ಶಿರ್ವ: ಜಿಲ್ಲೆಯ ಪುರಾಣ ಪ್ರಸಿದ್ಧ ಸೂಡ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ವಾರ್ಷಿಕ ಮಹೋತ್ಸವದೊಂದಿಗೆ ಶನಿವಾರ ಷಷ್ಠಿ ಮಹೋತ್ಸವ ,ರಥೋತ್ಸವ ಬಲಿ ಸಂಪನ್ನಗೊಂಡಿತು.
ಉಡುಪಿ ಪುತ್ತೂರು ವೇ|ಮೂ| ಶ್ರೀನಿವಾಸ ತಂತ್ರಿಯವರ ನೇತೃತ್ವದಲ್ಲಿ ಅರ್ಚಕ ವೇ|ಮೂ| ಸೂಡ ಶ್ರೀಶ ಭಟ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಬ್ರಹ್ಮವಾಹಕ ಶ್ರೀಧರ ಭಟ್ ಬೆಳ್ಮಣ್ ರಥೋತ್ಸವ ಬಲಿ ನೆರವೇರಿಸಿದರು.
ಡಿ. 10 ರಂದು ಶ್ರೀಸುಬ್ರಹ್ಮಣ್ಯ ದೇವರ ಮಹಾ ರಥೋತ್ಸವ, ಡಿ. 11 ರಂದು ತುಲಾಭಾರ, ನಾಗದರ್ಶನ, ರಾತ್ರಿ ಜುಮಾದಿ ದೈವದ ನೇಮ ಮತ್ತು ಜ.5 ರಂದು ಕಿರುಷಷ್ಠಿ ಮಹೋತ್ಸವ ಜರಗಲಿದೆ.
ಧಾರ್ಮಿಕ ಕಾರ್ಯಕ್ರಮಗಳು:
ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನ.30 ರಂದು ಆರಂಭಗೊಂಡಿದ್ದು,ಡಿ.6ರಂದು ಬೆಳಗ್ಗೆ ವಾರ್ಷಿಕ ಮಹೋತ್ಸವದ ಧ್ವಜಾರೋಹಣ ನಡೆದು ಬಲಿ, ಮಹಾಪೂಜೆ, ಸಂತರ್ಪಣೆ ನೆರವೇರಿತ್ತು. ಶನಿವಾರ ಬೆೆಳಗ್ಗೆ ಪಂಚಾಮೃತಾಭಿಷೇಕ, ಕಲಶಾಭಿಷೇಕ, ಬಲಿ,ಮಧ್ಯಾಹ್ನ ಮಹಾಪೂಜೆ, ಷಷ್ಠಿ ಮಹೋತ್ಸವ ನಡೆಯಿತು.ಬಳಿಕ ರಥಾರೂಢರಾದ ಸುಬ್ರಹ್ಮಣ್ಯ ದೇವರ ರಥವನ್ನು ರಥಬೀದಿಯಲ್ಲಿ ಭಕ್ತರು ಎಳೆದು ಕೃತಾರ್ಥರಾದರು.
ಸಾವಿರಾರು ಭಕ್ತರು ಭಾಗಿ:
ದೇಗುಲದ ಗರ್ಭಗುಡಿ,ಧ್ವಜಸ್ಥಂಭ ಮತ್ತು ಒಳಪ್ರಾಕಾರವನ್ನು ವಿವಿಧ ಬಣ್ಣದ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದಲೇ ಸರತಿಯ ಸಾಲಿನಲ್ಲಿ ನಿಂತು ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತರು ದೇವರ ದರ್ಶನ ಪಡೆದು ವಾಸುಕೀ ಸುಬ್ರಹ್ಮಣ್ಯನಿಗೆ ತುಲಾಭಾರ, ಎಡೆಸ್ನಾನ, ಪೊಡಿ ಮಡೆಸ್ನಾನ, ನಾಗಸಮಾರಾಧನೆ ಮತ್ತು ಬೆಳ್ಳಿಯ ಹರಕೆಗಳನ್ನು ಸಲ್ಲಿಸಿದರು. ಮಧ್ಯಾಹ್ನ ವೇ|ಮೂ| ಶ್ರೀಶ ಭಟ್ ಸೂಡ ಅವರ ನೇತೃತ್ವದಲ್ಲಿ ಮಹಾ ಅನ್ನಸಂತರ್ಪಣೆಯ ಪಲ್ಲಪೂಜೆ ನಡೆದು ಮಹಾ ಅನ್ನ ಸಂತರ್ಪಣೆಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶಿರ್ವ ಕೋಡು ಜಯಶೀಲ ಹೆಗ್ಡೆ, ಹಿರಿಯರಾದ ಶಿರ್ವ ಕೋಡು ಬಾಲಕೃಷ್ಣ ಹೆಗ್ಡೆ, ಕುಕ್ಕೆಹಳ್ಳಿ ದೊಡ್ಡಬೀಡು ಸುಧಾಕರ ಹೆಗ್ಡೆ, ಮುಲ್ಕಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಶಿರ್ವ ಕೋಡು ಸುಧೀರ್ ಹೆಗ್ಡೆ,ಶಿರ್ವ ಕೋಡು ಜಯಪಾಲ ಹೆಗ್ಡೆ, ಜಯಪ್ರಕಾಶ್ ಹೆಗ್ಡೆ, ದಿನೇಶ್ ಹೆಗ್ಡೆ, ಶ್ರೀನಾಥ ಹೆಗ್ಡೆ ಪಡುಬಿದ್ರಿ,ಸುಭಾಷ್ ಬಲ್ಲಾಳ್ ಕಟಪಾಡಿ, ಡಾ| ಅಮರ್ ಹೆಗ್ಡೆ,ಅನೂಪ್ ಹೆಗ್ಡೆ, ವಿಜಯಲಕ್ಷ್ಮೀ ಎಸ್. ಶೆಟ್ಟಿ, ಪ್ರಶಾಂತ್ ಶೆಟ್ಟಿ ಸೂಡ, ಎಸ್.ಕೆ.ಸಾಲಿಯಾನ್ ಬೆಳ್ಮಣ್, ಹೇಮನಾಥ ಶೆಟ್ಟಿ ಸೂಡ, ವೀರೆಂದ್ರ ಶೆಟ್ಟಿ ಪಂಜಿಮಾರ್, ಸೂರ್ಯನಾರಾಯಣ ಶೆಟ್ಟಿ ನ್ಯಾರ್ಮ, ಪಾಂಡುರಂಗ ಶೆಟ್ಟಿ ಬಾರ್ಕೂರು, ಶಂಕರ ಕುಂದರ್ ಸೂಡ, ಸಾಯಿನಾಥ ಶೆಟ್ಟಿ ಕುತ್ಯಾರು,ಭಾಸ್ಕರ ಆಚಾರ್ಯ, ಸಚ್ಚಿದಾನಂದ ಪಾಂಡೆ ,ಬ್ರೈಟ್ ಗ್ರೂಪ್ ಫ್ರೆಂಡ್ಸ್ನ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.ದೇಗುಲದ ಭಕ್ತವೃಂದದವರಿಂದ ಭಕ್ತಾಧಿಗಳ ಬಾಯಾರಿಕೆ ತಣಿಸಲು ಪಾನಕದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪೊಲೀಸ್ ನಿಯೋಜನೆ:
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್, ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕ ದಿಲೀಪ್, ಶಿರ್ವ ಪಿಎಸ್ಐ ಸಕ್ತಿವೇಲು ನೇತೃತ್ವದಲ್ಲಿ ಕಾರ್ಕಳ ನಗರ,ಗ್ರಾಮಾಂತರ, ಹೆಬ್ರಿ ಮತ್ತು ಅಜೆಕಾರು ಠಾಣೆಯ ಪೊಲೀಸರು ಬಂದೋಬಸ್ತ್ ನಡೆಸಿದ್ದರು.ಸೂಡ ಬ್ರೈಟ್ ಗ್ರೂಪ್ ಫ್ರೆಂಡ್ಸ್ನ ಸದಸ್ಯರು ಸುವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿದ್ದರು.