Advertisement

Shri Rajasekharananda Swamiji: ಧರ್ಮಕ್ಕೆ ಎಂದೂ ಅಪಚ್ಯುತಿ ಬರಬಾರದು: ವಜ್ರದೇಹಿ ಶ್ರೀ

11:33 AM Oct 16, 2023 | Team Udayavani |

ಕಾರ್ಕಳ: ಶ್ರೀ ಕ್ಷೇತ್ರ ಧರ್ಮ ಸ್ಥಳದ ಹೆಗ್ಗಡೆಯವರು ಒಂದು ಕ್ಷೇತ್ರವನ್ನು ಕೇಂದ್ರವಾಗಿ ಇಟ್ಟು ಕೊಂಡು ನೂರಾರು ಸಾಮಾಜಿಕ ಕೆಲಸ ಕಾರ್ಯ ಮಾಡುತ್ತ ಬಂದಿದ್ದಾರೆ. ಉಪಕಾರ ಸ್ಮರಣೆಯನ್ನು ಸಮಾಜ ಮರೆತರೆ ಆ ಸಮಾಜದ ಅಂತಃಸತ್ವ ಕಡಿಮೆಯಾಗುತ್ತದೆ. ಧರ್ಮಕ್ಕೆ ಎಂದೂ ಅಪಚ್ಯುತಿ ಬರಬಾರದು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

Advertisement

ಶ್ರೀಕ್ಷೇತ್ರ ಧರ್ಮಸ್ಥಳ ಹಿತರಕ್ಷಣ ಸಮಿತಿ ವತಿಯಿಂದ ಕಾರ್ಕಳದ ಕುಕ್ಕುಂದೂರು ಪಂ.ಮೈದಾನದಲ್ಲಿ ರವಿವಾರ ನಡೆದ ಧರ್ಮ ಸಂರಕ್ಷಣ ಸಮಾವೇಶದಲ್ಲಿ ಅವರು ಮಾತನಾಡಿದರು.

ಸತ್ಯದ ಅನ್ವೇಷಣೆ ಆಗಬೇಕು. ಸೌಜನ್ಯಾ ಎನ್ನುವ ಮುಗ್ಧ ಮಗುವಿಗೆ ನ್ಯಾಯ ಸಿಗಬೇಕು. ಧರ್ಮ ರಕ್ಷಣೆಯಾಗಬೇಕು, ಕಾನೂನಿಗೂ ಬೆಲೆ ಬರುವಂತಾಗಲಿ ಎಂದರು.

ಧರ್ಮಸ್ಥಳ ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತ ವಾಗದೆ ಹಿಂದೂ, ಜೈನ ಧರ್ಮ ದವರ ಜತೆ ಕ್ರಿಸ್ತ ಹಾಗೂ ಮುಸ್ಲಿಂ ಸಮು ದಾಯದವರಿಗೂ ನೆರವನ್ನು ನೀಡುವ ಸರ್ವಧರ್ಮದ ಕ್ಷೇತ್ರವಾಗಿದೆ ಎಂದು ಮೂಡಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಮೂಡುಬಿದಿರೆ ಕರಿಂಜ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಧರ್ಮ ಜಾಗೃತಿಯಾಗುವವರೆಗೂ ವಿರಮಿಸಬಾರದು. ಆಗ ಮಾತ್ರ ಧರ್ಮ ಸಂರಕ್ಷಣೆ ಸಾಧ್ಯ. ಸೌಜನ್ಯಾಳಿಗೆ ನ್ಯಾಯ ಸಿಗಬೇಕು. ಸತ್ಯ ಹೊರಗೆ ಬರಬೇಕು. ಆದರೆ ಅದಕ್ಕೆ ಬೇಕಾದ ಪ್ರಾಮಾಣಿಕ ವ್ಯವಸ್ಥೆಯಾಗಬೇಕು. ಎಲ್ಲರೂ ಜತೆಯಾಗಿ ಧರ್ಮ ಸಂರಕ್ಷಣೆ ಮಾಡೋಣ ಎಂದರು.

Advertisement

ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಶಾಸಕ ವಿ. ಸುನಿಲ್‌ ಕುಮಾರ್‌ ಮಾತನಾಡಿ, ಧಾರ್ಮಿಕ ನಂಬಿಕೆಗಳಿಗೆ ನಿರಂತರ ಅವಹೇಳನ ಮಾಡುತ್ತಿರುವ ಪ್ರಯತ್ನಗಳು ದೇಶದಲ್ಲಿ ನಡೆಯುತ್ತಿದೆ. ಧಾರ್ಮಿಕ ಭಾವನೆಗೆ ಅಪಪ್ರಚಾರ ಮಾಡಿದರೆ ಅದು ತಪ್ಪು. ಸೌಜನ್ಯಾಳಿಗೆ ನ್ಯಾಯ ಸಿಗಬೇಕು ಎನ್ನುವ ಹೋರಾಟ ದಲ್ಲಿ ಭಾಗವಹಿಸಿದ್ದೇವೆ. ಮುಂದೆಯೂ ಭಾಗವಹಿಸುತ್ತೇನೆ ಎಂದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಮೋಹನ್‌ ಆಳ್ವ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೂರಾರು ಒಳ್ಳೆಯ ಕೆಲಸ ಕಾರ್ಯವನ್ನು ಮಾಡಿರುವ ಧರ್ಮಸ್ಥಳದ ಹೆಗ್ಗಡೆಯವರನ್ನು ಅವಹೇಳನ ಮಾಡುವುದು ಸರಿಯಲ್ಲ. ಸೌಜನ್ಯಾಳಿಗೆ ಆದ ಅನ್ಯಾಯ ಎಲ್ಲೂ ಈ ನಾಡಿನಲ್ಲಿ ಆಗಬಾರದು ಎಂದು ಹೇಳಿದರು.

ಸಾಣೂರು ದೇಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀರಾಮ್‌ ಭಟ್‌, ಜಂಗಮ ಸಂಸ್ಥಾನ ಮಠದ ರುದ್ರಮಣಿ ಮಹಾಸ್ವಾಮಿ, ಉಜಿರೆ ಅಶೋಕ್‌ ಭಟ…, ಸಹನಾ ಕುಂದರ್‌ ಸೂಡ, ನ್ಯಾಯವಾದಿಗಳಾದ ಅರುಣ್‌ ಬಂಗೇರ, ಎಂ.ಕೆ. ವಿಜಯ ಕುಮಾರ್‌, ಜ್ಞಾನಸುಧಾ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಡಾ| ಸುಧಾಕರ ಶೆಟ್ಟಿ, ಶ್ರೀಪತಿ ಭಟ್‌ ಪುತ್ತಿಗೆ, ವಸಂತ ಗಿಳಿಯಾರ್‌, ರಾಕೇಶ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ನೀರೆ ಕೃಷ್ಣ ಶೆಟ್ಟಿ ಸ್ವಾಗತಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next