ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸೋಂಕಿನ ನಿರ್ವಹಣೆ ಸರಿಯಾಗಿ ನಡೆದಿಲ್ಲ, ರಾಜ್ಯದ ಆಡಳಿತ ನೇತೃತ್ವದ ಬದಲಾಗಬೇಕು ಎಂಬ ಮಾತುಗಳ ಕೆಲವು ತಿಂಗಳುಗಿಳಿಂದ ರಾಜ್ಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆಯಾದರೂ, ಕೆಲವು ದಿನಗಳಿಂದ ಅದು ತಾರಕಕ್ಕೇರಿದೆ.
ನಾಯಕತ್ವದ ಬದಲಾವಣೆಯ ವಿಚಾರ ಹೈಕಮಾಂಡ್ ಗೆ ಕೂಡ ತಲುಪಿದ್ದು, ರಾಜ್ಯ ಬಿಜೆಪಿಯ ಸ್ಥಿತಿ ವಲಸೆ ವರ್ಸಸ್ ಮೂಲ ನಿವಾಸಿಗಳು ಎಂಬಂತಾಗಿದೆ.
ಇದನ್ನೂ ಓದಿ : ಯಡಮೊಗೆ ಉದಯ ಗಾಣಿಗ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಪ್ರಯತ್ನ ಮುಂದುವರಿಕೆ : ಗೋಪಾಲ ಪೂಜಾರಿ
ಆಡಳಿತ ಪಕ್ಷ ಬಿಜೆಪಿಯಲ್ಲಿ ಭಿನ್ನಮತ ಸ್ಪಷ್ಟವಾಗಿ ಕಾಣಿಸುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಕುತೂಹಲ ಹುಟ್ಟಿಸಿದೆ. ಈಗ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಈ ಒಳ ವೈಮನಸ್ಸನ್ನು ನಿವಾರಿಸಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪಕ್ಷಾಂತರಿಗಳ ಅನೈತಿಕ ಬಲದಿಂದ ಬಂದ ಅಧಿಕಾರವನ್ನು ಅನುಭವಿಸುತ್ತಿರುವ ಬಿಜೆಪಿ ಪಕ್ಷದ ಮೂಲ ನಿವಾಸಿ ನಾಯಕರು ಈಗ ಅವರ ವಿರುದ್ಧವೇ ತಿರುಗಿ ಬಿದ್ದಿರುವುದು ಪ್ರಕೃತಿಯ ಸಹಜ ನ್ಯಾಯವೇ ಸರಿ ಎಂದು ಪಕ್ಷಾಂತರಿಗಳನ್ನು ಪರೋಕ್ಷವಾಗಿ ಕುಟುಕಿದ್ದಾರೆ.
ಈಗಲೂ ಕಾಲ ಮಿಂಚಿಲ್ಲ ಇಂತಹ ಅನೈತಿಕ ಬೆಂಬಲ ಬೇಡವೆಂದಾದರೆ ಪಕ್ಷಾಂತರಿಗಳನ್ನು ಕಿತ್ತು ಹಾಕಿ, ಯಾಕೆ ಗೋಳಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು, ಕೋವಿಡ್ ವಿರುದ್ಧ ನಿರ್ಣಾಯಕ ಹೋರಾಟ ನಡೆಸಲು ರಾಜ್ಯಕ್ಕೆ ಸುಭದ್ರ ಸರ್ಕಾರದ ಅಗತ್ಯವಿದೆ. ಯಡಿಯೂರಪ್ಪ ಅವರನ್ನು ಇಟ್ಟುಕೊಳ್ತೀರಾ..? ಕಿತ್ತು ಹಾಕ್ತೀರಾ..? ಇದು ಬಿಜೆಪಿಗೆ ಸಂಬಂಧಿಸಿದ ವಿಚಾರ. ಶೀಘ್ರ ನಿರ್ಧಾರಕ್ಕೆ ಬಂದು ರಾಜ್ಯಕ್ಕೆ ಒಂದು ಸುಭದ್ರವಾದ ಸರ್ಕಾರ ಕೊಡಿ ಇಲ್ಲದಿದ್ದರೇ ರಾಜಿನಾಮೆ ಕೊಟ್ಟು ತೊಲಗಿಹೋಗಿ ಎಂದು ಅವರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ಪ್ರಫುಲ್ ಪಟೇಲ್ ಭ್ರಷ್ಟಾಚಾರದ ಆರೋಪ : ಪ್ರಧಾನ ಮಂತ್ರಿಯವರಿಗೆ ದೂರು.!