ಬೆಂಗಳೂರು: ವಕ್ಫ್ ವಿಷಯದ ಜತೆಗೆ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿರುವ ವಿಷಯವನ್ನೂ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ನಡೆಸುವ ಹೋರಾಟಕ್ಕೆ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದ್ದು, ಮುಂಬರುವ ವಿಧಾನ ಮಂಡಲದ ಅಧಿವೇಶನದಲ್ಲೂ ಈ ವಿಚಾರವನ್ನು ಮುನ್ನೆಲೆಗೆ ತರಲಿದೆ.
ವಕ್ಫ್ ವಿಷಯಕ್ಕೆ ಸಂಬಂಧಪಟ್ಟಂತೆ ನ. 21, 22ರಂದು ಎಲ್ಲ ಜಿಲ್ಲೆಗಳಲ್ಲಿ ಹೋರಾಟ ನಡೆಸುವ ಸಂದರ್ಭದಲ್ಲೇ ಬಿಪಿಎಲ್ ಕಾರ್ಡ್ ವಿಷಯವೂ ಪ್ರಸ್ತಾವವಾಗಲಿದೆ. ಆದರೆ ಅಧಿವೇಶನದಲ್ಲಿ ಈ ಅಂಶವನ್ನು ಪ್ರಬಲವಾಗಿ ಪ್ರಯೋಗಿಸುವುದಕ್ಕೆ ಬಿಜೆಪಿ ನಿರ್ಧರಿಸಿದೆ.
ಈ ಸಂಬಂಧ ರಾಜ್ಯ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೆ, ಭ್ರಷ್ಟಾಚಾರದಲ್ಲಿ ಮುಳುಗಿ ಬೊಕ್ಕಸ ಬರಿದಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ 11 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನೇ ರದ್ದು ಮಾಡಿದೆ.
ಮಹಾರಾಷ್ಟ್ರ ಚುನಾವಣೆ ಪ್ರಚಾರಕ್ಕೆ ಹೋಗಿ “ನಾವು ಗ್ಯಾರಂಟಿ ಜಾರಿ ಮಾಡಿದ್ದೇವೆ’ ಎಂದು ಆರ್ಭಟಿಸುವ ಕಾಂಗ್ರೆಸಿಗರು ಪ್ರಚಾರ ಭಾಷಣ ಮುಗಿಸಿ ಮರಳುವ ಹೊತ್ತಿಗೆ ಅನರ್ಹ ಮಾನದಂಡ ಮುಂದಿಟ್ಟು 11 ಲಕ್ಷ ಜನರ ಬಿಪಿಎಲ್ ಕಾರ್ಡ್ ರದ್ದು ಮಾಡುವ ಕುತಂತ್ರ ದೇಶದ ಮುಂದೆ ಬಯಲಾಗಿದೆ ಎಂದು ಟೀಕಿಸಿದ್ದಾರೆ.
ಅನರ್ಹತೆ ಹೆಸರಿನಲ್ಲಿ ನಿಜವಾದ ಬಿಪಿಎಲ್ ಕಾರ್ಡುದಾರರ ಹಕ್ಕನ್ನು ಕಿತ್ತುಕೊಳ್ಳುವುದನ್ನು ಬಿಜೆಪಿ ಖಂಡಿಸುತ್ತದೆ. ಅನರ್ಹರನ್ನು ತಡೆಯುವ ಹೆಸರಿನಲ್ಲಿ ಬಿಪಿಎಲ್ ಕಾರ್ಡುದಾರರನ್ನು ಕಡಿತಗೊಳಿಸಿ ಭಾಗ್ಯ ಯೋಜನೆಗಳಿಗೆ ಹಣ ಹೊಂದಿಸುವ ದುರುದ್ದೇಶ ಇದರ ಹಿಂದೆ ಅಡಗಿದೆ ಎಂಬುದು ರಾಜ್ಯ ಸರಕಾರದ ನೀತಿ ನಿಲುವುಗಳಿಂದ ತಿಳಿದುಬರುತ್ತಿದೆ ಎಂದು ಆರೋಪಿಸಿದ್ದಾರೆ.
ಯಾಕೆ ಹೋರಾಟ?
– ಈಗಾಗಲೇ ವಿವಾದಿತ ವಕ್ಫ್ ನೋಟಿಸ್ ವಿಚಾರದ ಬಗ್ಗೆ ಪ್ರಸ್ತಾವ
– ಪ್ರತಿಭಟನೆ ಸಂದರ್ಭದಲ್ಲಿ ರೈತ ಸಮಸ್ಯೆಗಳನ್ನು ಕೇಳಿ ಸದನದಲ್ಲಿ ಪ್ರಸ್ತಾವ
– ಗ್ಯಾರಂಟಿಗೆ ಹಣ ಹೊಂದಿಸಲಾಗದೆ ಬಿಪಿಎಲ್ ರದ್ದು ಎಂದು ಬಿಂಬಿಸಲು ಯತ್ನ
– 11 ಲಕ್ಷ ಜನರ ಬಿಪಿಎಲ್ ಕಾರ್ಡ್ ರದ್ದು ಮಾಡುವ ಪ್ರಸ್ತಾವದ ಬಗ್ಗೆ ಉಲ್ಲೇಖ
– ರಾಜ್ಯ ಸರಕಾರದ ನೀತಿಗಳನ್ನು ಜನರ ಎದುರಿಡಲು ಮುಂದಾಗಿರುವ ಬಿಜೆಪಿ
– ನವೆಂಬರ್ 21, 22ರಂದು ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿಯಿಂದ ಹೋರಾಟ ತೀವ್ರ