Advertisement

Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ

03:14 PM Dec 21, 2024 | Team Udayavani |

ಕುಂದಾಪುರ: ಎಲ್‌ಕೆಜಿ- ಯುಕೆಜಿ, ಬೇಬಿ ಸಿಟ್ಟಿಂಗ್‌, ಕಿಂಡರ್‌ ಕಾರ್ಟನ್‌ನಂತಹ ಹೈಟೆಕ್‌ ಶಿಕ್ಷಣ ವ್ಯವಸ್ಥೆಗಳ ನಡುವೆ ಅಂಗನವಾಡಿ ಕೇಂದ್ರಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇಲ್ಲೊಂದು ಅಂಗನವಾಡಿ ಕೇಂದ್ರ ಮಾತ್ರ ಈ ಹೈಟೆಕ್‌ ಶಿಕ್ಷಣ ಸಂಸ್ಥೆಗಳಿಗೆ ಸಡ್ಡು ಹೊಡೆಯುವಂತಿದೆ.

Advertisement

ಬೈಂದೂರು ತಾಲೂಕಿನ ಕುಗ್ರಾಮವಾದ ಕಾಲ್ತೋಡಿನ ಅಂಗನವಾಡಿ ಕೇಂದ್ರವು ಪುಟಾಣಿಗಳ ಕಲಿಕೆಗೆ ಅಗತ್ಯವಾದ ಸಾಮಗ್ರಿಗಳು, ಎಲ್ಲ ಬಗೆಯ ಪಾಠೊಪಕರಣಗಳು, ಆಟಿಕೆಗಳು, ಬಣ್ಣ-ಬಣ್ಣದ ಚಾರ್ಟ್‌ ಮೇಲೆ ಬರಹ, ಶಿಕ್ಷಕಿ, ಮಕ್ಕಳು ಬಿಡಿಸಿರುವ ಚಿತ್ರಗಳು, ಗೋಡೆ ಬರಹ ಹೀಗೆ ವಿಭಿನ್ನವಾಗಿದೆ. ಕಾಲ್ತೋಡು ಗ್ರಾ.ಪಂ. ಕಚೇರಿಯ ಪಕ್ಕದಲ್ಲಿಯೇ ಈ ಅಂಗನವಾಡಿ ಕೇಂದ್ರವಿದ್ದು, ಇಲ್ಲಿನ ಶಿಕ್ಷಕಿ ಸುಮಾ ಪೂಜಾರಿ ಅವರು ತಮ್ಮ ಅವಿರತವಾದ ಪರಿಶ್ರಮ, ಸಹಾಯಕಿ ಶ್ರೀದೇವಿ ಅವರ ಕಾಳಜಿ ಇದರ ಹಿಂದಿದೆ.

ಕಸವನ್ನೇ ಬಳಸಿ ಕಲಾಕೃತಿಗಳ ರಚನೆ: ಸಮುದ್ರದಲ್ಲಿ ಸಿಗುವ ಕಲ್ಲು, ಚಿಪ್ಪುಗಳಿಗೆ ಬಣ್ಣ ಬಳಿದು ಕೇಂದ್ರದಲ್ಲಿ ಸುಂದರವಾಗಿ ಜೋಡಿಸಲಾಗಿದೆ. ಮೊಟ್ಟೆ ಗೂಡಿ ನಿಂದ ಮೊಲ, ಬಾಟಲಿ ಮುಚ್ಚಳ, ಜ್ಯೂಸ್‌ ಬಾಟಲಿಯಿಂದ ಹೂವು ರಚಿಸಿ ತೋರಣ ಮಾಡಲಾಗಿದೆ. ಸ್ಪಾಂಜಿನಿಂದ ಗೊಂಬೆ, ಬೆಂಕಿ ಕಡ್ಡಿಯಿಂದ ಹೂವು, ತಯಾರಿ, ಬಾಟಲಿ ಮುಚ್ಚಳದಿಂದ ಕಲಾಕೃತಿಗಳನ್ನು ರಚಿಸಲಾಗಿದೆ.

ವಾರಕ್ಕೊಂದು ವಿಷಯ ಕಲಿಕೆಗೆ ಆದ್ಯತೆ
ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಯ ಭಾಗವಾಗಿ ಪುಟಾಣಿಗಳಿಗೆ ಪ್ರತೀ ತಿಂಗಳು ವಾರಕ್ಕೊಂದು ವಿಷಯಗಳನ್ನು ಕಲಿಸಲು ಆದ್ಯತೆ ನೀಡಲಾಗುತ್ತಿದೆ. ಜನವರಿಯಲ್ಲಿ ಬಣ್ಣಗಳು, ಶಾಲೆ- ಆಸ್ಪತ್ರೆ, ಸೌಕರ್ಯ, ಕಾಡುಪ್ರಾಣಿ – ಸಾಕು ಪ್ರಾಣಿ, ಫೆಬ್ರವರಿಯಲ್ಲಿ ವೇಳೆ- ಋತು, ವಾರಗಳು- ಮಾಸಗಳು, ಸೂರ್ಯ-ಚಂದ್ರ-ನಕ್ಷತ್ರ, ದಿಕ್ಕುಗಳು, ಮಾರ್ಚ್‌ನಲ್ಲಿ ಹಬ್ಬಗಳು, ಪೂಜಾ ಸ್ಥಳ, ಸಂತೆ-ಜಾತ್ರೆ, ನಾಣ್ಯ-ನೋಟುಗಳು, ಎಪ್ರಿಲ್‌ನಲ್ಲಿ ವಾಹನ, ಸಂಪರ್ಕ ಸಾಧನಗಳು, ಅಂಚೆ-ದೂರವಾಣಿ- ಮೊಬೈಲ್‌, ಮೇನಲ್ಲಿ ಸಂಗೀತ ವಾದ್ಯ, ಆಟ, ಜೂನ್‌ನಲ್ಲಿ ದೇಹದ ಅಂಗಾಂಗಗಳು, ಗಾಳಿ-ಬೆಳಕು, ನಮ್ಮ ಆಹಾರ-ನೀರು, ವೈಯಕ್ತಿಕ ಸ್ವತ್ಛತೆ ಹೀಗೆ ಪ್ರತೀ ವಾರ ಒಂದೊಂದು ವಿಷಯದ ಬಗ್ಗೆ ಚಿಣ್ಣರಿಗೆ ಕಲಾಕೃತಿ, ಚಿತ್ರಗಳೊಂದಿಗೆ ಕಲಿಸಲಾಗುತ್ತಿದೆ.

Advertisement

ಶಿಕ್ಷಕಿಯಿಂದಲೇ ಗೋಡೆ ಸಿಂಗಾರ
ಈ ಅಂಗನವಾಡಿ ಕೇಂದ್ರವು ಶಾಲೆಗಳಲ್ಲಿರುವ ನಲಿ-ಕಲಿ ಕೊಠಡಿಯಂತೆ ಸಿಂಗಾರಗೊಂಡಿದೆ. ಗೋಡೆಯ ಮೇಲೆ ಮಕ್ಕಳ ಕಲಿಕೆಗೆ ಸಹಕಾರಿಯಾಗುವಂತೆ ಕಾಡು, ಆನೆ, ಹುಲಿ, ಚಿರತೆ, ಮಂಗಳ, ಪ್ರಾಣಿ- ಪಕ್ಷಿಗಳ ಚಿತ್ರ, ಗೊಂಬೆಗಳ ಚಿತ್ರಗಳನ್ನು ಈ ಅಂಗನವಾಡಿ ಶಿಕ್ಷಕಿ ಸುಮಾ ಅವರೇ ಬಿಡಿಸಿದ್ದಾರೆ. ಸುಮಾ ಅವರು ಇಲ್ಲಿ 28 ವರ್ಷಗಳಿಂದ ಶಿಕ್ಷಕಿಯಾಗಿದ್ದಾರೆ. ಅಂಗನವಾಡಿ ಕೇಂದ್ರದಲ್ಲಿ 26 ಮಕ್ಕಳಿದ್ದಾರೆ.

ಇಷ್ಟಪಟ್ಟು ಕಲಿಯುತ್ತಾರೆ
ನನಗೆ ಮೊದಲಿನಿಂದಲೂ ಮಕ್ಕಳಿಗೆ ಕ್ರಿಯಾತ್ಮಕವಾಗಿ ಪಾಠ ಮಾಡುವ ಮೂಲಕ ಬೇಗ ಅರ್ಥ ಮಾಡಿಸಬೇಕು ಅನ್ನುವ ಆಸಕ್ತಿಯಿತ್ತು. ಅದು ಈಗ ಸಾಕಾರಗೊಂಡಿದೆ. ಮಕ್ಕಳು ತುಂಬಾ ಇಷ್ಟಪಟ್ಟು ಕಲಿಯುತ್ತಾರೆ.ಎಲ್ಲ ಕಾರ್ಯಗಳಿಗೂ ಗ್ರಾ.ಪಂ., ಪೋಷಕರು, ಊರವರು, ದಾನಿಗಳು ನೆರವಾಗಿದ್ದಾರೆ.
-ಸುಮಾ ಪೂಜಾರಿ, ಅಂಗನವಾಡಿ ಶಿಕ್ಷಕಿ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next