Advertisement

ಶ್ರೀ ಹಿರಣ್ಯೇಶ್ವರ ದೇಗುಲಕ್ಕೆ  ಕಾಯಕಲ್ಪ ಯಾವಾಗ?

03:56 PM Oct 01, 2022 | Team Udayavani |

ಬಾಗೇಪಲ್ಲಿ: ತಾಲೂಕಿನ ಪ್ರಮುಖ ಐತಿಹಾಸಿಕ ಸ್ಥಳ ಗುಮ್ಮನಾಯಕನ ಪಾಳ್ಯದ 108 ದೇಗುಲಗಳ ಪೈಕಿ, ಬಹುತೇಕ ದೇಗುಲಗಳು ಶಿಥಿಲವಾಗಿವೆ. ಕೈಬೆರಳೆಣಿಕೆಯೆಷ್ಟು ದೇಗುಲಗಳು ಮಾತ್ರ ಅಸ್ತಿತ್ವದಲ್ಲಿದ್ದು, ಕಾಯಕಲ್ಪಕ್ಕೆ ಕಾಯುತ್ತಿವೆ.

Advertisement

ತಾಲೂಕಿನ ಪ್ರಸಿದ್ಧ ದೇಗುಲ ಶ್ರೀ ಹಿರಣ್ಯೇಶ್ವರ ದೇವಸ್ಥಾನ ಗುಮ್ಮನಾಯಕನಪಾಳ್ಯ 108 ದೇವಾಲಯಗಳ ಸ್ಥಳವೆಂದು ಐತೀಹ್ಯವಿದೆ. ಆದರೆ, ಅನೇಕ ದೇಗುಲಗಳು ಹೇಳ ಹೆಸರಿಲ್ಲದಂತೆ ನಾಶವಾಗಿವೆ. ಕಾಲನ ತುಳಿತ ಹಾಗೂ ನಿಧಿಶೋಧಕರ ಹಾವಳಿಯಿಂದ ಪಾಳ್ಯದ ಒಂದೊಂದು ದೇಗುಲವೂ ವಿನಾಶದ ಅಂಚಿಗೆ ತಲುಪುತ್ತಿರುವುದು ಒಂದು ಕಡೆಯಾದರೆ, ರಾಮ ದೇಗುಲದ ಒಳಹೊರಗೆ ಉತ್ತಮವಾದ ಶಿಲ್ಪಕಲೆಯನ್ನು ಒಳಗೊಂಡಿದ್ದು, ಇಂದು ಕುರಿ ಮೇಕೆ ಮತ್ತಿತರೆ ಜಾನು ವಾರುಗಳ ಕೊಟ್ಟಿಗೆಯಾಗಿ ಪರಿಣಮಿಸಿದೆ.

ಈಶ್ಯಾನ ದಿಕ್ಕಿನಲ್ಲಿರುವ ಪರಶು ವೆಂಕಟರಮಣ ಸ್ವಾಮಿ ದೇಗುಲ ಉತ್ತಮವಾದ ಶಿಲ್ಪಕಲೆ ಯನ್ನು ಒಳಗೊಂಡಿದ್ದು, ಗಿಡಗೆಂಟಿಗಳಿಂದ ಆವರಿಸಲ್ಪಟ್ಟಿದೆ. ಮರಗಳು ಬೆಳೆದು ಅವುಗಳ ಬೇರಿನಿಂದ ಇಡೀ ದೇವಾಲಯದ ಗೋಡೆಗಳು ಸೀಳಿವೆ. ರಸ್ತೆಯ ಪಕ್ಕದಲ್ಲೇ ಇರುವ ಶ್ರೀ ಹಿರಣ್ಯೇಶ್ವರ ಸ್ವಾಮಿ ದೇಗುಲದಲ್ಲಿ ನಿತ್ಯ ಪೂಜೆ ನಡೆಯುತ್ತಿರುವುದು ಸಮಾಧನಕರ‌ ಸಂಗಿತಿಯಾಗಿದೆ.

ಪುರಾಣದ ಹಿನ್ನೆಲೆ: ಬಾಗೇಪಲ್ಲಿಯಿಂದ ಪಾತಪಾಳ್ಯಕ್ಕೆ ಹೋಗುವ ಮಾರ್ಗ ಮಧ್ಯೆ ಭೈರವಬೆಟ್ಟ ಹಾಗೂ ರಾಮಗಿರಿ ತಪ್ಪಲಿನಲ್ಲಿ ಈ ಹಿರಣ್ಯೇಶ್ವರ ದೇಗುಲವಿದ್ದು, ಋಷಿ ಪರಶುರಾಮರಿಂದ ಪ್ರತಿಷ್ಠಾಪನೆಯಾಗಿ, ನಂತರ ರಾಮಗಿರಿಯಲ್ಲಿ ತಪಸ್ಸು ಆಚರಿಸಿದಾಗ ಶಿವ ಪಾರ್ವತಿಯರು ಪ್ರತ್ಯೆಕ್ಷರಾಗಿ ವರಗಳನ್ನು ನೀಡಿದರೆಂದು ಪದ್ಮ ಪುರಾಣದಲ್ಲಿ ಉಲ್ಲೇಖವಿದೆ. ನಾಲ್ಕು ದಿಕ್ಕುಗಳಲ್ಲೂ ಹಾಗೂ ಮಧ್ಯ ಭಾಗದಲ್ಲಿ ಒಟ್ಟು ಐದು ಲಿಂಗಗಳನ್ನು ಪ್ರತಿಷ್ಠೆ ಮಾಡಿದ್ದರಿಂದ ಪಂಚನಂದೀಶ್ವರ ದೇಗುಲವೆಂದು ಹೆಸರಾಯಿತು ಎಂಬುದು ಸ್ಥಳಪುರಾಣ ಹೇಳುತ್ತದೆ.

ರಥೋತ್ಸವಗಳಿಗೆ ಸರ್ಕಾರದ ನೆರವು ಅಗತ್ಯ: ಗುಮ್ಮನಾಯಕನಪಾಳ್ಯದ ಪಾಳೇಗಾರರ ಮೂಲ ಪುರುಷ ಖಾದ್ರಿಪತಿನಾಯಕ ಈ ದೇವಾಲಯಕ್ಕೆ ತನ್ನ ತಾಯಿ ಕದಿರಮ್ಮನ ನೆನಪಿಗೆ ದೇವರಾಜಪಲ್ಲಿ, ಸಂಗಟಪಲ್ಲಿ, ಕಾಟಯ್ಯಗಾರಿಪಲ್ಲಿ ಗ್ರಾಮಗಳನ್ನು ಈ ದೇವರ ಅಂಗರಂಗ ವೈಭವಕ್ಕಾಗಿ, ದಿನನಿತ್ಯ ಪೂಜಾ ಕೈಂಕರ್ಯಗಳಿಗಾಗಿ ಧಾನವಾಗಿ ನೀಡಿದರೆಂದು ದೇಗುಲ ಶಿಲಾಶಾಸನಗಳು ಹೇಳುತ್ತವೆ. 1970 ರವರೆಗೂ ದೇಗುಲಕ್ಕೆ ಸುಮಾರು 30 ಎಕರೆ ಜಮೀನಿದ್ದು, ದೇಗುಲದ ಕೈಂಕರ್ಯಗಳು ನಿರ್ವಿಘ್ನವಾಗಿ ನಡೆಯುತ್ತಿತ್ತು. ಭೂ ಸುಧಾರಣೆ ಕಾಯಿದೆ ಬಳಿಕ ಜಮೀನುಗಳು ಪರಭಾರೆಯಾಗಿ ದೇಗುಲಕ್ಕೆ ಬರುವ ಆದಾಯ ಕಡಿಮೆಯಾಗಿದೆ. ಆದಾಗ್ಯೂ ಸಹ ನಿತ್ಯ ಪೂಜೆ, ಅಖಂಡ ದೀಪಾರಾಧನೆ, ಕಲ್ಯಾಣೋತ್ಸವಗಳು ಕ್ರಮಬದ್ದವಾಗಿ ನಡೆದು ಕೊಂಡು ಬರುತ್ತಿವೆ.

Advertisement

ಬ್ರಹ್ಮ ರಥೋತ್ಸವವು ಸುಮಾರು 70 ವರ್ಷಗಳ ಹಿಂದೆಯೇ ನಿಲ್ಲಿಸಲ್ಪಟ್ಟಿದೆ. ಬೃಹದಾಕಾರದ ರಥದ ಚಕ್ರಗಳು ನೆಲಕಚ್ಚಿದ್ದು, ಸರ್ಕಾರ ಆಸಕ್ತಿ ವಹಿಸಿದರೆ ರಥೋತ್ಸವ ನಡೆಸಲು ಕ್ರಮವಹಿಸಬಹುದಾಗಿದೆ.

ಪೂಜೆ, ರಥೋತ್ಸವಕ್ಕೆ ವ್ಯವಸ್ಥೆ ಅವಶ್ಯ : ಶ್ರೀ ಹಿರಣ್ಯೇಶ್ವರ ದೇಗುಲ ಸೇರಿದಂತೆ ಬೃಹತ್‌ ದೇಗುಲಗಳು ಪೂರ್ಣವಾಗಿ ಕಲ್ಲಿನಿಂದ ನಿರ್ಮಾಣಗೊಂಡಿದ್ದು, ಈ ದೇಗುಲದಲ್ಲಿ ಪ್ರತಿ ದಿನ ಪೂಜಾ ಕೈಂಕರ್ಯ ನಡೆಸಲು ವ್ಯವಸ್ಥೆ ಮಾಡಬೇಕಿದೆ. ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ ನಡೆಯಬೇಕು. ಪ್ರತಿವರ್ಷ ಬ್ರಹ್ಮ ರಥೋತ್ಸವ ನಡೆಸಬೇಕು. ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಮುಂದಾಗಬೇಕಾಗಿದೆ. ನೂರು ಹೊಸ ದೇಗುಲಗಳನ್ನು ನಿರ್ಮಿಸುವ ಬದಲು, ಒಂದು ಪ್ರಾಚೀನ ದೇಗುಲ ಸಂರಕ್ಷಣೆ ಮಾಡುವ ಬದ್ಧತೆಯನ್ನು ಸರ್ಕಾರ ಮತ್ತು ಜನಪ್ರತಿನಿಧಿಗಳು ತೋರಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಚಾರಿತ್ರಿಕ ಹಿನ್ನೆಲೆ ಹೊಂದಿರುವ ದೇಗುಲ : ವಿಜಯನಗರ ಸಂಸ್ಥಾನ ಹಕ್ಕಬುಕ್ಕರಿಂದ 1,343 ರಲ್ಲಿ ಸೇನಾಪತಿ ಹಿರಣ್ಣಯ್ಯ ಹಾಗೂ ಹಕ್ಕಬುಕ್ಕರ ಮಗ ಕೆಂಪಣ್ಣರಾಯರು ತಮ್ಮ ಸೈನ್ಯ ಸಮೇತ ಯುದ್ಧಕ್ಕೆ ಹೊರಟು ಬರುವ ಮಾರ್ಗ ಮಧ್ಯದಲ್ಲಿ ಕೆಂಪಣ್ಣರಾಯ ಮತ್ತು ಹಿರಣ್ಣಯ್ಯನವರ ನಡುವೆ ಭಿನ್ನಾಭಿಪ್ರಾಯವಾಗಿ ಹಿರಣ್ಣಯ್ಯ ನವರು ಈ ದೇಗುಲದಲ್ಲೇ ನೆಲೆಸಿದರಂತೆ. ವಿಜಯನಗರದಿಂದ ಸಾಕ್ಷಾತ್‌ ಹಕ್ಕಬುಕ್ಕರೇ ಬಂದು ವಿನಂತಿಸಿದರೂ ಹಿರಣ್ಣಯ್ಯನವರು ತನ್ನ ಕುಟುಂಬದೊಂದಿಗೆ ಇಲ್ಲೇ ವಾಸಿಸಿದರಂತೆ. ನಂತರದ ದಿನಗಳಲ್ಲಿ ಈ ದೇಗುಲವನ್ನು ಜೀರ್ಣೋದ್ಧಾರ ಮಾಡಿಸಿ ಹಕ್ಕಬುಕ್ಕರ ಪ್ರತಿಮೆಗಳನ್ನು ಹಾಗು ತನ್ನ ಪ್ರತಿಮೆಯನ್ನು ಸ್ಥಾಪಿಸಿದ್ದು, ಇಂದಿಗೂ ಆ ಪ್ರತಿಮೆಗಳನ್ನು ನೋಡಬಹುದು. ಈ ಹಿನ್ನೆಲೆ ಶ್ರೀಪಂಚ ಲಿಂಗೇಶ್ವರ ದೇಗುಲ ಶ್ರೀಹಿರಣ್ಯೇಶ್ವರ ದೇಗುಲವೆಂದು ಹೆಸರಾಯಿತು ಎನ್ನಲಾಗಿದೆ.

ದೇಗುಲ ಉಳಿವಿಗೆ ಇಚ್ಛಾಶಕ್ತಿ ಅಗತ್ಯ: ಈ ಪ್ರಾಚೀನ ಕಾಲದ ದೇಗುಲ ಉತ್ತಮವಾದ ಶಿಲ್ಪಕಲೆಯನ್ನುಒಳಗೊಂಡಿದೆ. ದೇವಾಲಯದ ಹಿಂಭಾಗದ ದೊಡ್ಡದಾದ ಕಲ್ಲು ಗುಂಡಿನ ಮೇಲೆ ಪಾಳ್ಯದ ಗುಮ್ಮನಾಯಕನು ಲಿಖೀಸಿರುವ ಶಿಲಾಶಾಸನವಿದೆ. ದೇಗುಲ ಪುಣ್ಯ ಕ್ಷೇತ್ರ ಧಾರ್ಮಿಕಬಾವನೆಯನ್ನು ಪಸರಿಸುತ್ತಾ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಬಹು ಸುದಿಧೀರ್ಘ‌ವಾದ ಅವ ಧಿಯನ್ನು ಕ್ರಮಿಸಿದೆ.ಇಂತಹ ಪ್ರಾಚೀನ ದೇಗುಲ ಉಳಿಸಿಕೊಳ್ಳಲು ಭಕ್ತರು, ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next