Advertisement

Badagannur: ನನೆಗುದಿಗೆ ಬಿದ್ದ ಪಡುಮಲೆ ಅಭಿವೃದ್ಧಿ ಯೋಜನೆ

12:51 PM Dec 10, 2024 | Team Udayavani |

ಬಡಗನ್ನೂರು: ತುಳುನಾಡಿನ ಐತಿಹಾಸಿಕ ಹಿನ್ನೆಲೆ ಇರುವ, ಅವಳಿ ಕಾರಣಿಕ ಪುರುಷರಾದ ಕೋಟಿ-ಚೆನ್ನಯರ ಜನ್ಮಭೂಮಿಯಾದ ಪಡುಮಲೆಯನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸಲು ರೂಪುಗೊಂಡಿದ್ದ ಯೋಜನೆ ನೆನೆಗುದಿಗೆ ಬಿದ್ದಿದೆ.

Advertisement

10 ವರ್ಷದ ಹಿಂದೆ 5 ಕೋಟಿ ರೂ. ವೆಚ್ಚದಲ್ಲಿ ಪಡುಮಲೆಯನ್ನು ಅಭಿವೃದ್ಧಿ ಪಡಿಸಲು ಪ್ಲ್ರಾನ್‌ ರೂಪಿಸಿ, ಮೊದಲ ಹಂತದ ಅನುದಾನವೂ ಬಿಡುಗಡೆ ಯಾಗಿತ್ತು. ಆದರೆ, ಜನಪ್ರತಿನಿಧಿಗಳ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಅರ್ಧದಲ್ಲೇ ನಿಂತಿದೆ. ಬಿಡುಗಡೆಯಾದ ಅನುದಾನವೂ ಬ್ಯಾಂಕ್‌ನಲ್ಲೇ ಉಳಿದಿದೆ. ಕಾಮಗಾರಿಯ ಮೊದಲ ಹಂತದ ಅನುಷ್ಠಾನಕ್ಕಾಗಿ ಬಿಡು ಗಡೆಗೊಂಡಿದ್ದ 1.50 ಕೋಟಿ ರೂ.ಅನು ದಾನದಲ್ಲಿ ಶಂಖಪಾಲ ಬೆಟ್ಟಕ್ಕೆ ಹೋಗಲು ರಸ್ತೆ, ಕೊಳವೆ ಬಾವಿ, ನೀರಿನ ಟ್ಯಾಂಕ್‌ ರಚನೆ ಬಿಟ್ಟರೆ ಬೇರಾವುದೇ ಕಾಮಗಾರಿ ನಡೆದಿಲ್ಲ. ಆರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೈಯಲ್ಲಿದ್ದ ಯೋಜನೆ ಪ್ರವಾ ಸೋದ್ಯಮ ಇಲಾಖೆಗೆ ಹಸ್ತಾಂತರವಾದ ಬಳಿಕ ಮೂರು ಬಾರಿ ವಿವಿಧ ಮುಖಂಡ ರಿಂದ ಶಿಲಾನ್ಯಾಸವಾಗಿದೆ. ಆದರೆ, ಕಾಮಗಾರಿ ಮುಂದುವರಿದಿಲ್ಲ.

ಪಡುಮಲೆಯ ಅಭಿವೃದ್ಧಿಗಾಗಿ ಡಿ.ವಿ. ಸದಾನಂದ ಗೌಡ ಅವರು ಮುಖ್ಯ ಮಂತ್ರಿಯಾಗಿದ್ದಾಗ 25 ಲಕ್ಷ ರೂ.ಅನುದಾನ ಮಂಜೂರು ಮಾಡಿದ್ದರು. ಸಿದ್ದರಾಮಯ್ಯ ನೇತೃತ್ವದ 2013ರ ಕಾಂಗ್ರೆಸ್‌ ಸರಕಾರದಲ್ಲಿ ಸಚಿವರಾಗಿದ್ದ ವಿನಯ ಕುಮಾರ್‌ ಸೊರಕೆ ಅವರ ಪ್ರಯತ್ನದ ಫ‌ಲವಾಗಿ ಮೊದಲ ಬಜೆಟ್‌ನಲ್ಲಿಯೇ ಪಡುಮಲೆ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಈ ಪೈಕಿ ಮೊದಲ ಹಂತದ ಕಾಮಗಾರಿಗಳಿಗಾಗಿ ಅನುದಾನ ಬಿಡುಗಡೆಯಾಗಿತ್ತು.

2015ರಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ
ಪಡುಮಲೆಯ ಐತಿಹಾಸಿಕ ಕುರುಹುಗಳಿರುವ ಸ್ಥಳಗಳ ಪೈಕಿ ಶಂಖಪಾಲ ಬೆಟ್ಟದಲ್ಲಿ ಮೊದಲ ಹಂತದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗಿತ್ತು. ಸಭಾಭವನ ನಿರ್ಮಾಣ, ಪ್ರಾಚ್ಯ ವಸ್ತು ಸಂಗ್ರಹಾಲಯ, ಗ್ರಂಥಾಲಯ, ಶೌಚಾಲಯ, ಬೆಟ್ಟಕ್ಕೆ ಏರಲು ಎರಡು ಬದಿಗಳಿಂದ ನಡೆದಾಡುವ ಮೆಟ್ಟಿಲು ಹಾಗೂ ಹಸಿರು ಪಾರ್ಕ್‌ ವ್ಯವಸ್ಥೆ, ನೆಲಸಮತಟ್ಟು ಹಾಗೂ ನೀರಿನ ವ್ಯವಸ್ಥೆ, ಮಾಹಿತಿ ಫ‌ಲಕಗಳ ಅಳವಡಿಕೆ ಸೇರಿದಂತೆ ಮೊದಲಾದ ವ್ಯವಸ್ಥೆಗಳನ್ನು ನಡೆಸಲು ಅಂದಾಜು 2.75 ಕೋಟಿ ರೂ. ಯೋಜನೆ ರೂಪಿಸಲಾಗಿತ್ತು. 2015ರ ಜ. 27ರಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ರಮಾನಾಥ ರೈ ನೇತೃತ್ವದಲ್ಲಿ ಶಂಖಪಾಲ ಬೆಟ್ಟದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಕೆಲವೇ ಕೆಲಸಗಳು ಬಿಟ್ಟರೆ ಅದು ಮುಂದುವರಿಯಲಿಲ್ಲ. ಪುತ್ತೂರಿನ ಶಾಸಕರಾಗಿದ್ದ ಶಕುಂತಳಾ ಶೆಟ್ಟಿ, ಸಂಜೀವ ಮಠಂದೂರು ಅವರು ಇದರ ಬಗ್ಗೆ ವಿಶೇಷ ಗಮನ ಹರಿಸಿಲ್ಲ ಎಂಬ ಆರೋಪವಿದೆ. ಈಗಿನ ಶಾಸಕರು ಏನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ.

ಪಡುಮಲೆ ಪ್ರವಾಸೋದ್ಯಮ ಯೋಜನೆ ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯ ಸುಪರ್ದಿಯಲ್ಲಿದ್ದು, ಈ ವಿಚಾರದಲ್ಲಿ ಹಿಂದೆಯೂ ಎರಡು ಬಾರಿ ಸಂಬಂಧ ಪಟ್ಟ ಇಲಾಖೆಗೆ ಪುತ್ತೂರು ಉಪ ವಿಭಾಗಾಧಿಕಾರಿ ಕಚೇರಿಯಿಂದ ಪತ್ರ ಬರೆಯಲಾಗಿದೆ. ಬಿಡುಗಡೆ ಮಾಡ ಲಾದ ಅನುದಾನದ ಬಳಕೆಯ ವಿಚಾರದಲ್ಲಿ ಇನ್ನೊಮ್ಮೆ ಪತ್ರ ಬರೆಯಲಾಗುವುದು. ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಲಾಗುವುದು.
-ಜುಬಿನ್‌ ಮೊಹಾಪಾತ್ರ, ಉಪವಿಭಾಗಾಧಿಕಾರಿ ಪುತ್ತೂರು

Advertisement

-ದಿನೇಶ್‌ ಬಡಗನ್ನೂರು

Advertisement

Udayavani is now on Telegram. Click here to join our channel and stay updated with the latest news.

Next