Advertisement

ಸ್ಥಗಿತಗೊಂಡ ಆಡಳಿತ

12:30 AM Feb 14, 2019 | |

ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ನಿಜಕ್ಕೂ ಪ್ರಜಾಪ್ರಭುತ್ವವನ್ನು ಅಣಕಿಸುವಂತಿವೆ. ಕಳೆದ ಒಂದೂವರೆ ತಿಂಗಳಿನಿಂದ ಆಪರೇಷನ್‌ ಕಮಲದ ಹೆಸರಿನಲ್ಲಿ ನಡೆಯುತ್ತಿರುವ “ಹೈಡ್ರಾಮ’ ಒಂದು ಕಡೆ, ಸರ್ಕಾರದ ಸಂಖ್ಯಾಬಲ ಕುಸಿಯದಂತೆ ನೋಡಿಕೊಳ್ಳುವ “ಕಸರತ್ತು’ ಮತ್ತೂಂದು ಕಡೆ ಇದರ ನಡುವೆ ರಾಜ್ಯದಲ್ಲಿ ಆಡಳಿತವಂತೂ ಸ್ಥಗಿತಗೊಂಡಿರುವುದು ಸತ್ಯದ ಸಂಗತಿ.

Advertisement

ಜಂಟಿ ಅಧಿವೇಶನ ಫೆ.6 ರಂದು ಪ್ರಾರಂಭವಾಗಿ ಫೆ.8 ರಂದು ಬಜೆಟ್‌ ಮಂಡನೆಯಾದರೂ ಇದುವರೆಗೂ ವಿಧಾನಸಭೆಯಲ್ಲಿ  ಆರು ದಿನ ಕಲಾಪವೇ ನಡೆದಿಲ್ಲ. ರಾಜ್ಯಪಾಲರ ಭಾಷಣದ ಸಂದರ್ಭದಲ್ಲಿ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಬಿಜೆಪಿ ಪ್ರತಿಭಟನೆ ಮಾಡಿತ್ತು. ಇನ್ನು ಬಜೆಟ್‌ ಸಂದರ್ಭದಲ್ಲಿ ಬಜೆಟ್‌ ಪ್ರತಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಗದ್ದಲ ಉಂಟಾಗಿತ್ತು. ಇದರ ನಡುವೆ ಆಪರೇಷನ್‌ ಕಮಲ ಕಾರ್ಯಾಚರಣೆಯ ಸಂಬಂಧದಲ್ಲಿ ಯಡಿಯೂರಪ್ಪ ಆಡಿದ ಮಾತುಗಳೂ ಹೊರಬಿದ್ದು ಗದ್ದಲ ಜೋರಾಯಿತು. ಎರಡು ಮೂರು ದಿನ ಇದೇ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಹಗ್ಗ ಜಗ್ಗಾಟ ನಡೆದು ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿದರೆ ಪ್ರತಿಪಕ್ಷ ಬಿಜೆಪಿ ನ್ಯಾಯಾಂಗ ಅಥವಾ ಸದನ ಸಮಿತಿ ರಚಿಸಿ ಎಂದು ಪಟ್ಟು ಹಿಡಿದು ಕಲಾಪ ನಡೆಯಲಿಕ್ಕೂ ಬಿಡಲಿಲ್ಲ. ಒಟ್ಟಾರೆ ಆರು ದಿನ ಕಲಾಪ ನಡೆಯದಂತಹ ಸ್ಥಿತಿ ನಿರ್ಮಾಣವಾಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಈಗ ಹಾಸನ ಶಾಸಕ ಪ್ರೀತಂಗೌಡ ಆಡಿಯೋವೊಂದರಲ್ಲಿ ದೇವೇಗೌಡರು, ಕುಮಾರಸ್ವಾಮಿಯವರ ಬಗ್ಗೆ ಆಡಿದ ಮಾತುಗಳು ಜೆಡಿಎಸ್‌ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದು ಹಾಸನದಲ್ಲಿ ಪ್ರೀತಂಗೌಡ ಮನೆಯ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿದೆ. 

ಇದರಿಂದಾಗಿ ಇಡೀ ಪ್ರಕರಣ ಮತ್ತೂಂದು ತಿರುವು ಪಡೆದಿದೆ. ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರು ಶಾಸಕರ ಜತೆಗೂಡಿ ಹಾಸನಕ್ಕೆ ಖಂಡಿಸಲು ಹೋಗಿದ್ದಾರೆ. ಪ್ರೀತಂಗೌಡ ಅವರ ಮನೆಯ ಮೇಲೆ ನಡೆದಿರುವ ದಾಳಿಯು ರಾಜ್ಯದ ಕಾನೂನು ಸುವ್ಯವಸ್ಥೆಯ ಮೇಲೆ ಪ್ರಶ್ನೆಗಳು ಉದ್ಭವಿಸುವಂತೆ ಮಾಡಿವೆ. ರಾಜಕೀಯ ವಲಯದಲ್ಲಿನ ತಿಕ್ಕಾಟಗಳು ಸಾರ್ವಜನಿಕವಾಗಿಯೂ ಪ್ರತಿಬಿಂಬಿಸಲು ಆರಂಭವಾಗಿದೆಯೇ ಎಂಬ ಆತಂಕ ಕಾಡುವಂತಾಗಿದೆ. ಅತ್ತ ಕಾಂಗ್ರೆಸ್‌ನ ನಾಲ್ವರು ಶಾಸಕರು ಅಧಿವೇಶನ ಆರಂಭವಾದಾಗಿನಿಂದ ಸದನಕ್ಕೆ ಬಾರದೆ ಮುಂಬೈನ ಹೋಟೆಲ್‌ನಲ್ಲಿದ್ದದ್ದು ಮತ್ತಷ್ಟು ಶಾಸಕರು ಅವರ ಜತೆಗೂಡಲಿದ್ದಾರೆ ಎಂಬ ಮಾತುಗಳಿಂದ ಸರ್ಕಾರಕ್ಕೂ ಆತಂಕ ಎದುರಾಗಿತ್ತು. ಆದರೆ, ರಮೇಶ್‌ ಜಾರಕಿಹೊಳಿ, ನಾಗೇಂದ್ರ, ಮಹೇಶ್‌ ಕುಮಟಳ್ಳಿ, ಉಮೇಶ್‌ ಜಾಧವ್‌ ಬುಧವಾರ ವಿಧಾನಸಭೆಯಲ್ಲಿ ಹಾಜರಾಗಿ ಅಚ್ಚರಿ ಮೂಡಿಸಿದ್ದಾರೆ. ಜತೆಗೆ ಜೆಡಿಎಸ್‌ನ ನಾರಾಯಣಗೌಡ ಸಹ ಪ್ರತ್ಯಕ್ಷವಾಗಿ ನಾನು ಆರೋಗ್ಯ ಸಮಸ್ಯೆ ಇದ್ದ ಕಾರಣ ತಪಾಸಣೆಗೆ ಹೋಗಿದ್ದೆ ಎಂದು ಸಮಜಾಯಿಷಿ ನೀಡಿದ್ದಾರೆ. ಇವೆಲ್ಲರೂ ಎಲ್ಲಿದ್ದರು, ಈಗೇಕೆ ಬಂದರು ಎಂಬುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಒಟ್ಟಲ್ಲಿ ರಾಜ್ಯದ ಆಡಳಿತ ಯಂತ್ರ ಈ ಎಲ್ಲಾ ಅಡೆತಡೆಗಳಿಂದ ಚಲನೆ ಕಳೆದುಕೊಂಡಿದ್ದು, ಅದು ಯಾವಾಗ ಚಲಿಸುತ್ತದೋ ಎಂಬ ಚಿಂತೆ 

ನಾಗರಿ ಕರನ್ನು ಕಾಡಲಾರಂಭಿಸಿದೆ. ಆದರೆ ನಡೆ-ನುಡಿಗಳಲ್ಲಿ ಹಾದಿತಪ್ಪಿರುವ ಜನನಾಯಕರಿಗೆ ಸಾರ್ವಜನಿಕರ ಈ ಪ್ರಶ್ನೆಗಳು ಕಿವಿಗೆ ಬೀಳದಿರುವುದು ಸದ್ಯದ ದುರಂತ. 
 

Advertisement

Udayavani is now on Telegram. Click here to join our channel and stay updated with the latest news.

Next