ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತ್ರತ್ವದ ಸರ್ಕಾರದಭ್ರಷ್ಟಾಚಾರದ ಪುರಾಣ ಹೇಳಲು ಹೋದರೆ 7 ದಿನಗಳು ಸಾಲುವುದಿಲ್ಲ’ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾಗ್ಧಾಳಿ ನಡೆಸಿದ್ದಾರೆ.
ಗುರುವಾರ ಮೈಸೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪ ಯಾತ್ರೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.
‘ಸಿಎಂ ಸಿದ್ದರಾಮಯ್ಯ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಸಿದ್ದರಾಮಯ್ಯ. ಸಮಾಜವಾದಿ ಎನ್ನುವ ಅವರು 70 ಲಕ್ಷ ರೂಪಾಯಿಯ ವಾಚ್ ಕಟ್ಟುತ್ತಾರೆ. ನಿಮ್ಮಲ್ಲಿ ಯಾರ ಬಳಿಯಾದರೂ 70 ಲಕ್ಷದ ವಾಚ್ ಇದೆಯೇ’ ಎಂದು ಪ್ರಶ್ನಿಸಿದರು.
‘ಸಿದ್ದರಾಮಯ್ಯ ಸರ್ಕಾರ ಹಲವು ಹಗರಣಗಳನ್ನು ಮಾಡಿದೆ.ಅನ್ನಭಾಗ್ಯ ಯೋಜನೆಯಲ್ಲೂ ಹಣ ನುಂಗಿದ್ದಾರೆ. ಆರ್ಕಾವತಿ ಡಿನೋಟಿಫಿಕೇಷನ್‌ನಲ್ಲೂ ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿದ್ದಾರೆ. ಆಪ್ತ ಗೋವಿಂದ್ ರಾಜು ನಿವಾಸದಲ್ಲಿ ಡೈರಿ ಸಿಕ್ಕ ಬಳಿಕ ಸಿಎಂ ನಿದ್ದೆ ಹಾಳಾಗಿದೆ’ಎಂದರು.
‘ಈ ಸಮಯ ಭ್ರಷ್ಟಾಚಾರಿ,ದುರಹಂಕಾರಿ ಸಿದ್ದರಾಮಯ್ಯ ಸರ್ಕಾರವನ್ನು ಎತ್ತಿ ಬಿಸಾಡಬೇಕು’ ಎಂದರು.
‘ಸಿದ್ದರಾಮಯ್ಯ ಅವರೇ ಕಿವಿ ಕೊಟ್ಟು ಕೇಳಿ. ನಾವು ಕರ್ನಾಟಕಕ್ಕೆ ಕೊಟ್ಟಷ್ಟು ಅನುದಾನವನ್ನು ಕಾಂಗ್ರೆಸ್ 60 ವರ್ಷ ಕೊಟ್ಟಿಲ್ಲ’ ಎಂದರು.
‘ಸಿದ್ದರಾಮಯ್ಯ ಕುತಂತ್ರದಿಂದಾಗಿ ಬಂದ್ ನಡೆದ ಹೊರತಾಗಿಯೂ ಇಲ್ಲಿ ಬಂದಿರುವ ನಿಮಗೆಲ್ಲಾ ನನ್ನ ಅಭಿನಂದನೆಗಳು’ ಎಂದರು.