Advertisement

ಚೀನ ಸರಕಾರದ ವಿರುದ್ಧ ಸೊಲ್ಲೆತ್ತಿದರೆ ಮಾಯಾ

04:54 PM Dec 30, 2024 | Team Udayavani |

ಚೀನ ಸರಕಾರದ ವಿರುದ್ಧ ಸೊಲ್ಲೆತ್ತಿದವರನ್ನು ಸದ್ದಿಲ್ಲದೇ ತೆರೆಮರೆಗೆ ಸರಿಸುವ ಪ್ರಯತ್ನ ಆಗಾಗ ನಡೆಯುತ್ತಲೇ ಇದೆ. ಅಂಥವರು ನಿಗೂಢವಾಗಿ ಕಣ್ಮರೆಯಾಗುವುದು ಇಲ್ಲಿ ಸಾಮಾನ್ಯ. ವಾರದ ಹಿಂದೆಯಷ್ಟೇ ಚೀನ ಸೇನೆಯ ಇಬ್ಬರು ಉನ್ನತ ಅಧಿಕಾರಿಗಳು ಕಣ್ಮರೆಯಾಗಿದ್ದಾರೆ. ಇದಕ್ಕೂ ಕೆಲವು ದಿನಗಳ ಹಿಂದೆ ಸಚಿವರೊಬ್ಬರು ದಿಢೀರನೇ ನಾಪತ್ತೆಯಾಗಿದ್ದರು. ಹೀಗೆ ಕಣ್ಮರೆಯಾಗುವ ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರ ಸೇರಿ ಇತರ ಆರೋಪಗಳನ್ನು ಮಾಡಲಾಗುತ್ತಿದೆಯಾದರೂ ನಿಜವಾದ ಕಾರಣ ಏನು ಎಂಬುದು ಹೊರ ಜಗತ್ತಿಗೆ ಗೊತ್ತಾಗುವುದಿಲ್ಲ. ಚೀನದಲ್ಲಿ ವ್ಯಕ್ತಿಗಳು ನಿಗೂಢವಾಗಿ ಕಣ್ಮರೆಯಾಗುವ ಘಟನೆಗಳ ಹಿನ್ನೆಲೆಯ ಮಾಹಿತಿ ಇಲ್ಲಿದೆ.

Advertisement

ಚೀನ ಎಷ್ಟೇ ಆರ್ಥಿಕವಾಗಿ ಮುಂದುವರಿದರೂ ಆ ದೇಶದ ಆಂತರಿಕ ಬೆಳವಣಿಗೆಗಳು ಇಡೀ ಜಗತ್ತಿಗೆ ನಿಗೂಢವಾಗಿಯೇ ಇರುತ್ತವೆ. ಚೀನದಲ್ಲಿನ ಬೆಳವಣಿಗೆಗಳು ಹೊರ ಜಗತ್ತಿಗೆ ಗೊತ್ತಾಗುವುದು ತೀರಾ ಕಡಿಮೆ. ವಿಶೇಷ ಎಂದರೆ, ಸರ ಕಾ ರದ ವಿರುದ್ಧ ಮಾತನಾಡುವವರು, ವಿರೋಧಿ ಧೋರಣೆ ತಳೆಯುವರು ನಿಗೂಢವಾಗಿ ಕಣ್ಮರೆಯಾಗುತ್ತಾರೆ! ಈ ಸಾಲಿಗೆ ಇತ್ತೀಚೆಗಷ್ಟೇ ಆ ದೇಶದ ರಕ್ಷಣ ಸಚಿವರೂ ಸೇರ್ಪಡೆಯಾಗಿದ್ದಾರೆ.

ಭ್ರಷ್ಟಾಚಾರ, ಅಶಿಸ್ತು, ರಹಸ್ಯ ಮಾಹಿ­ತಿಗಳ ಸೋರಿಕೆ ಇವೇ ಮೊದಲಾದ ಆರೋಪಗಳನ್ನು ಇದಕ್ಕೆ ಸಮರ್ಥನೆಯಾಗಿ ನೀಡಲಾಗುತ್ತಿದೆ. ಚೀನದ ಈ ರಹಸ್ಯ ಕಾರ್ಯತಂತ್ರದ ಮುಂದುವರಿದ ಭಾಗವಾಗಿ ವಾರದ ಹಿಂದೆ­ಯಷ್ಟೇ ಸೇನೆಯ ಇಬ್ಬರು ಉನ್ನತ ಅಧಿಕಾರಿಗಳನ್ನು ವಜಾ­ಗೊಳಿಸಲಾಗಿದೆ. ಸಹಜವಾಗಿಯೇ ಈ ಬೆಳವಣಿಗೆ ಚೀನದ ಸೇನಾ ಪಡೆಗಳನ್ನು ಗೊಂದಲದ ಮಡುವಿಗೆ ತಳ್ಳಿರುವುದೇ ಅಲ್ಲದೆ ಜಾಗತಿಕ ಮಟ್ಟದಲ್ಲಿಯೂ ಈ ಕುರಿತಂತೆ ಚರ್ಚೆಗಳು ತೀವ್ರಗೊಂಡಿವೆ.

ಚೀನದಲ್ಲಿ ಎಲ್ಲವೂ ನಿಗೂಢ!
ಚೀನದ ಹಾಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಅಧಿಕಾರಾವಧಿ ಯಲ್ಲಿ ಅಲ್ಲಿನ ಸೇನಾಪಡೆಗಳಲ್ಲಿ ವಜಾ ಮತ್ತು ಕಣ್ಮರೆ ಕಂಪನಗಳು ಹೆಚ್ಚುತ್ತಿವೆ. 2017ರಲ್ಲಿ ಅಂದಿನ ರಕ್ಷಣ ಸಚಿವರಾಗಿದ್ದ ಲಿ ಶಂಗು# ಅವರ ಪದಚ್ಯುತಿಯಿಂದ ಪ್ರಾರಂಭ­ಗೊಂಡ ಈ ಉಚ್ಚಾಟನೆ ಸರಣಿ ಈಗಲೂ ಮುಂದುವರಿದಿದೆ. ಕ್ಸಿ ಜಿನ್‌ಪಿಂಗ್‌ ಅಧ್ಯಕ್ಷ ಗಾದಿಗೇರುತ್ತಿದ್ದಂತೆ ತನ್ನ ಬೆನ್ನಿಗೆ ನಿಂತಿದ್ದ ಮತ್ತು ಆಪ್ತ ವಲಯದ ಸೇನೆಯ ಹಿರಿಯ ಅಧಿಕಾರಿಗಳನ್ನು ಸೇನೆಯ ಪ್ರಮುಖ ಹುದ್ದೆಗಳಿಗೆ ನೇಮಿಸಿದ್ದರು.

ಈಗ ಅಂತಹ ಅಧಿಕಾರಿಗಳ ವಿರುದ್ಧವೇ ಭ್ರಷ್ಟಾಚಾರ, ಅಶಿಸ್ತಿನ ಆರೋಪ ಹೊರಿಸಿ ಪದಚ್ಯುತಿ ಗೊಳಿಸುತ್ತಿದ್ದಾರೆ! ಇಷ್ಟು ಮಾತ್ರವಲ್ಲ ಹೀಗೆ ಅಧಿ ಕಾ ರ ದಿಂದ ಪದಚ್ಯುತಗೊಂಡ ಸೇನೆಯ ಉನ್ನತ ಅಧಿ­ಕಾರಿಗಳು ಮತ್ತು ರಕ್ಷಣ ಕೈಗಾರಿಕೆಗಳ ಕಾರ್ಯ­ನಿರ್ವಾಹಕರಲ್ಲಿ ಹಲವರು ದಿಢೀರನೆ ಕಣ್ಮರೆಯಾಗುವುದು, ಕೆಲವರು ಆತ್ಮಹತ್ಯೆಗೆ ಶರಣಾಗುವುದು, ಮತ್ತೂಂದಿಷ್ಟು ಮಂದಿ ಕೆಲವು ತಿಂಗಳುಗಳ ಬಳಿಕ ಏಕಾಏಕಿ ಪ್ರತ್ಯಕ್ಷ­ವಾಗು­ವುದು ನಡೆದೇ ಇದೆ.

Advertisement

30 ಸೇನಾಧಿಕಾರಿಗಳಿಗೆ ಗೇಟ್‌ಪಾಸ್‌!
ಒಂದೂವರೆ ವರ್ಷದ ಅವಧಿಯಲ್ಲಿ 30ಕ್ಕೂ ಅಧಿಕ ಸೇನಾಧಿಕಾರಿಗಳು ಸೇನೆ ಮತ್ತು ರಕ್ಷಣ ಇಲಾಖೆಯ ಉನ್ನತ ಹುದ್ದೆಗಳಿಂದ ವಜಾವಾಗಿದ್ದಾರೆ. ಅಲ್ಲದೇ ಸಾಕಷ್ಟು ಜನರು ಕಣ್ಮರೆಯಾಗಿ ದ್ದಾರೆ. ಅಚ್ಚರಿಯ ವಿಷಯವೆಂದರೆ ಹೀಗೆ ಕಣ್ಮರೆಯಾದವರಲ್ಲಿ ಕೇವಲ ಸೇನಾಧಿಕಾರಿಗಳು, ರಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರವಲ್ಲ, ಸಮಾಜದಲ್ಲಿನ ಹಲವು ಗಣ್ಯ ವ್ಯಕ್ತಿಗಳು, ಕೈಗಾರಿಕೋದ್ಯಮಿಗಳು ಕೂಡ ಸೇರಿದ್ದಾರೆ.

ಅಂದು ನಂಬಿಕಸ್ಥರು, ಇಂದು ದ್ರೋಹಿಗಳು
ಚೀನ ಸೇನೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂಬ ಆರೋಪ ಇಂದು-ನಿನ್ನೆಯದಲ್ಲ. ಹೀಗಾಗಿಯೇ ಸೇನೆಯನ್ನು ಭ್ರಷ್ಟಮುಕ್ತಗೊಳಿಸುವ ಭಾಗವಾಗಿ ಸೇನೆಯ ಉನ್ನತ ಅಧಿಕಾರಿಗಳನ್ನು ವಜಾಗೊಳಿಸಲಾಗುತ್ತಿದೆ ಎನ್ನಲಾಗುತ್ತಿದೆ. ಚೀನದ ಕಮ್ಯುನಿಸ್ಟ್‌ ಸರಕಾರದ ನೀತಿಯ ವಿರುದ್ಧ ಸೊಲ್ಲೆತ್ತಿದವರೆಲ್ಲರಿಗೂ ಇದೇ ಪರಿಸ್ಥಿತಿ ಎದುರಾಗುತ್ತದೆ. ದಶಕಗಳಿಂದ ತನಗೆ ನಿಷ್ಠರಾಗಿದ್ದ ಸೇನೆಯ ಉನ್ನತ ಅಧಿಕಾರಿಗಳನ್ನೇ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಟಾರ್ಗೆಟ್‌ ಮಾಡುತ್ತಿದ್ದಾರೆ. 2027ರ ವೇಳೆಗೆ ಚೀನ ಸೇನೆಯನ್ನು ಸಂಪೂರ್ಣ ಆಧುನೀಕರಣಗೊಳಿಸಿ, ಸಮರ ಸನ್ನದ್ಧಗೊಳಿಸಲು ಪಣತೊಟ್ಟಿರುವ ಚೀನ, ಮತ್ತೂ­ಂದೆಡೆ ಸೇನೆಯ ಒಂದೊಂದೇ ಉನ್ನತ ಅಧಿಕಾರಿಗಳಿಗೆ ಮನೆಯ ಹಾದಿ ತೋರಿಸುತ್ತಿರುವುದು ಅಚ್ಚರಿಗೆ ಕಾರಣವಾ­ಗಿದೆ. ಮೇಲ್ನೋಟಕ್ಕೆ ಇದೊಂದು ತನ್ನ ವಿರೋಧಿಗಳನ್ನು ಸದೆ ಬಡಿ ಯುವ,ಆ ಮೂಲಕ ತನ್ನ ಆಡಳಿತದ ವಿರುದ್ಧದ ದನಿಯನ್ನು ದಮನಿಸುವ ಯತ್ನ ಎಂದೇ ಹೇಳಲಾಗುತ್ತಿದ್ದರೂ ಮುಂದಿನ ದಿನಗಳಲ್ಲಿ ಚೀನ ಸೇನೆಯಲ್ಲಿ ಸೃಷ್ಟಿಯಾಗಲಿರುವ ಸುನಾಮಿಯ ಮುನ್ಸೂಚನೆ ಎಂಬ ವಿಶ್ಲೇಷಣೆಯೂ ನಡೆಯುತ್ತಿದೆ.

ಜಿನ್‌ಪಿಂಗ್‌ರನ್ನು ಕಾಡುತ್ತಿದೆಯೇ ಅಭದ್ರತೆ?
2024ರ ನವೆಂಬರ್‌ನಲ್ಲಿ ಕ್ಸಿ ಜಿನ್‌ಪಿಂಗ್‌ ಸೇನೆಯ ಅತ್ಯಂತ ಆಪ್ತ ಹಾಗೂ ಹಲವು ವರ್ಷಗಳ ಆಪ್ತರಲ್ಲಿ ಒಬ್ಬರಾಗಿದ್ದ ಸೆಂಟ್ರಲ್‌ ಮಿಲಿಟರಿ ಕಮಿಷನ್‌ನ ಮಿಯಾವೋ ಹುವಾ ಅವರನ್ನು ನೀತಿ ನಿಯಮಾವಳಿಯ ಉಲ್ಲಂಘನೆಯ ಕಾರಣವಾಗಿ ವಿಚಾರಣೆಗೆ ಗುರಿಪಡಿಸಲಾಗಿತ್ತು. ಈ ಘಟನೆಯೂ ಕ್ಸಿ ಜಿನ್‌ಪಿಂಗ್‌ ಅವರ ಆಡಳಿತ ಹಾಗೂ ಭ್ರಷ್ಟಾಚಾರವನ್ನು ಕೊನೆಗೊಳಿಸುವ, ಆಂತರಿಕ ರಾಜಕೀಯ ಉದ್ವಿಗ್ನತೆಯ ವಿಚಾರದಲ್ಲಿನ ಅವರ ಸಾಮರ್ಥ್ಯದ ಬಗೆಗೆ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಚೀನ ಸೇನೆಯು ಅಮೆರಿಕ ಸೇನೆಗೆ ಸಡ್ಡು ಹೊಡೆಯುವ ಹಾಗೆ ಬೆಳೆಯುತ್ತಿರುವ ಸಮಯದಲ್ಲಿ ಮಿಯಾವೋ ಅವರನ್ನು ತೆಗೆದಿರುವುದು ಯುದ್ಧವನ್ನು ಎದುರಿಸುವ ಸೇನಾಧಿಕಾರಿಗಳ ಸಾಮರ್ಥ್ಯದ ಕುರಿತಂತೆ ಜಿನ್‌ಪಿಂಗ್‌ ಹೊಂದಿರುವ ನಂಬಿಕೆಯನ್ನೇ ಪ್ರಶ್ನಾರ್ಹವನ್ನಾಗಿಸಿತ್ತು. ಇದನ್ನು ಅಲ್ಲಿನ ವಿಶ್ಲೇಷಣಕಾರರು ದೊಡ್ಡ ಸಮಸ್ಯೆಯೆಂದೇ ಬಣ್ಣಿಸಿದ್ದರು. ಸೆಪ್ಟಂಬರ್‌ನಲ್ಲೂ ಸೇನೆಯ ಡೆಪ್ಯುಟಿ ಕಮಾಂಡರ್‌ ಆದ ಡೆಂಗ್‌ ಜಿಪಿಂಗ್‌ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಜೂನ್‌ನಲ್ಲಿ 2017ರಲ್ಲಿ ರಕ್ಷಣ ಸಚಿವ ಸ್ಥಾನದಿಂದ ವಜಾಗೊಳಿಸಲ್ಪಟ್ಟ ಲಿ ಶಂಗೂ# ಹಾಗೂ ವೆಯ್‌ ಫೆಂಗೆc ಅವರನ್ನು ಭ್ರಷ್ಟಾಚಾರ ವಿಚಾರವಾಗಿ ವಿಚಾರಣೆಗೆ ಒಳಪಡಿಸಿದ ಅನಂತರ ಮಾಯವಾಗಿದ್ದರು. ಕಳೆದ ವರ್ಷ ಅಲ್ಲಿನ ವಿದೇಶಾಂಗ ಸಚಿವ ಖೀಂಗ್‌ಗಾಂಗ್‌ ಕೂಡ ಕಾಣೆಯಾಗಿದ್ದರು.

ಕಾಣೆಯಾಗಿದ್ದ ಪ್ರಮುಖರು

1. ಖೀಂಗ್‌ಗಾಂಗ್‌
ಚೀನದ ವಿದೇಶಾಂಗ ಸಚಿವರಾಗಿದ್ದ ಖೀಂಗ್‌ಗಾಂಗ್‌ ಕಳೆದ ವರ್ಷ ಜೂನ್‌ನಲ್ಲಿ ಹಾಂಕಾಂಗ್‌ ಮೂಲದ ಫಿಯೋನಿಕ್ಸ್‌ ಟಿವಿಯ ಆ್ಯಂಕರ್‌ ಫ‌ು ಕ್ಸಿ ಯೋ ಟಿಯಾನ್‌ ನಡೆಸಿಕೊಡುವ ಪ್ರಸಿದ್ಧ ಶೋವೊಂದರಲ್ಲಿ ಭಾಗಿಯಾದ ಬಳಿಕ ಕಣ್ಮರೆಯಾಗಿದರು. ನಿರೂಪಕಿ ಫ‌ು ಕೂಡ ಇದೇ ವೇಳೆ ನಾಪತ್ತೆಯಾದರು.

2. ಹು ಜಿಂಟಾವೋ
ಚೀನದ ಈ ಹಿಂದಿನ ಅಧ್ಯಕ್ಷ ಹು ಜಿಂಟಾವೋ ಅವರನ್ನು ಪಕ್ಷದ ಸಭೆ ನಡೆಯುತ್ತಿದ್ದ ವೇಳೆಯಲ್ಲೇ ದಿಢೀರನೆ ಪೊಲೀಸರ ಸಹಾಯದೊಂದಿಗೆ ಅಪಹರಿಸಲಾಗಿತ್ತು. ಬಳಿಕ ಅವರು ಎಲ್ಲಿದ್ದಾ ರೆ ಎಂಬ ಮಾಹಿತಿಯೇ ಇರಲಿಲ್ಲ. 2022ರ ಡಿಸೆಂಬರ್‌ನಲ್ಲಿ ಒಮ್ಮೆ ಅವರು ಪ್ರತ್ಯಕ್ಷರಾದರು. ಆದರೆ ಅನಂತರ ಅವರು ಬಹಿರಂಗವಾಗಿ ಕಾಣಿಸಿಕೊಂಡೇ ಇಲ್ಲ.

3. ಜಾಕ್‌ ಮಾ
ಚೀನದ ಅತ್ಯಂತ ಯಶಸ್ವಿ ಉದ್ಯಮಿ, ಇ- ಕಾಮರ್ಸ್‌ ಅಲಿಬಾಬಾ ಕಂಪೆನಿ ಸ್ಥಾಪಕ ಜಾಕ್‌ ಮಾ 2020ರ ನವೆಂಬರ್‌ನಲ್ಲಿ ದಿಢೀರನೇ ನಾಪತ್ತೆಯಾದರು. 3 ತಿಂಗಳುಗಳ ಕಾಲ ಇವರು ಯಾರ ಕಣ್ಣಿಗೂ ಕಾಣಿಸಿ ಕೊಂಡಿರಲಿಲ್ಲ. ಚೀನ ಆಡಳಿತವನ್ನು ಟೀಕಿಸಿದ್ದೇ ಅವರ ನಾಪತ್ತೆಗೆ ಕಾರಣ ಎಂದು ಹೇಳಲಾಗುತ್ತದೆ.

4. ಗುವೋ ಗುವಾಂಗಾಂಗ್‌
2015ರಲ್ಲಿ ಫಾಸೂನ್‌ ಇಂಟರ್‌ನ್ಯಾಶನಲ್‌ನಲ್ಲಿ ಅಧ್ಯಕ್ಷರಾದ ಗುವೋ ಗುವಾಂ ಗಾcಂಗ್‌ ಸಹಿತ 5 ಮಂದಿ ಕಣ್ಮರೆ. ಭ್ರಷ್ಟಾಚಾರ ಆರೋಪದ ಮೇಲೆ ಇವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿತ್ತು.

5. ಫ್ಯಾನ್‌ ಬಿಂಗಿಂಗ್‌
2018ರ ಜುಲೈಯಲ್ಲಿ ಮೆಗಾಸ್ಟಾರ್‌ ಫ್ಯಾನ್‌ ಬಿಂಗಿºಂಗ್‌ ಕೂಡ ದಿಢೀರನೇ ನಾಪತ್ತೆಯಾದರು. 1 ವರ್ಷ ಕಾಲ ಈಕೆ ಎಲ್ಲಿಯೂ ಬಹಿರಂಗವಾಗಿ ಕಾಣಿಸಿರಲಿಲ್ಲ. ಅಲ್ಲದೇ ತೆರಿಗೆ ಕಟ್ಟದ ಆರೋಪದ ಮೇಲೆ ಭಾರೀ ಪ್ರಮಾಣದ ದಂಡ ತೆರಬೇಕಾಯಿತು.

6. ಕ್ಸಿ ಜಿನ್‌ಪಿಂಗ್‌
2012ರ ಸೆಪ್ಟಂಬರ್‌ನಲ್ಲಿ ಚೀನದ ಹಾಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಕೂಡ ದಿಢೀರನೇ ನಾಪತ್ತೆಯಾಗಿದ್ದರು. ಆಗ ಇವರು ಚೀನದ ಉಪಾಧ್ಯಕ್ಷರಾಗಿದ್ದರು. ಎರಡು ವಾರಗಳ ಬಳಿಕ ಇವರು ಸಾರ್ವಜನಿಕವಾಗಿ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ಈ ಘಟನೆ ನಡೆದ ಎರಡೇ ತಿಂಗಳಲ್ಲಿ ಚೀನದ ಅಧ್ಯಕ್ಷರಾದರು.

7. ಪೆಂಗ್‌ ಶ್ಯೂಯಿ
ಚೀನದ ಟೆನಿಸ್‌ ಆಟಗಾರ್ತಿಯಾಗಿದ್ದ ಇವರು 2021ರ ನವೆಂಬರ್‌ನಲ್ಲಿ ಮಾಜಿ ಉಪ ಪ್ರಧಾನಿ ಮೇಲೆಯೇ ಲೈಂಗಿಕ ಕಿರುಕುಳದ ಆರೋಪವನ್ನು ಬಹಿರಂಗವಾಗಿ ಮಾಡಿದ್ದರು. ಆದರೆ ಈ ಘಟನೆ ನಡೆದ ಅವರು ದಿಢೀರನೇ ನಾಪತ್ತೆಯಾದರು. ಇದುವರೆಗೆ ಇವರು ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ.

8. ಮೆಂಗ್‌ ಹಾಂಗ್ವೇಯಿ
ಇವರು ಚೀನದ ಮೊದಲ ಇಂಟರ್‌ ಪೋಲ್‌ ಮುಖ್ಯಸ್ಥ. 2018ರ ಸೆಪ್ಟಂಬರ್‌ನಲ್ಲಿ ಫ್ರಾನ್ಸ್‌ನಿಂದ ಚೀನಕ್ಕೆ ಬರುತ್ತಿದ್ದಾಗ ನಾಪತ್ತೆ. ಅನಂತರದಲ್ಲಿ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು ಎಂದು ಚೀನ ಸರಕಾರ ದೃಢಪಡಿಸಿತು.

-ವಿಧಾತ್ರಿ ಭಟ್‌, ಉಪ್ಪುಂದ

Advertisement

Udayavani is now on Telegram. Click here to join our channel and stay updated with the latest news.

Next