ಹೊ
ಸದಿಲ್ಲಿ : ‘ಭಾರತೀಯ ಸೇನೆ ತನ್ನ ಐತಿಹಾಸಿಕ ಪಾಠಗಳನ್ನು ಕಲಿಯಬೇಕು’ ಎಂದು ಚೀನ ಪ್ರಚೋದನಾತ್ಮಕವಾಗಿ ಹೇಳಿಕೆ ನೀಡಿದ ಒಂದು ದಿನದ ತರುವಾಯ, ಭಾರತದ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರು ಇಂದು ಶುಕ್ರವಾರ “1962ರ ಭಾರತವೇ ಬೇರೆ; 2017ರ ಭಾರತವೇ ಬೇರೆ’ ಎಂದು ಚೀನಕ್ಕೆ ನೇರವಾಗಿ ಹೇಳಿದ್ದಾರೆ.
ಸಿಕ್ಕಿಂ ವಲಯದಲ್ಲಿ ಉಂಟಾಗಿರುವ ಗಡಿ ಬಿಕ್ಕಟ್ಟನ್ನು ಬಗೆ ಹರಿಸಲು ಅರ್ಥಪೂರ್ಣ ಮಾತುಕತೆ ಸಾಧ್ಯವಾಗಬೇಕಿದ್ದರೆ ಭಾರತ ಈ ಪ್ರದೇಶದಲ್ಲಿನ ಸೇನೆಯನ್ನು ಹಿಂದೆಗೆಯಬೇಕು ಮತ್ತು ಐತಿಹಾಸಿಕ ಪಾಠಗಳನ್ನು ಕಲಿತುಕೊಳ್ಳಬೇಕು ಎಂದು 1962ರ ಯುದ್ಧದ ಕಹಿನೆನಪನ್ನು ಚೀನ ಭಾರತಕ್ಕೆ ನೆನಪಿಸಿಕೊಡಲು ಕುಹಕದ ಶೈಲಿಯನ್ನು ಬಳಸಿತ್ತು.
ಚೀನ, ಸಿಕ್ಕಿಂ ವಲಯದಲ್ಲಿನ ವ್ಯೂಹಾತ್ಮಕ ಪ್ರಾಮುಖ್ಯದ ಡೋಂಗ್‌ಲಾಂಗ್‌ನಲ್ಲಿ ರಸ್ತೆಯನ್ನು ನಿರ್ಮಿಸುತ್ತಿರುವುದು ಮತ್ತು ಇಲ್ಲಿಂದ ಭಾರತ ತನ್ನ ಸೇನೆಯನ್ನು ಹಿಂದೆಗೆಯುವಂತೆ ಹೇಳಿರುವುದು ಭಾರತವನ್ನು ಕೆರಳಿಸಿದೆ. ಭೂತಾನ್ ಕೂಡ ಚೀನ ಡೋಂಗ್‌ಲಾಂಗ್‌ನಲ್ಲಿ ರಸ್ತೆ ನಿರ್ಮಿಸಿರುವುದನ್ನು ವಿರೋಧಿಸಿದೆ.
“ಚೀನ ನಮಗೆ 1962ರ ಯುದ್ಧವನ್ನು ನೆನಪಿಸಿಕೊಡಲು ಯತ್ನಿಸುತ್ತಿರುವುದಾದರೆ ನಾವು ಕೂಡ ಅದಕ್ಕೆ ಹೇಳಬಯಸುತ್ತೇವೆ : 1962ರ ಭಾರತವೇ ಬೇರೆ, 2107ರ ಭಾರತವೇ ಬೇರೆ’ ಎಂದು ಯಾವುದೇ ಸುತ್ತು ಬಳಸಿಲ್ಲದೆ ನೇರ ಮಾತುಗಳಲ್ಲಿ ಜೇಟ್ಲಿ ಹೇಳಿದರು.
ಚೀನ ರಸ್ತೆ ನಿರ್ಮಿಸಿರುವ ಡೋಂಗ್ಲಾಂಗ್ ಪ್ರದೇಶವು ಭೂತಾನಿಗೆ ಒಳಪಟ್ಟದ್ದು ಮತ್ತು ಭಾರತದ ವ್ಯೂಹಾತ್ಮಕ ಗಡಿ ಭಾಗದಲ್ಲಿ ಇರುವಂಥದ್ದು. ಈಗ ಭೂತಾನ್ ಈ ರಸ್ತೆಗೆ ಆಕ್ಷೇಪಿಸಿರುವುದರಿಂದ ವಿಷಯ ಏನೆಂಬುದು ಸ್ಪಷ್ಟವಾಗಿದೆ; ಚೀನ ತನ್ನದಲ್ಲದ ಸ್ಥಳದಲ್ಲಿ ರಸ್ತೆಯನ್ನು ನಿರ್ಮಿಸುತ್ತಿದ್ದು ಅದು ಸಂಪೂರ್ಣವಾಗಿ ತಪ್ಪು ಕೆಲಸ’ ಎಂದು ಜೇಟ್ಲಿ ಹೇಳಿದರು.