ಕೋವಿಡ್ ಮಹಾಮಾರಿ ಅನೇಕರ ಬದುಕನ್ನು ಕಸಿದುಕೊಂಡಿದೆ. ಅನೇಕರ ಬದುಕು ಬೀದಿಗೆ ಬಂದಿದೆ. ಇದರ ಜೊತೆಗೆ ಕೊರೋನಾ ಸಮಯದಲ್ಲಿ ಒಂದಷ್ಟು ಕ್ರೈಮ್ಗಳು ಕೂಡಾ ನಡೆದು ಹೋಗಿವೆ. ಈ ವಾರ ತೆರೆಕಂಡಿರುವ “ಟೆನೆಂಟ್’ ಸಿನಿಮಾ ಕೂಡಾ ಕೊರೋನಾ ಹಿನ್ನೆಲೆಯಲ್ಲಿ ನಡೆಯುವ ಕಥೆ. ಕೊರೋನಾ ಹಿನ್ನೆಲೆಯಲ್ಲಿ ನಡೆಯುವ ಕ್ರೈಮ್ವೊಂದನ್ನು ಇಲ್ಲಿ ನಿರ್ದೇಶಕರು ಹೇಳಿದ್ದಾರೆ.
ಕೋವಿಡ್ ಸಮಯದ ಕಥೆ ಎಂದಾಕ್ಷಣ ಇಲ್ಲಿ ಗೋಳಾಟವಿಲ್ಲ, ಬದಲಾಗಿ ಒಂದು ಕ್ರೈಮ್ ಸ್ಟೋರಿ ಇದೆ. ಅದಕ್ಕೊಂದು ಪ್ರೀತಿಯ ಬಲೆ ಹಾಗೂ “ಅಕ್ರಮ’ದ ಸೆಳೆತವಿದೆ. ಇಡೀ ಸಿನಿಮಾ ಮನೆಯೊಂದರಲ್ಲಿ ನಡೆಯುತ್ತದೆ. ಆರಂಭದಲ್ಲಿ ಒಂದು ಸಾಧಾರಣ ಸಿನಿಮಾದಂತೆ ತೆರೆದುಕೊಳ್ಳುವ “ಟೆನೆಂಟ್’ ಮುಂದೆ ಸಾಗುತ್ತಾ ತನ್ನೊಳಗಿನ ಒಂದೊಂದೇ ಅಚ್ಚರಿಗಳನ್ನು ಪ್ರೇಕ್ಷಕರ ಮಡಿಲಿಗೆ ಹಾಕುತ್ತಾ ಹೋಗುತ್ತದೆ. ಇದೇ ಈ ಸಿನಿಮಾದ ಪ್ಲಸ್ ಪಾಯಿಂಟ್.
ಸಿನಿಮಾದ ಕಥೆ ಸಿಂಪಲ್. ಗಂಡ-ಹೆಂಡತಿಯ ಸುಖ ಸಂಸಾರ. ಮುದ್ದಾದ ಕುಟುಂಬ. ಮನೆ ಮೇಲೆ ಒಬ್ಬ ಬ್ಯಾಚುಲರ್ ಬಾಯ್. ಪಕ್ಕಾ ಪರೋಡಿ. ಆದರೆ, ಈಕೆ ಗಂಡನನ್ನು ಜೀವಕ್ಕಿಂತ ಪ್ರೀತಿಸುವ ಹೆಂಡತಿ. ಹೀಗೆ ಸಾಗುವ ಕಥೆಯಲ್ಲಿ ದೊಡ್ಡ ಟ್ವಿಸ್ಟ್ ವೊಂದಿದೆ. ಅದೇನು ಎಂಬುದನ್ನು ತೆರೆಮೇಲೆ ನೋಡಿದರೇನೇ ಚೆಂದ.
ಸಿನಿಮಾ ಕುತೂಹಲ ಕೆರಳಿಸುತ್ತಾ ಸಾಗುತ್ತದೆ ಎಂದರೆ ಅದಕ್ಕೆ ಕಾರಣ ಚಿತ್ರದ ಕೊನೆಯ 20 ನಿಮಿಷ. ನಿರ್ದೇಶಕರು ಚಿತ್ರದ ಮೂಲ ಸರಕನ್ನು ಇಲ್ಲಿ ತೆರೆದಿಡುತ್ತಾ ಹೋಗುವ ಮೂಲಕ ಸಿನಿಮಾದೊಳಗೇನೋ ಇದೆ ಎಂಬ ಭಾವ ಮೂಡಿಸುತ್ತಾರೆ ಮತ್ತು ಅದರಲ್ಲಿ ಯಶಸ್ವಿಯಾಗಿದ್ದಾರೆ. ಆ ಮಟ್ಟಿಗೆ ಇದೊಂದು ಚಿಕ್ಕದಾಗಿ ಚೊಕ್ಕದಾಗಿರುವ ಸಿನಿಮಾ. ಇಲ್ಲಿ ಹೆಚ್ಚು ಪಾತ್ರಗಳಿಲ್ಲ. ಇಡೀ ಸಿನಿಮಾ ಕೆಲವೇ ಕೆಲವು ಪಾತ್ರಗಳ ಸುತ್ತ ಸಾಗುತ್ತದೆ. ಸೋನುಗೌಡ ಈ ಸಿನಿಮಾದ ಅಚ್ಚರಿ. ಬೇರೆ ಶೇಡ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮಾತು ನಟ ಧರ್ಮಕೀರ್ತಿ ಅವರಿಗೆ ಅನ್ವಯಿಸುತ್ತದೆ. ಉಳಿದಂತೆ ರಾಕೇಶ್ ಮಯ್ಯ, ತಿಲಕ್, ಉಗ್ರಂ ಮಂಜು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.