ಬೆಂಗಳೂರು: ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕ್ಷೇತ್ರ “ಅಲೆದಾಟ’ ವಿಚಾರ ಈಗ ಬಿಜೆಪಿ ಹಾಗೂ ಜೆಡಿಎಸ್ ಪಾಲಿಗೆ ಆಹಾರವಾಗಿ ಪರಿಣಮಿಸಿದ್ದು, ಚುನಾವಣಾ ಹೊಸ್ತಿಲಲ್ಲಿ ನಡೆದ ಈ ಬೆಳವಣಿಗೆ ಕಾಂಗ್ರೆಸ್‌ಗೆ ಬಿಸಿತುಪ್ಪವಾಗಿದೆ.
ಸಿದ್ದರಾಮಯ್ಯ ಕಾಂಗ್ರೆಸ್‌ಗೆ ವರವೂ ಹೌದು, ಶಾಪವೂ ಹೌದು ಎಂದು ಕಾಂಗ್ರೆಸ್‌ನ ಒಂದು ವಲಯ ಮಾಡುತ್ತಿದ್ದ ಟೀಕೆಗೆ ಕೋಲಾರ ಟಿಕೆಟ್ ವಿಚಾರ ಈಗ ಪುಷ್ಠಿ ನೀಡಿದೆ. ತಮಗಾಗಿ ಒಂದು ಕ್ಷೇತ್ರ ಗಟ್ಟಿಗೊಳಿಸಿಕೊಳ್ಳದೇ ಇರುವುದು ಒಟ್ಟಾರೆ ನಾಯಕತ್ವದ ಬಗ್ಗೆ ಮತದಾರರಲ್ಲಿ ಪ್ರಶ್ನೆ ಮೂಡಿಸಿದಂತಾಗುತ್ತದೆ ಎಂಬ ವಿಮರ್ಶೆಗೆ ಈಗ ಸಿದ್ದರಾಮಯ್ಯ ತಮ್ಮನ್ನು ಒಡ್ಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ವಿರುದ್ಧ ರಾಜಕೀಯ ದಾಳಿಗೆ ಸಮಯ ಕಾಯುತ್ತಿದ್ದ ಬಿಜೆಪಿಗೆ ಇದರಿಂದ ಅಸ್ತ್ರ ಸಿಕ್ಕಂತಾಗಿದ್ದು, ಈ ಹಿಂದೆ ಬಿಜೆಪಿ ಜಾಲತಾಣದಲ್ಲಿ ಮಾಡುತ್ತಿದ್ದ “ವಲಸೆ ರಾಮಯ್ಯ’ ಎಂಬ ಟೀಕೆಗೆ ಬಲಬಂದಂತಾಗಿದೆ.
ಸಿದ್ದರಾಮಯ್ಯನವರ ಕ್ಷೇತ್ರ ಪರ್ಯಟನೆಗೆ ದೊಡ್ಡ ಇತಿಹಾಸವೇ ಇದೆ. ಆರಂಭದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಅವರು, ಕ್ಷೇತ್ರ ಪುನರ್ವಿಂಗಡಣೆ ಬಳಿಕ ವರುಣಾಗೆ ಮೊದಲ ವಲಸೆ ಕೈಗೊಂಡಿದ್ದರು. ಜೆಡಿಎಸ್‌ನಿಂದ ಉಚ್ಚಾಟನೆಗೊಂಡ ಬಳಿಕ ಚಾಮುಂಡೇಶ್ವರಿಯಲ್ಲಿ ಎದುರಿಸಿದ ಮೊದಲ ಚುನಾವಣೆ ಅವರಿಗೆ ಸಾಕಷ್ಟು ಕಸಿವಿಸಿಯುಂಟು ಮಾಡಿತ್ತು. ಅಲ್ಪಮತಗಳ ವಿಜಯ ದೊರೆತರೂ ಭವಿಷ್ಯದ ರಾಜಕಾರಣಕ್ಕಾಗಿ ಭದ್ರ ನೆಲೆ ಬೇಕಾಗಿದ್ದರಿಂದ ವರುಣಾವನ್ನು ಆಯ್ದುಕೊಂಡರು.
ಆದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಅವರು ವರುಣಾ ಕ್ಷೇತ್ರವನ್ನು ತಮ್ಮ ಪುತ್ರ ಡಾ.ಯತೀಂದ್ರ ಅವರಿಗೆ ಬಿಟ್ಟುಕೊಟ್ಟರು. ದಶಕಗಳ ಬಳಿಕ ಮತ್ತೆ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಿದರು. ಆದರೆ ಹಾಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಅವರಿಗೆ ಚಾಮುಂಡೇಶ್ವರಿಯಲ್ಲಿ ಗೆಲುವು ಅಸಾಧ್ಯ ಎಂದು ಬಹುತೇಕರು ಭವಿಷ್ಯ ನುಡಿದ ಹಿನ್ನೆಲೆಯಲ್ಲಿ ಸುರಕ್ಷಿತ ತಾಣ ಎಂದು ಪರಿಗಣಿಸಿ ಕೊನೇ ಹಂತದಲ್ಲಿ ಬಾದಾಮಿಯಿಂದ ಕಣಕ್ಕಿಳಿದರು. ಅಲ್ಲಿ ಬಿಜೆಪಿಯಿಂದ ಬಿ.ಶ್ರೀರಾಮುಲು ನೀಡಿದ ಪ್ರಬಲ ಸ್ಪರ್ಧೆಯ ಹೊರತಾಗಿಯೂ ಅಲ್ಪ ಅಂತರದಿಂದ ಗೆದ್ದರು. ಆದರೆ ಚಾಮುಂಡೇಶ್ವರಿಯಲ್ಲಿ ಭಾರೀ ಮುಖಭಂಗ ಅನುಭವಿಸಬೇಕಾಯ್ತು. ಕಾಂಗ್ರೆಸ್ ಚುನಾವಣೆಯಲ್ಲಿ ಸೋತ ಬಳಿಕ ಮೈತ್ರಿ ಸರ್ಕಾರದ ಅವಧಿಯಲ್ಲಿ ತಮಗೆ ರಾಜಕೀಯವಾಗಿ ಮರುಜನ್ಮ ನೀಡಿದ್ದ ಬಾದಾಮಿ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡುವಲ್ಲಿಯೂ ಸಿದ್ದರಾಮಯ್ಯ ಯಶಸ್ವಿಯಾದರು.
ಆದರೆ ಬರಬರುತ್ತಾ ಬಾದಾಮಿ ಅವರಿಗೆ ಬೇಡವೆನಿಸಿತು. ಮುಂದಿನ ಚುನಾವಣೆಗೆ ಬೆಂಗಳೂರು ಅಕ್ಕಪಕ್ಕದ ಯಾವುದಾದರೂ ಸುರಕ್ಷಿತ ತಾಣ ಹುಡುಕುವಂತೆ ಅವರ ಬೆಂಬಲಿಗರು ಸಲಹೆ ನೀಡಿದ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಅವರಿಗೆ ಅತ್ಯಂತ ಪ್ರಶಸ್ತ ಎನಿಸಿತು. ಶಾಸಕ ಜಮೀರ್ ಅಹ್ಮದ್ ಖಾನ್ ಕ್ಷೇತ್ರ ತ್ಯಾಗಕ್ಕೂ ಸಮ್ಮತಿಸಿದರು. ಆದರೆ ಈ ಕ್ಷೇತ್ರದಲ್ಲಿ ನಡೆದ ಧ್ವಜವಂದನೆ ಪ್ರಕರಣ, ಗಣೇಶೋತ್ಸವ ವಿವಾದದಿಂದ ಹಿಂದಡಿ ಇಟ್ಟರು. ಸಿದ್ದರಾಮಯ್ಯ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಹಿಂದುತ್ವದ ಮತಗಳು ಪ್ರತಿಕೂಲವಾಗಿ ಪರಿಣಮಿಸಬಹುದು. ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಇದರ ಪರಿಣಾಮ ಎದುರಿಸಬೇಕಾದೀತು ಎಂದು ಕಾಂಗ್ರೆಸ್‌ನ ಇನ್ನೊಂದು ವರ್ಗ ಬಲವಾಗಿ ಪ್ರತಿಪಾದಿಸಿದ್ದರಿಂದ ಚಾಮರಾಜಪೇಟೆಯ ಮೇಲಿನ ಆಸೆಯನ್ನು ಸಿದ್ದರಾಮಯ್ಯ ತ್ಯಜಿಸಿದರು. “ಬಿಟ್ಟೇನೆಂದರೂ ಬಿಡದ ಮಾಯೆ’ ಎಂಬಂತೆ ಇದೆಲ್ಲದರ ಮಧ್ಯೆ ಚಾಮುಂಡೇಶ್ವರಿಯತ್ತ ಮತ್ತೆ ದೃಷ್ಟಿ ಹಾಯಿಸಿದ್ದರೂ ಗೆಲುವು ಮರೀಚಿಕೆ ಎಂಬುದು ಸ್ಪಷ್ಟವಾಗಿತ್ತು. ಹೆಬ್ಬಾಳ ಮತ್ತು ಬೆಳಗಾವಿಯಿಂದಲೂ ಅವರಿಗೆ ಆಹ್ವಾನವಿತ್ತು.
ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮೇಶ್ ಕುಮಾರ್, ನಜೀರ್ ಅಹ್ಮದ್ ಸೇರಿ ಕಾಂಗ್ರೆಸ್‌ನ ಹಿರಿಯರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವೊಲಿಸಿದ್ದರು. ಇದು ಕೂಡಾ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟಿ ಹಾಕಿತ್ತು. ಮಾಜಿ ಸಿಎಂ ಯಡಿಯೂರಪ್ಪನವರಂತೂ ಸಿದ್ದರಾಮಯ್ಯ ವರುಣಾದಿಂದಲೇ ಸ್ಪರ್ಧಿಸುತ್ತಾರೆಂದು ಭವಿಷ್ಯ ನುಡಿದಿದ್ದರು. ಕೊನೆಗೂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದು ಬೇಡ ಎಂಬ ಸೂಚನೆ ವರಿಷ್ಠರಿಂದಲೇ ಬಂದಿರುವುದರಿಂದ ವರುಣಾದತ್ತಲೇ ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.