Advertisement

ಸಿಲ್ಕ್ ಬೋರ್ಡ್‌ “ಸಿಗ್ನಲ್‌ಮುಕ್ತ’ಯೋಜನೆ

11:24 AM Jan 13, 2017 | |

ಬೆಂಗಳೂರು: ನಗರದಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ಜಂಕ್ಷನ್‌ ಎಂದು ಹೆಸರಾಗಿರುವ “ಸೆಂಟ್ರಲ್‌ ಸಿಲ್ಕ್ಬೋರ್ಡ್‌ ಜಂಕ್ಷನ್‌’ಅನ್ನು ಸಿಗ್ನಲ್‌ ಮುಕ್ತಗೊಳಿಸಲು ಬಿಎಂಆರ್‌ಸಿಎಲ್‌ ಹಾಗೂ ಬಿಡಿಎ ಮುಂದಾಗಿದ್ದು, ಏಕಕಾಲದಲ್ಲಿ ನಾಲ್ಕೂ ದಿಕ್ಕಿನ ಕಡೆಗೆ ವಾಹನಗಳು ಅಡೆತಡೆ ಇಲ್ಲದೆ ಸಂಚರಿಸುವ ಯೋಜನೆಗೆ ಶೀಘ್ರದಲ್ಲಿಯೇ ಚಾಲನೆ ದೊರೆಯಲಿದೆ.

Advertisement

ಯೋಜನೆಯ ವಿಶೇಷವೆಂದರೆ ಬಿಎಂಆರ್‌ಸಿಎಲ್‌ “ನಮ್ಮ ಮೆಟ್ರೋ 2ನೇ ಹಂತ’ದ ಅಡಿ ಆರ್‌.ವಿ ರಸ್ತೆ-ಬೊಮ್ಮಸಂದ್ರ ಮಾರ್ಗದ ಮೆಟ್ರೋಗಾಗಿ ನಿರ್ಮಿಸಲಿರುವ ನಿಲ್ದಾಣಕ್ಕೆ ಅಂಟಿಕೊಂಡಂತೆ ಸಿಲ್ಕ್ಬೋರ್ಡ್‌ ಜಂಕ್ಷನ್‌ನಲ್ಲಿಯೇ ಮೆಟ್ರೋ 2ನೇ ಎ ಹಂತದ ರೈಲು ನಿಲ್ದಾಣವನ್ನು ನಿರ್ಮಾಣ ಮಾಡಲಾಗುತ್ತದೆ. ಈ ಮೂಲಕ ಆರ್‌ವಿ ರಸ್ತೆ – ಬೊಮ್ಮಸಂದ್ರ ಹಾಗೂ ಸಿಲ್ಕ್ಬೋರ್ಡ್‌ ಜಂಕ್ಷನ್‌- ಎಚ್‌ಎಸ್‌ಆರ್‌ ಬಡಾವಣೆ ಎರಡು ರೈಲು ಮಾರ್ಗಗಳಿಗೆ ಸಿಲ್ಕ್ಬೋರ್ಡ್‌ ಜಂಕ್ಷನ್‌ “ಇಂಟರ್‌ಚೇಂಜ್‌ ನಿಲ್ದಾಣವಾಗಿ’ ಕಾರ್ಯ ನಿರ್ವಹಿಸಲಿದೆ. 

ಒಂದೇ ಪಿಲ್ಲರ್‌ ಎರಡು ಸೇತುವೆ: ಒಟ್ಟು 900 ಕೋಟಿ ವೆಚ್ಚ ಮಾಡಿ ಬಿಎಂಆರ್‌ಸಿಎಲ್‌ ಹಾಗೂ ಬಿಡಿಎ ಸಿಲ್ಕ್ಬೋರ್ಡ್‌ ಜಂಕ್ಷನ್‌ನ್ನು ಸಿಗ್ನಲ್‌ವುುಕ್ತಗೊಳಿಸಲು ಮುಂದಾಗಿದ್ದು, ಯೋಜನೆಯ ಭಾಗವಾಗಿ ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ಕೈಗೆತ್ತುಕೊಂಡಿರುವ ಆರ್‌.ವಿ. ರಸ್ತೆ – ಬೊಮ್ಮಸಂದ್ರ ಮೆಟ್ರೋ ರೈಲು ಮಾರ್ಗದ ಪಿಲ್ಲರ್‌ಗಳಿಗೆ ರಾಗಿಗುಡ್ಡದಿಂದ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ವರೆಗೆ ಮೇಲು ರಸ್ತೆ ನಿರ್ಮಾಣ ಮಾಡಲಾಗುತ್ತದೆ.

ಆರ್‌.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ವರೆಗೆ ಮೆಟ್ರೊ ಪಿಲ್ಲರ್‌ಗಳನ್ನು ಬಳಸಿಕೊಂಡು ಇಂಟರ್‌ಚೇಂಜ್‌ ನಿಲ್ದಾಣದವರೆಗೆ ಎತ್ತರಿಸಿದ ರಸ್ತೆ ನಿರ್ಮಾಣವಾಗಲಿದೆ. ಇದು ನೆಲಮಟ್ಟದ ರಸ್ತೆಯಿಂದ 8 ಮೀಟರ್‌ ಎತ್ತರ ಇರಲಿದೆ. ಮೆಟ್ರೊ ಮಾರ್ಗವು ನೆಲಮಟ್ಟದಿಂದ 16 ಮೀಟರ್‌ ಎತ್ತರ ಇರಲಿದೆ. ಹೀಗೆ ಒಂದೇ ಪಿಲ್ಲರ್‌ನಲ್ಲಿ ಮೇಲು ರಸ್ತೆ ಹಾಗೂ ಮೆಟ್ರೋ ಸೇತುವೆ ಎರಡನ್ನೂ ನಿರ್ಮಿಸುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

ಸಿಗ್ನಲ್‌ವುುಕ್ತ ವ್ಯವಸ್ಥೆ: ಸಿಲ್ಕ್ಬೋರ್ಡ್‌ ಜಂಕ್ಷನ್‌ನಲ್ಲಿ ಮೆಟ್ರೋ ರೈಲು ಮಾರ್ಗ ಹಾಗೂ ಎಲಿವೇಟೆಡ್‌ ರಸ್ತೆಗಳನ್ನು ಸಂಯುಕ್ತಗೊಳಿಸಿ ಜಂಕ್ಷನ್‌ನ್ನು ಸಿಗ್ನಲ್‌ವುುಕ್ತಗೊಳಿಸಲಾಗುವುದು. ಈ ಯೋಜನೆ ಅಂಗವಾಗಿ ರಾಗಿಗುಡ್ಡ, ಬಿಟಿಎಂ ಬಡಾವಣೆ, ಜಯದೇವದ ಮೂಲಕ ಮೆಟ್ರೋ ಕಂಬಗಳಿಗೆ ನಿರ್ಮಾಣವಾಗಲಿರುವ ಎತ್ತರಿಸಿದ ರಸ್ತೆ ಸಿಲ್ಕ್ ಬೋರ್ಡ್‌ ಬಳಿ ಎರಡು ಪಥವಾಗಿ ಮುಂದುವರಿಯಲಿದೆ. ಒಂದು ಪಥ ಎಚ್‌ಎಸ್‌ಆರ್‌ ಲೇಔಟ್‌ ಕಡೆ ಹೋಗಿ ನೆಲಮಟ್ಟದ ರಸ್ತೆಗೆ ಸಂಪರ್ಕ ಕಲ್ಪಿಸಲಿದೆ.

Advertisement

ಮತ್ತೂಂದು ಪಥ ಈಗ ಇರುವ ಮೇಲ್ಸೇತುವೆಯ ಮೇಲೆ ತಿರುವು ಪಡೆದು ಎಚ್‌ಎಸ್‌ಆರ್‌ ಲೇಔಟ್‌ ಬಳಿ ನೆಲಮಟ್ಟದ ರಸ್ತೆಗೆ ಜೋಡಣೆಯಾಗುತ್ತದೆ. ತಿರುವಿನಲ್ಲಿ ಮತ್ತೂಂದು ರಸ್ತೆ ಹೊಸೂರು ರಸ್ತೆ ಕಡೆ ಹೋಗುವ ನೆಲಮಟ್ಟದ ರಸ್ತೆಗೆ ಜೋಡಣೆಯಾಗಲಿದೆ. 3 ಕಿ.ಮೀ. ಉದ್ದದ ಈ ರಸ್ತೆಯನ್ನು ಬಿಡಿಎ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಿದೆ. ಇಂಟರ್‌ಚೇಂಜ್‌ ನಿಲ್ದಾಣ, ರಸ್ತೆ ಹಾಗೂ ಆರ್‌ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದ ಕಾಮಗಾರಿಗೆ ಒಟ್ಟು 900 ಕೋಟಿ ರೂ. ವೆಚ್ಚವಾಗಲಿದೆ ಎಂದು ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

ಸಿಲ್ಕ್ಬೋರ್ಡ್‌ ಜಂಕ್ಷನ್‌ನಲ್ಲಿ  ಮೆಟ್ರೋ ಇಂಟರ್‌ಚೇಂಜ್‌
ಸಿಲ್ಕ್ ಬೋರ್ಡ್‌ ಜಂಕ್ಷನ್‌ ಬಳಿ 4000 ಚ.ಮೀ. ವಿಸ್ತೀರ್ಣದಲ್ಲಿ ಇಂಟರ್‌ಚೇಂಜ್‌ ಮೆಟ್ರೋ ನಿಲ್ದಾಣ ನಿರ್ಮಾಣವಾಗಲಿದೆ. 135 ಮೀಟರ್‌ ಉದ್ದ ಹಾಗೂ ನೆಲಮಟ್ಟದಿಂದ 16.9 ಮೀಟರ್‌ ಎತ್ತರದಲ್ಲಿ ಇರಲಿದ್ದು, ದಿನಕ್ಕೆ 142324 ಪ್ರಯಾಣಿಕರು ಇಲ್ಲಿಂದ ಪ್ರಯಾಣ ಮಾಡಬಹುದು. ಆರ್‌ವಿ ರಸ್ತೆ- ಬೊಮ್ಮಸಂದ್ರ ಹಾಗೂ ಸಿಲ್ಕ್ಬೋರ್ಡ್‌- ಎಚ್‌ಎಸ್‌ಆರ್‌ ಬಡಾವಣೆ ಎರಡು ಮಾರ್ಗಗಳಲ್ಲಿ ಸಂಚರಿಸುವ ಮೆಟ್ರೋ ಪ್ರಯಾಣಿಕರು ಇಲ್ಲಿನ ಇಂಟರ್‌ಚೇಂಜ್‌ ನಿಲ್ದಾಣದಲ್ಲಿ ರೈಲು ಬದಲಿಸಿಕೊಳ್ಳಬಹುದು.

ಇದರಲ್ಲಿ ಮೆಟ್ರೋ ಎರಡನೇ ಹಂತದಲ್ಲಿ ಒಂದು ನಿಲ್ದಾಣದ ನಿರ್ಮಾಣಕ್ಕೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಮತ್ತೂಂದು ನಿಲ್ದಾಣ “ಮೆಟ್ರೋ 2-ಎ’ ಹಂತದಲ್ಲಿ ಬರಲಿದೆ. ನಿಲ್ದಾಣ ನಿರ್ಮಾಣವಾಗಿ ವಾಣಿಜ್ಯ ಸಂಚಾರಕ್ಕೆ ಲಭ್ಯವಾಗಲು ಸುಮಾರು 6 ವರ್ಷ ಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

7200 ಕೋಟಿ ರೂ. ಸಾಲ
ಎರಡನೇ ಹಂತದ ಯೋಜನೆಗೆ ಯುರೋಪಿಯನ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ (ಯುಐಬಿ) ಹಾಗೂ ಏಷ್ಯನ್‌ ಇನ್‌ಫ್ರಾಸ್ಟ್ರಕ್ಚರ್‌ ಇನ್‌ವೆಸ್ಟ್‌ಮೆಂಟ್‌ (ಎಐಇ) ಬ್ಯಾಂಕ್‌ ತಲಾ 3600 ಕೋಟಿ ರೂ. ಸಾಲ ನೀಡಲು ಪ್ರಾಥಮಿಕ  ಒಪ್ಪಿಗೆ ನೀಡಿವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು. 24000 ಕೋಟಿ ರೂ. ವೆಚ್ಚದಲ್ಲಿ ಎರಡನೇ ಹಂತದ ಯೋಜನೆ ಕೈಗೊಳ್ಳಲಾಗಿದೆ. ಇದರಲ್ಲಿ 12,000 ಕೋಟಿ ರೂ. ಮೊತ್ತವನ್ನು ಸಾಲದಿಂದ ಪಡೆಯಲು ತೀರ್ಮಾನಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next