ಹಳ್ಳಿಯಲ್ಲಿರುವ ಯುವಕರು ಇಂದು ಮಹಾನಗರಗಳತ್ತ ಮುಖ ಮಾಡುತ್ತಿದ್ದಾರೆ. ಹಳ್ಳಿಯಲ್ಲಿ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವುದು ಕಷ್ಟ ಎಂಬ ವಾತಾವರಣ ಸೃಷ್ಠಿಯಾಗುತ್ತಿದೆ. ಒಂದೆಡೆ, ಹಳ್ಳಿಯಲ್ಲಿರುವ ಯುವಕರಿಗೆ ಮದುವೆಯಾಗಲು ಹುಡುಗಿಯರು ಸಿಗೋದು ಕಷ್ಟ ಅಂತಿದ್ರೆ, ಮತ್ತೂಂದೆಡೆ ಹಳ್ಳಿಯ ಹುಡುಗಿಯರು ಕೂಡ ಪಟ್ಟಣದ ಹುಡುಗರನ್ನೇ ಬಯಸುತ್ತಾರೆ. ಇಂಥ ಪರಿಸ್ಥಿತಿ ಮತ್ತು ಮಾತುಗಳನ್ನು ಬಹುತೇಕರು ಕೇಳಿರುತ್ತೀರಿ. ಇಂಥದ್ದೇ ವಿಷಯವನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಸಿನಿಮಾ “ಶ್ರೀಮಂತ’ ಹಳ್ಳಿಯೊಂದರ ರೈತಾಪಿ ಬದುಕು, ಸಾಮಾಜಿಕ ಸ್ಥಿತಿಗತಿ, ನೋವು-ನಲಿವು, ಸ್ನೇಹ-ಪ್ರೀತಿ-ಬಾಂಧವ್ಯ ಎಲ್ಲದರ ಚಿತ್ರಣವನ್ನು “ಶ್ರೀಮಂತ’ವಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಹಾಸನ್ ರಮೇಶ್.
ಪ್ರಸ್ತುತ ಗ್ರಾಮೀಣ ಭಾಗದ ಜನಜೀವನವನ್ನು ಒಂದಷ್ಟು ಮನರಂಜನಾತ್ಮಕವಾಗಿ “ಶ್ರೀಮಂತ’ ಸಿನಿಮಾದ ಮೂಲಕ ಕಟ್ಟಿಕೊಡುವಲ್ಲಿ ಚಿತ್ರತಂಡ ಭಾಗಶಃ ಯಶಸ್ವಿಯಾಗಿದೆ. ಅಲ್ಲಲ್ಲಿ ಹಾಡುಗಳು, ಆ್ಯಕ್ಷನ್, ಲವ್, ಕಾಮಿಡಿ, ಸೆಂಟಿಮೆಂಟ್ ಎಲ್ಲವನ್ನೂ ಹದವಾಗಿ ಸೇರಿಸಿ ಕಲಾತ್ಮಕ ಕಥಾಹಂದರ ಒಂದಕ್ಕೆ ಕಮರ್ಷಿಯಲ್ ಟಚ್ ನೀಡಲಾಗಿದೆ. ಅದನ್ನು ಹೊರತುಪಡಿಸಿ, ಸಿನಿಮಾದ ಅವಧಿಯನ್ನು ಸ್ವಲ್ಪ ಕಡಿಮೆ ಮಾಡಿ, ಕೆಲ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ, “ಶ್ರೀಮಂತ’ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪುವ ಸಾಧ್ಯತೆಗಳಿದ್ದವು.
ಇನ್ನು ಯುವ ನಟ ಕ್ರಾಂತಿ, ವೈಷ್ಣವಿ ಮೆನನ್ ಮತ್ತು ವೈಷ್ಣವಿ ಪಟವರ್ಧನ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಟಿ ಕಲ್ಯಾಣಿ ಗ್ರಾಮೀಣ ಮಹಿಳೆಯಾಗಿ ತಮ್ಮ ಪಾತ್ರದಲ್ಲಿ ಗಮನ ಸೆಳೆಯುವ ಅಭಿನಯ ನೀಡಿದ್ದಾರೆ. ನಟ ಸೋನು ಸೂದು ಕೊನೆಯಲ್ಲಿ ಬಂದು ಹಿತೋಪದೇಶ ಮಾಡಿ ತೆರಳುತ್ತಾರೆ.
ಉಳಿದಂತೆ ಚರಣ್ ರಾಜ್, ಗಿರೀಶ್ ಶಿವಣ್ಣ, ಕುರಿರಂಗ, ರಮೇಶ್ ಭಟ್, ರಾಜು ತಾಳಿಕೋಟೆ, ರವಿಶಂಕರ್ ಗೌಡ, ಸಾಧುಕೋಕಿಲ ಹೀಗೆ ಬೃಹತ್ ಕಲಾವಿದರ ತಾರಾಗಣ ಸಿನಿಮಾದ ಉದ್ದಕ್ಕೂ ಕಾಣ ಸಿಗುತ್ತದೆ. ಸಿನಿಮಾದ ಛಾಯಾಗ್ರಹಣ “ಶ್ರೀಮಂತ’ನ ದೃಶ್ಯಗಳನ್ನು ಶ್ರೀಮಂತವಾಗಿಯೇ ಕಾಣುವಂತೆ ಮಾಡಿದೆ. ಸಿನಿಮಾದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಿನಿಮಾದ ಹೈಲೈಟ್ಸ್ ಎನ್ನಬಹುದು. ಒಂದಷ್ಟು ಮರಂಜನೆ ಜೊತೆಗೊಂದು ಮೆಸೇಜ್ ಹೊತ್ತುಕೊಂಡು ಬಂದಿರುವ “ಶ್ರೀಮಂತ’ನನ್ನು ಒಮ್ಮೆ ನೋಡಿಬರಲು ಅಡ್ಡಿಯಿಲ್ಲ.