು ಸಿಮ್ ಕಾರ್ಡು ತೆಗೆದುಕೊಳ್ಳದಿದ್ದರೇ ಚೆನ್ನಾಗಿತ್ತು ಎನ್ನಿಸಿಬಿಟ್ಟಿತ್ತು…
ಡಿಗ್ರಿ ಮುಗಿಯುವವರೆಗೂ ನಾನು ಮೊಬೈಲ್ ಕೈಲಿ ಹಿಡಿದವಳೇ ಅಲ್ಲ. ಗೆಳತಿಯರ ಕೈಗಳಲ್ಲಿ ಮೊಬೈಲು ನೋಡಿದಾಗಲೆಲ್ಲಾ ನನಗೆ ನಮ್ಮ ಅಣ್ಣಂದಿರ ಮೇಲೆ ತುಂಬಾ ಕೋಪ ಬರುತ್ತಿತ್ತು. ನನಗೆ ಮೊಬೈಲ್ ಸಿಗದೇ ಇರಲು ಅವರೇ ಕಾರಣಕರ್ತರು. ಓದೋ ಹುಡುಗೀರು ಮೊಬೈಲ್ ಬಳಸಿದ್ರೆ ಕೆಟ್ಟು ಹೋಗುತ್ತಾರೆ ಅನ್ನೋದು ಅವರ ಅಭಿಪ್ರಾಯವಾಗಿತ್ತು.
ಅದಕ್ಕೇ ಒಂದು ದಿನ ಉಪಾಯ ಮಾಡಿದೆ. ಗೆಳತಿಯ ಮೊಬೈಲು ಕೇಳಿ ಪಡೆದು ನನ್ನದೇ ಸಿಮ್ ಹಾಕಿ ಬಳಸೋದು ಅಂತ. ಮನೆಯವರಿಗೆ ಗೊತ್ತಾಗದಂತೆ ಸಿಮ್‌ಕಾರ್ಡ್ ತಗೊಂಡಿದ್ದೂ ಆಯ್ತು, ಎಸ್ಸೆಮ್ಮೆಸ್‌ಗಳಲ್ಲಿ ಮುಳುಗಿ ಎದ್ದಿದ್ದೂ ಆಯ್ತು. ಹೀಗೇ ನಡೆಯಿತು ತುಂಬಾ ದಿನ. ಪರೀಕ್ಷೆ ಕಳೆದು ರಜಾದಿನಗಳು ಪ್ರಾರಂಭವಾಗಿದ್ದ ದಿನಗಳವು. ಬೇಜಾರು ಕಳೆಯಲೆಂದು ಸ್ನೇಹಿತನನ್ನು ಮಾತಾಡಿಸಿಕೊಂಡು ಬರೋಣವೆಂದು ಅವನ ಮನೆಗೆ ಹೊರಟೆ. ಹೊರಟವಳು ಸಿಮ್ ಕಾರ್ಡನ್ನು ಮನೆಯಲ್ಲೇ ಬಿಟ್ಟು ಬಂದಿದ್ದೆ. ವಾಪಸ್ ಹಿಂದಿರುವಾಗ ನನ್ನ ಸಿಮ್ ಕಾರ್ಡ್ ಮನೆಯಲ್ಲಿ ಯಾರಿಗೂ ಸಿಕ್ಕದಿರಲಪ್ಪಾ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡೇ ಕಾಲಿಟ್ಟಿದ್ದೆ. ಆದರೆ, ಏನು ಆಗಬಾರದೆಂದುಕೊಂಡಿದ್ದೆನೋ, ಅದಾಗಿ ಹೋಗಿತ್ತು. ಅಣ್ಣನಿಗೆ ನನ್ನ ಸಿಮ್ ಕಾರ್ಡ್ ಸಿಕ್ಕಿಬಿಟ್ಟಿತ್ತು!
ಅಣ್ಣ ನನ್ನ ಸಿಮ್ ಕಾರ್ಡನ್ನು ತನ್ನ ಮೊಬೈಲಿಗೆ ಹಾಕಿ ನೋಡಿದಾಗ ಒಂದು ಶಾಕಿಂಗ್ ಕಾದಿತ್ತು. “ಐ ಲವ್ ಯೂ’ ಎಂದು ಬರೆದ ಎಸ್ಸೆಮ್ಮೆಸ್ ಕಂಡು ಅವನು ಕುಸಿದುಹೋಗಿದ್ದ.
ನಮ್ಮಣ್ಣ ಯಾವತ್ತೂ ಅತ್ತವನೇ ಅಲ್ಲ. ಆದರೆ, ಆ ದಿನ ಎಸ್ಸೆಮ್ಮೆಸ್ ನೋಡಿ ಅತ್ತುಬಿಟ್ಟ. ನಾನು ಮನೆಗೆ ಬಂದಾಗ ಅವನ ಕಣ್ಣಲ್ಲಿ ನೀರಿತ್ತು. ಅವರಿಗೆ ನನ್ನ ಸಿಮ್ ಸಿಕ್ಕಿರಬಹುದೆಂಬ ಅನುಮಾನ ನನ್ನಲ್ಲಿ ಸುಳಿಯಿತು. ಅಣ್ಣನನ್ನು ಮಾತಾಡಿಸಲು ತುಂಬಾ ಭಯ ಆಯ್ತು. ನನ್ನನ್ನು ನೋಡಿದ ತಕ್ಷಣ “ಆ ಎಸ್ಸೆಮ್ಮೆಸ್ ಕಳಿಸಿದ ಹುಡುಗ ಯಾರು? ಯಾರನ್ನ ಇಷ್ಟಪಡ್ತಿದ್ದೀಯಾ?’ ಒಂದೇ ಸಮನೆ ಪ್ರಶ್ನೆಗಳ ಮಳೆ ಸುರಿಸಿದ. ನನ್ನ ಉತ್ತರಕ್ಕೂ ಕಾಯದೆ “ಅದರ ಅವಶ್ಯಕತೆಯಾದರೂ ಏನಿತ್ತು? ಕದ್ದು ಮುಚ್ಚಿ ಮೊಬೈಲ್ ಯೂಸ್ ಮಾಡೋ ಧೈರ್ಯ ಎಲ್ಲಿಂದ ಬಂತು?’ ಎನ್ನುತ್ತಾ ಬೈಯಲು ಶುರುಮಾಡಿದ. ನಾನು ಮೂಲೆಯಲ್ಲಿ ಮುದುರಿ ಕುಳಿತ ಬೆಕ್ಕಿನಂತೆ ತಲೆತಗ್ಗಿಸಿ ನಿಂತೆ.
ಅವನು ಸುಮ್ಮನಾದ ಮೇಲೆ ಮೆತ್ತನೆ ಸ್ವರದಲ್ಲಿ ಹೇಳಿದೆ, “ಆ ಎಸ್ಸೆಮ್ಮೆಸ್ ಕಳಿಸಿದ್ದು ಯಾರು ಅಂತ ನಿಜವಾಗ್ಲೂ ನಂಗೊತ್ತಿಲ್ಲ’. ನನ್ನ ಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅವರ್ಯಾರೂ ಇರಲಿಲ್ಲ. ಸುಮಾರು 2 ತಿಂಗಳುಗಳ ಕಾಲ ಅಣ್ಣಂದಿರು ನನ್ನ ಬಳಿ ಮಾತಾಡಲಿಲ್ಲ. ನಾನು ಅವರ ನೆನಪಿನಲ್ಲಿ ಅತ್ತಿದ್ದೇ ಅತ್ತಿದ್ದು. ಊಟ ಸೇರಲಿಲ್ಲ, ನೆಮ್ಮದಿಯೂ ಇರಲಿಲ್ಲ. ನಾನು ಸಿಮ್ ಕಾರ್ಡು ತೆಗೆದುಕೊಳ್ಳದಿದ್ದರೇ ಚೆನ್ನಾಗಿತ್ತು ಎನ್ನಿಸಿಬಿಟ್ಟಿತ್ತು. ಅದೊಂದು ದಿನ ಅಣ್ಣಂದಿರು ಸೀರೆಯನ್ನು ಉಡುಗೊರೆಯಾಗಿ ಕೊಟ್ಟು ನಗುನಗುತ್ತಾ ಮಾತಾಡಿಸಿ ಕ್ಷಮೆಯಾಚಿಸಿದರು. ಬಹುಶಃ ಅವರಿಗೂ ಅಷ್ಟೊತ್ತಿಗಾಗಲೇ ನಾನು ಹೇಳಿದ್ದು ನಿಜವೆಂದು ತಿಳಿದುಹೋಗಿರಬಹುದು. ಆ ದಿನವನ್ನು ನಾನು ಜನ್ಮದಲ್ಲಿ ಮರೆಯೋದಿಲ್ಲ. ಅದು ರûಾಬಂಧನದ ದಿನ ಅನ್ನೋದು ಕಾಕತಾಳೀಯ!
– ನಿರ್ಮಲ ಟಿ. ಲಕ್ಕಿಹಳ್ಳಿ, ಹೊಸದುರ್ಗ