Advertisement

ಮೈಸೂರು: ಇತ್ತೀಚಿನವರೆಗೂ ಅವರಿಬ್ಬರೂ ಆಪ್ತರಾಗಿದ್ದವರು. ಈಗ ಅಖಾಡದಲ್ಲಿ ಮುಖಾಮುಖೀಯಾಗಿ ನಿಂತಿದ್ದಾರೆ.

Advertisement

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮೈಸೂರು ಡೇರಿ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಅವರಿಗೆ ಟಿಕೆಟ್‌ ನೀಡಿದೆ. ಆ ಮೂಲಕ ಹಾಲಿ ಶಾಸಕ ಜೆಡಿಎಸ್‌ನ ಜಿ.ಟಿ.ದೇವೇಗೌಡ ಹಾಗೂ ಕಾಂಗ್ರೆಸ್‌ನ ಸಿದ್ದೇಗೌಡ ಪೈಪೋಟಿಗೆ ಇಳಿದಿದ್ದಾರೆ. ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಾವೇ ಸ್ಪರ್ಧಿಸಿ ಪರಾಭವಗೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಒಕ್ಕಲಿಗ ಸಮಾಜದ ಸಿದ್ದೇಗೌಡ ಅವರಿಗೆ ಟಿಕೆಟ್‌ ಕೊಡಿಸಿ ಅದೇ ಒಕ್ಕಲಿಗ ಸಮಾಜಕ್ಕೆ ಸೇರಿದ ಶಾಸಕ ದೇವೇಗೌಡ ಅವರನ್ನು ಮಣಿಸಲು ಹೊರಟಿದ್ದಾರೆ.

ಸಿದ್ದೇಗೌಡ ಮೊನ್ನೆವರೆಗೂ ಜಿ.ಟಿ.ದೇವೇಗೌಡರಿಗೆ ಆಪ್ತರಾಗಿ ಜೆಡಿಎಸ್‌ನಲ್ಲಿದ್ದವರು. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡ‌ ಮಧ್ಯೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಣಾಹಣಿ ನಡೆದಾಗ ಸಿದ್ದೇಗೌಡ ಅವರು ಜಿ.ಟಿ.ದೇವೇಗೌಡ ಪರ ಕೆಲಸ ಮಾಡಿದವರು. ಸಿದ್ದೇಗೌಡ ಕೆಲವು ತಿಂಗಳ ಹಿಂದೆ ಜಿ.ಟಿ. ದೇವೇಗೌಡರಿಂದ ದೂರ ಸರಿದರು. ಜಿ.ಟಿ.ದೇವೇಗೌಡ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಂದ ದೂರ ಸರಿದಾಗ ಕುಮಾರಸ್ವಾಮಿ ಅವರಿಗೆ ಹತ್ತಿರವಾದವರು ಸಿದ್ದೇಗೌಡ.

ಜಿ.ಟಿ.ದೇವೇಗೌಡ ಜೆಡಿಎಸ್‌ನಿಂದ ಒಂದು ವೇಳೆ ಹೊರ ಬಂದರೆ ಜೆಡಿಎಸ್‌ನಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉಮೇದುವಾರರಾಗಬೇಕೆಂದು ಸಿದ್ದೇಗೌಡ ಪ್ರಯತ್ನಿಸಿದವರು. ಆದರೆ ಜಿ.ಟಿ.ದೇವೇಗೌಡ ಅವರ ಮನಸ್ತಾಪ ಬಗೆಹರಿದು ಅವರು ಜೆಡಿಎಸ್‌ನಲ್ಲೇ ಉಳಿದುಕೊಂಡಾಗ ಸಿದ್ದೇಗೌಡ ಹಾಗೂ ಅವರ ಬೆಂಬಲಿಗರು ಅತಂತ್ರರಾದರು. ಜೆಡಿಎಸ್‌ನಿಂದ ಹೊರ ಬಂದು  ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ  ಕಾಂಗ್ರೆಸ್‌ ಸೇರ್ಪಡೆಯಾದರು. ಸಿದ್ದರಾಮಯ್ಯ ಅವರು ಮೈಸೂರಿನ ಸಮಾರಂಭವೊಂದರಲ್ಲಿ ಭಾಗವಹಿಸಿ ವೇದಿಕೆ ಮೇಲಿದ್ದಾಗಲೇ ಸಿದ್ದೇಗೌಡ ಹಾಗೂ ಅವರ ಬೆಂಬಲಿಗರು ಅಲ್ಲಿಗೆ ತೆರಳಿ ವೇದಿಕೆ ಮೇಲೆಯೇ ಸಿದ್ದರಾಮಯ್ಯ ಅವರ ಕೈಕುಲುಕಿ ಕಾಂಗ್ರೆಸ್‌ ಸೇರ್ಪಡೆಗೆ ಒಲವು ತೋರಿದ್ದರು. ಅನಂತರ ಬಹಿರಂಗ ಸಮಾವೇಶದಲ್ಲಿ ಕಾಂಗ್ರೆಸ್‌ ಸೇರಿದ್ದರು. ಅಷ್ಟೊತ್ತಿಗಾಗಲೇ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಕೋರಿ ಕೆಪಿಸಿಸಿಗೆ ಅರ್ಜಿ ಸಲ್ಲಿಸುವ ಅವಧಿಯೂ ಮುಗಿದಿತ್ತು. ಆದರೆ ಟಿಕೆಟ್‌ ಆಕಾಂಕ್ಷಿಯಾಗಿದ್ದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಆಪ್ತರಾದ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷರಾದ ಮರೀಗೌಡ, ಕೂರ್ಗಳ್ಳಿ ಮಹದೇವ್‌, ಮೈಸೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ| ಬಿ.ಜೆ.ವಿಜಯಕುಮಾರ್‌, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಅರುಣ್‌ಕುಮಾರ್‌ ಮತ್ತಿತರರು ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಅಂತಿಮವಾಗಿ ಅಳೆದು ತೂಗಿ ಸಿದ್ದೇಗೌಡ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

Advertisement

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗ ಸಮಾಜದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಸಿದ್ದೇಗೌಡ ಮೈಸೂರು ಡೈರಿ ಅಧ್ಯಕ್ಷರಾಗಿದ್ದರು. ಇದಕ್ಕೂ ಮುನ್ನ ಅವರು ಜಯಪುರ ಗ್ರಾಮ ಪಂಚಾಯತ್‌ ಸದಸ್ಯರಾಗಿ, ಅಧ್ಯಕ್ಷರಾಗಿದ್ದರು. ಎಪಿಎಂಸಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಮೈಸೂರು ಡೇರಿ ನಿರ್ದೇಶಕ  ಸ್ಥಾನಕ್ಕೆ 2020ರಲ್ಲಿ ನಡೆದ ಚುನಾವಣೆಯಲ್ಲಿ ಮೈಸೂರು ಉಪ ವಿಭಾಗದಲ್ಲಿ ಸಿದ್ದೇಗೌಡ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆಗ ಅವರು ಮೈಸೂರು ಡೇರಿ ಅಧ್ಯಕ್ಷರಾಗಿದ್ದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗ ಸಮಾಜದ ಮತಗಳನ್ನು ವಿಭಜಿಸಿ ಗೆಲ್ಲಬೇಕು ಎಂಬ ತಂತ್ರವನ್ನು ಕಾಂಗ್ರೆಸ್‌ ಹೆಣೆದು ಸಿದ್ದೇಗೌಡ  ಅವರನ್ನು ಕಣಕ್ಕೆ ಇಳಿಸಿದೆ.  ಈ ಕ್ಷೇತ್ರದಲ್ಲಿ ಕುರುಬರು, ವೀರಶೈವ-ಲಿಂಗಾಯತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.  ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಆಪ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುವುದೇ ಸಿದ್ದೇಗೌಡರ ಮೊದಲ ಸವಾಲಾಗಿದೆ.

– ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next