Advertisement

ತಾಪಂ ಅಧ್ಯಕ್ಷರಿಗೂ ಇರಲಿ ಸಹಿ ಅಧಿಕಾರ

03:24 PM Jan 24, 2021 | Team Udayavani |

ಕಾರವಾರ: ತಾಲೂಕು ಪಂಚಾಯತ್‌ ಗಳನ್ನು ಮುಚ್ಚಬೇಕು. ಅವು ಹೆಚ್ಚಿನ ಆರ್ಥಿಕ ಹೊರೆಗೆ ಕಾರಣವಾಗಿವೆ ಎಂಬ ಸರ್ಕಾರದ ನಿಲುವು. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ, ರಾಜ್ಯದ ಗ್ರಾಮ ಪಂಚಾಯತ್‌, ತಾ.ಪಂ. ಹಾಗೂ ಜಿ.ಪಂ ಸದಸ್ಯರಿಗೆ ಆಡಳಿತ ತರಬೇತಿ ನೀಡುವ ಅಬ್ದುಲ್‌ ನಜೀರ್‌ ಸಾಬ್‌ ತರಬೇತಿ ಸಂಸ್ಥೆಯಲ್ಲಿ ಚರ್ಚೆಗಳು, ಸಂವಾದಗಳು ಪ್ರಾರಂಭವಾಗಿದೆ.

Advertisement

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಜಾರಿಗೆ ಬಂದಿದ್ದ ಗ್ರಾಪಂ ಮತ್ತು ಜಿಪಂಆಡಳಿತ ವ್ಯವಸ್ಥೆ ಅತ್ಯುತ್ತುಮವಾದುದು ಎಂಬ ಚರ್ಚೆಗಳು ಈಗ ಮತ್ತೆ ಚಾಲ್ತಿಗೆ ಬರುತ್ತಿವೆ.ರಾಜಕೀಯವಾಗಿ ಶಾಸಕರು ತಮ್ಮ ಬೆಂಬಲಿಗರ ಸಂಖ್ಯೆ ಹೆಚ್ಚಿಸಿಕೊಳ್ಳಲು 2 ಗ್ರಾಪಂಗಳಿಗೆ ಓರ್ವ ತಾಪಂ ಸದಸ್ಯರನ್ನು ತಮ್ಮ ರಾಜಕೀಯ ರಕ್ಷಣೆ ಹಾಗೂ ಬೆಂಬಲ ಕಲ್ಪಿಸಲು 3 ಹಂತದ ಆಡಳಿತ ವ್ಯವಸ್ಥೆರೂಪಿಸಲಾಯಿತು. ಇದು ಆಡಳಿತ ಮತ್ತು ಅಭಿವೃದ್ಧಿ ಹಂತದಲ್ಲಿ ಗ್ರಾಪಂ ಸದಸ್ಯರು ಹಾಗೂ ತಾ.ಪಂ ಸದಸ್ಯರ ನಡುವೆ ಅನೇಕ ಭಿನ್ನಮತ ಸೃಷ್ಟಿಸಿ ಅಭಿವೃದ್ಧಿಗೆ ಅಡ್ಡಗಾಲಾಯಿತು. ಶಾಸಕರು ಮತ್ತು ಜಿಪಂ ಸದಸ್ಯರ ನಡುವಿನ ತಿಕ್ಕಾಟ ಮತ್ತೂಂದು ಹಂತದ್ದು. ಗ್ರಾಮಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಕಣ್ಗಾವಲಾಗಿ ಇರಲಿ ಎಂದು ಬಯಸಿ ತಂದ ವ್ಯವಸ್ಥೆ ಅನೇಕಸಲ, ಅನೇಕ ಗ್ರಾಮಗಳ ಅಭಿವೃದ್ಧಿಗೆ ತೊಡಕಾದ ಕಾರಣ ತಾಪಂಗಳ ಅಧಿಕಾರ ಕಿತ್ತುಕೊಳ್ಳಲಾಯಿತು.

ಅನುದಾನ ಕಡಿಮೆ ಮಾಡಿ, ತಾಪಂ ಅಧ್ಯಕ್ಷರ ಅಧಿಕಾರ ಮೊಟಕು ಮಾಡಲಾಯಿತು. ಅವರನ್ನು ಕೇವಲ ಗ್ರಾಪಂ ಹಾಗೂ ಜಿಪಂ ನಡುವೆ ಪೋಸ್ಟಮನ್‌ ಕೆಲಸದ ಮಟ್ಟಕ್ಕೆ ಅಧಿಕಾರ ಇಳಿಸಲಾಯಿತು. ಈಗ ಕೆಲ ತಾಪಂ ಸದಸ್ಯರು ಈ ಸ್ಥಿತಿಯಲ್ಲಿ ತಾಲೂಕು ವ್ಯವಸ್ಥೆ ಇಡುವ ಬದಲು ತಾಪಂ ಮುಚ್ಚಿಬಿಡಿ. ಇಲ್ಲವೇà ಹೆಚ್ಚಿನಅನುದಾನ, ಅಧಿಕಾರ ಕೊಡಿ ಎಂಬ ಕೂಗು ಕೇಳಿ ಬರತೊಡಗಿದೆ.

ವಾರ್ಷಿಕ ಕೋಟಿ ಅನುದಾನದಲ್ಲಿ 86 ಲಕ್ಷ ಲ್ಯಾಪ್ಸ್‌: ಕಾರವಾರ ತಾಪಂನಲ್ಲಿ ನರೇಗಾ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆರೆ ಹೂಳೆತ್ತುವ, ಶೌಚಾಲಯ, ಶಾಲಾ ಕಂಪೌಂಡು, ಶಾಲಾ ರಿಪೇರಿ, ಅಂಗನವಾಡಿ ರಿಪೇರಿಯಂತಹ ಕೆಲಸಗಳನ್ನು ಮಾಡಲಾಗಿದೆ. ಕೆಲವೆಡೆ ರಸ್ತೆ, ಸಣ್ಣಪುಟ್ಟ ಸೇತುವೆ ಕಾಮಗಾರಿಗಳು ನಡೆದಿವೆ. ನರೇಗಾದಲ್ಲಿದ್ದ ಮಹಿಳಾ ಅಧಿಕಾರಿ, ಸಹಾಯಕ ನಿರ್ದೇಶಕಿ ರೂಪ, ಅತ್ಯುತ್ತಮ ಕಾರ್ಯ ನಿರ್ವಹಿಸಿ, ಗ್ರಾಮೀಣ ಭಾಗದ ಜನತೆಗೆ ಉದ್ಯೋಗ ಕಲ್ಪಿಸಿದರು. ಎಂಜಿನಿಯರ್‌ ಚಂದ್ರು ಗೌಡರಕಾಳಜಿಯಿಂದ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ. ಉಳಗಾ ಗ್ರಾಮದ ಕೆರೆಯೂ ಹೂಳಿನಿಂದ ಮುಕ್ತವಾಗಿ, ಮಳೆಗಾಲದಲ್ಲಿ ತುಂಬಿಕೊಂಡಿತು. ಅಂತರ್ಜಲ ಮಟ್ಟವೂ ಹೆಚ್ಚಿತು. ಅಧ್ಯಕ್ಷೆ ಪ್ರಮಿಳಾ ನಾಯ್ಕ ರಾಜಕೀಯಕ್ಕೆ ಬರುವ ಮುನ್ನ ಸಾಮಾಜಿಕ ಕಾರ್ಯಕರ್ತೆಯಾಗಿ, ಅಂಗನವಾಡಿ ಕಾರ್ಯಕರ್ತೆಯಾಗಿ, ಬ್ಯಾಂಕ್‌ ಪ್ರತಿನಿಧಿಯಾಗಿ ಕೆಲಸ ಮಾಡಿದ ಅನುಭವದಿಂದಾಗಿ, ಜನರ ಮನವೊಲಿಸಿ, ಗ್ರಾಪಂ ಸದಸ್ಯರನ್ನು ವಿಶ್ವಾಸಕ್ಕೆತೆಗದುಕೊಂಡು ಗ್ರಾಮಗಳಿಗೆ ಅಗತ್ಯ ಕೆಲಸಗಳನ್ನು 5 ವರ್ಷದಲ್ಲಿ ಮಾಡಿರುವುದು ವಿಶೇಷ. 3 ಸರ್ಕಾರಿ ಪ್ರೌಢಶಾಲೆಗಳಿಗೆ ಸ್ಮಾರ್ಟ್‌ಕ್ಲಾಸ್‌ ವ್ಯವಸ್ಥೆ, ಶಾಲಾ ಕೊಠಡಿ ನಿರ್ಮಿಸಿಕೊಟ್ಟಿದ್ದಾರೆ.

ಇದನ್ನೂ ಓದಿ:ವಳಗೆರೆಹಳ್ಳಿಯಲ್ಲಿ ಮೂಲ ಸೌಲಭ್ಯ ಮರೀಚಿಕೆ : ಸರ್ಕಾರಿ ಸೌಲಭ್ಯ ಸಮರ್ಪಕ ಬಳಕೆಗೆ ವಿಫ‌ಲ

Advertisement

ಆದರೆ ಕೋವಿಡ್‌ 2020 ಮಾರ್ಚ್‌ನಲ್ಲಿ ಕಾಣಿಸಿಕೊಂಡ ಪರಿಣಾಮ ಮಾರ್ಚ್‌ ಅಂತ್ಯಕ್ಕೆ 11 ದಿನ ಮೊದಲು ಟ್ರಜರಿ ತನ್ನ ಕಾರ್ಯ ಅಂತಿಮ ಮಾಡಿತು. ಕಾರವಾರ ತಾಪಂಗೆ ಬರುವ 1 ಕೋಟಿ ರೂ. ಅನುದಾನದಲ್ಲಿ ವಾಪಸ್‌ ಹೋಗಿತ್ತು. ಅಲ್ಲದೇ ಇದೇ ಸಮಯದಲ್ಲಿ 50 ಲಕ್ಷ ರೂ. ಕಾಮಗಾರಿಗಳು ಆರಂಭವಾಗಿ ಬಿಟ್ಟಿದ್ದವು. ಗುತ್ತಿಗೆದಾರರು ಮಾಡಿದ ಕೆಲಸಕ್ಕೆ ಅನುದಾನ ಪಡೆಯಲು ಕಷ್ಟಪಡಬೇಕಾಯಿತು. ಅಂತೂ ಇಂತೂ ಕೋವಿಡ್‌ ಕಡಿಮೆಯಾಗುತ್ತಿದ್ದಂತೆ, ಪತ್ರ ವಹಿವಾಟು ಮಾಡಿ, ಮಾಡಿದ ಕೆಲಸಗಳಿಗೆ ಅರ್ದದಷ್ಟು ಅನುದಾನ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ತಾ.ಪಂ ಅಧ್ಯಕ್ಷರು. ಇನ್ನು ಮುಂದುವರಿದ ಕಾಮಗಾರಿಗಳಿಗೆ ಅನುದಾನ ಪಡೆಯುವ ಯತ್ನ ನಡೆದಿದೆ. ತಾ.ಪಂ.ಗೆ ವಾರ್ಷಿಕ ಅನುದಾನ 1 ಕೋಟಿ. ಇರುವ ಹನ್ನೊಂದು ಸದಸ್ಯರ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಹಂಚಿಕೆ ಮಾಡಬೇಕು. ಇದು ತುಂಬಾಕಷ್ಟ. ತಾಪಂ ಈಗಿನ ಕಟ್ಟಡದ ಮೇಲೆ ಮೊದಲ ಮಹಡಿ ನಿರ್ಮಿಸಲಾಗಿದ್ದರೂ, ಅದು ಪೂರ್ಣವಾಗಿಲ್ಲ. ಎಲ್ಲಾ ಸದಸ್ಯರ ಅನುದಾನದಿಂದ ಸ್ವಲ್ಪಸ್ವಲ್ಪ ಹಣ ಹಾಕಿ ಮೊದಲ ಮಹಡಿಯ ಪ್ಲಾಸ್ಟರಿಂಗ್‌ ಮುಗಿದಿದೆ. ಆದರೆ ಅದು ಪೂರ್ಣವಾಗಿ ಕಾಮಗಾರಿ ಮಾಡಿ ಮುಗಿಸಲು ಅನುದಾನದ ಕೊರತೆ ಎದುರಾಗಿದೆ. ಅಧಿಕಾರದ ಅವಧಿಯ 5 ವರ್ಷದಲ್ಲಿ ಜನರ ಬೇಕು ಬೇಡಿಕೆಗಳನ್ನು, ಪೂರ್ಣಪ್ರಮಾಣದಲ್ಲಿ ಮಾಡಲಾಗಿಲ್ಲ. ಆದರೂ ಸಮಾಧಾನಕರವಾಗಿ ಕೆಲಸ ಮಾಡಿದ ತೃಪ್ತಿ ಇದೆ ಎಂಬುದು ಅಧ್ಯಕ್ಷೆ ಪ್ರಮಿಳಾ ನಾಯ್ಕರ ಮಾತು.

ನಾಗರಾಜ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next