ಹುಬ್ಬಳ್ಳಿ: ಹೆಜ್ಜೆಗೊಂದು ಮದ್ಯದಂಗಡಿ ಇದು ಅಧಃಪತನದ ಸಂಕೇತವೇ ಸರಿ ಎಂದು ಮೂರು ಸಾವಿರ ಮಠದ ಜಗದ್ಗುರು ಡಾ| ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಜಿಲ್ಲಾ ನಾಗರಿಕರ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜಣ್ಣ ಕೊರವಿ ಅವರ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಗರ ಅಷ್ಟೇ ಅಲ್ಲ ಗ್ರಾಮೀಣ ಭಾಗಕ್ಕೆ ಮದ್ಯದ ಅಂಗಡಿಗಳು ಆರಂಭಗೊಂಡಿದ್ದು, ಕುಡುಕರಿಲ್ಲದ ಗ್ರಾಮಗಳಿಲ್ಲ ಎನ್ನುವಂತಾಗಿದೆ. ಮದ್ಯ ಇತರೆ ವ್ಯಸನಗಳಿಗೆ ಮುಕ್ತಿ ಹಾಡಬೇಕೆಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆ ಅವರು ಜನಜಾಗೃತಿ ವೇದಿಕೆ ಹುಟ್ಟು ಹಾಕಿದ್ದು, ಈಗಾಗಲೇ 1.5 ಲಕ್ಷ ಕುಟುಂಬಗಳನ್ನು ರಕ್ಷಣೆ ಮಾಡಿದ್ದಾರೆ ಎಂದರೆ ಅದು ಸಾಮಾನ್ಯ ವಿಷಯವಲ್ಲ ಎಂದರು.
ಮಾಜಿ ಸಿಎಂ ಜಗದೀಶ ಶೆಟ್ಟರ ಮಾತನಾಡಿ, ಸಮಾಜದ ಒಳಿತಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಉತ್ತಮ ಕಾರ್ಯ ನಡೆಯುತ್ತಿದ್ದು, ಉತ್ಸಾಹಿಯಾಗಿರುವ ರಾಜಣ್ಣ ಕೊರವಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಹೆಮ್ಮೆ ಸಂಗತಿ. ಡಾ|ವೀರೇಂದ್ರ ಹೆಗ್ಗಡೆ ಅವರ ಇಂತಹ ಸೇವಾ ಕಾರ್ಯವನ್ನು ನೋಡಿಕೊಂಡೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಾ| ಹೆಗ್ಗಡೆ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು.
ರಾಜಣ್ಣ ಕೊರವಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಇದೊಂದು ವಿಶೇಷ ಕಾರ್ಯಕ್ರಮವಾಗಿದೆ. ಸೇವೆ ಮಾಡಬೇಕು ಎನ್ನುವ ಉದ್ದೇಶದಿಂದ ಕಳೆದ 10 ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದ್ದು, ಇದೀಗ ರಾಜ್ಯಾಧ್ಯಕ್ಷರ ಸ್ಥಾನ ನನಗೆ ಲಭಿಸಿದ್ದು, ಹೆಚ್ಚಿನ ಜವಾಬ್ದಾರಿ ನೀಡಿದೆ. ಕಳೆದ ಏಳು ವರ್ಷಗಳಿಂದ ಜಿಲ್ಲಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಇದೀಗ ರಾಜ್ಯಾಧ್ಯಕ್ಷ ಸ್ಥಾನ ಲಭಿಸಿದೆ. ಧಾರವಾಡ ಜಿಲ್ಲೆಯಲ್ಲಿ 1.82 ಲಕ್ಷ ಜನ ಸದಸ್ಯರಿದ್ದಾರೆ. ಇಲ್ಲಿ ಎಲ್ಲರೂ ಅಧ್ಯಕ್ಷರೆ. ಎಲ್ಲರೂ ಸೇರಿ ಕೆಲಸ ಮಾಡೋಣ ಎಂದರು.
ದುಗ್ಗೆಗೌಡರ ಪ್ರಾಸ್ತಾವಿಕ ಮಾತನಾಡಿ, ಅಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಇನ್ನೊಂದು ರುಡ್‌ಸೆಟ್ ಸಂಸ್ಥೆ ಹುಟ್ಟು ಹಾಕಲಾಗಿದ್ದು, ಇಂದು ಬೆಳೆದು ಹೆಮ್ಮರವಾಗಿ ನಿಂತಿವೆ ಎಂದರು. ರಾಜ್ಯದಲ್ಲಿ ಸುಮಾರು 48 ಲಕ್ಷ ಕುಟುಂಬಗಳು ಇದರ ಸದುಪಯೋಗ ಪಡೆಯುತ್ತಿವೆ. ಮದ್ಯವರ್ಜನೆ ಶಿಬಿರ ನಡೆಸಿ ಲಕ್ಷಾಂತರ ಜನರನ್ನು ಮದ್ಯಮುಕ್ತರನ್ನಾಗಿ ಮಾಡಲಾಗಿದೆ. ದುಶ್ಚಟಗಳಿಗೆ ಬಲಿಯಾಗುತ್ತಿದ್ದ ಸಾವಿರಾರು ಜನರು ರಕ್ಷಿಸಲಾಗಿದೆ ಎಂದರು.
ಶಿರಹಟ್ಟಿ ಸಂಸ್ಥಾನಮಠದ ಶ್ರೀ ಫಕ್ಕಿರ ಸಿದ್ಧರಾಮ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಸಂಸದ ಪ್ರೊ|ಐ.ಜಿ.ಸನದಿ ಮಾತನಾಡಿದರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.
ಮುಖಂಡರಾದ ತವನಪ್ಪ ಅಷ್ಟಗಿ, ಸದಾನಂದ ಡಂಗನವರ, ಎಸ್.ಐ.ಚಿಕ್ಕನಗೌಡರ, ಅಶೋಕ ಕಾಟವೆ, ವೀರಭದ್ರಪ್ಪ ಹಾಲಹರವಿ, ಚನ್ನು ಪಾಟೀಲ, ಗಂಗಾಧರ ಬಂಡಿಹಾಳ, ಮಹೇಶ ಟೆಂಗಿನಕಾಯಿ, ಅನಿಲಕುಮಾರ ಪಾಟೀಲ, ಪೀರಾಜಿ ಖಂಡೇಕಾರ, ಶಿವು ಹಿರೇಕೆರೂರ ಇನ್ನಿತರರಿದ್ದರು.