Advertisement

ಜಾನುವಾರುಗಳೊಂದಿಗೆ ನಾಡಕಚೇರಿಗೆ ಮುತ್ತಿಗೆ

02:32 PM Aug 04, 2017 | Team Udayavani |

ನಾಯಕನಹಟ್ಟಿ: ಗೋಶಾಲೆಗೆ ಮೇವು ಪೂರೈಸುವಂತೆ ಒತ್ತಾಯಿಸಿ ರೈತರು ತಮ್ಮ ರಾಸುಗಳ ಸಮೇತ ತುರುವನೂರು ನಾಡಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

Advertisement

ರೈತ ಕೂನಬೇವು ಶಿವಣ್ಣ ಮಾತನಾಡಿ, ತುರುವನೂರು ಗೋಶಾಲೆಯಲ್ಲಿ ಕಳೆದ ಐದು ದಿನಗಳಿಂದ ಮೇವು ಪೂರೈಕೆಯಾಗಿಲ್ಲ. ಎಂಟು ತಿಂಗಳಿನಿಂದ ಗೋಶಾಲೆಯನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಆದರೆ ಮಳೆ ವಿಫಲವಾಗಿರುವ ಈ ಸಮಯದಲ್ಲಿ ಗೋಶಾಲೆಯನ್ನು ಮುಂದುವರಿಸಬೇಕು. ಕಂದಾಯ ಇಲಾಖೆ ಸಿಬ್ಬಂದಿ ಜು.25ರಂದು ಮೇವು ಪೂರೈಕೆ ಮಾಡಿದ್ದರು. ಮೂರು ದಿನಗಳ ನಂತರ ಜು. 29ರಂದು ಪೂರೈಕೆಯಾಗಿದೆ. ಇಲ್ಲಿಯವರೆಗೆ ಮೇವು ಪೂರೈಕೆಯಾಗಿಲ್ಲ. 12 ಸಾವಿರಕ್ಕೇರಿದ್ದ ಇಲ್ಲಿನ ರಾಸುಗಳು ಸಂಖ್ಯೆ ಇದೀಗ ಮೇವು ಪೂರೈಕೆ ಸಮಸ್ಯೆಯಿಂದ 4 ಸಾವಿರಕ್ಕೆ ಇಳಿದಿದೆ. ಆದರೆ ಇದೀಗ ಮೇವಿನ ಸಮಸ್ಯೆ ಉಂಟಾಗಿದೆ. ಒಂದೆಡೆ ರೈತರಲ್ಲಿ ಮೇವಿನ ದಾಸ್ತಾನು ಇಲ್ಲ. ಮತ್ತೂಂದೆಡೆ ಗೋಶಾಲೆಯಲ್ಲಿ ಮೇವಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ರೈತರು ರಾಸುಗಳನ್ನು ಕಟುಕರಿಗೆ ಮಾರಾಟ ಮಾಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ರೈತ ಮಹಿಳೆ ಸರೋಜಮ್ಮ ಮಾತನಾಡಿ, ಗೋಶಾಲೆ ಆರಂಭವಾದಾಗಿನಿಂದ ರಾಸುಗಳನ್ನು ಸಾಕಿಕೊಂಡು ಇಲ್ಲಿಯೇ ವಾಸವಾಗಿದ್ದೇವೆ. ಆದರೆ ಈಗ ಹೊಲ ಹಾಗೂ ಮನೆಗಳಲ್ಲಿ ಮೇವಿನ ದಾಸ್ತಾನು ಇಲ್ಲ. ಗೋಶಾಲೆ ಮುಚ್ಚಿದರೆ ರಾಸುಗಳನ್ನು ಸಾಕುವುದು ಕಷ್ಟವಾಗುತ್ತದೆ. ಆದ್ದರಿಂದ ತಕ್ಷಣ ಮೇವು ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.

ಕಚೇರಿ ಪ್ರವೇಶಕ್ಕೆ ಅವಕಾಶ ನೀಡದ ಪ್ರತಿಭಟನಾಕಾರರು ಮೇವು ಪೂರೈಕೆ ಬಗ್ಗೆ ಸ್ಪಷ್ಟವಾಗಿ ತಿಳಿಸುವವರೆಗೆ ಸಿಬ್ಬಂದಿಗೆ ಕಚೇರಿ ಒಳಹೋಗುವುದಕ್ಕೆ ಪ್ರತಿಭಟನಾಕಾರರು ಅವಕಾಶ ನೀಡಲಿಲ್ಲ. ಇದರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಿಬ್ಬಂದಿ ರೈತರೊಂದಿಗೆ ಹೊರಗೆ ನಿಲ್ಲಬೇಕಾಯಿತು. ರೈತರು
ಗೋಶಾಲೆಯಲ್ಲಿದ್ದ ಎಮ್ಮೆ, ದನ ಕರುಗಳನ್ನು ನಾಡಕಚೇರಿ ಮುಂಭಾಗದಲ್ಲಿ ಜಮಾವಣೆ ಮಾಡಿದರು. ಚಿತ್ರದುರ್ಗ ತಹಶೀಲ್ದಾರ್‌ ಮಲ್ಲಿಕಾರ್ಜುನಪ್ಪ ಶೀಘ್ರದಲ್ಲಿ ಮೇವು ಸರಬರಾಜು ಮಾಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next