Advertisement

ವಿಜೃಂಭಣೆಯ ಶ್ರೀ ಅರ್ಕೇಶ್ವರಸ್ವಾಮಿ ಬ್ರಹ್ಮ ರಥೋತ್ಸವ

08:39 PM Feb 01, 2020 | Lakshmi GovindaRaj |

ಕೆ.ಆರ್‌.ನಗರ: ಪಟ್ಟಣದ ಹೊರ ವಲಯದಲ್ಲಿರುವ ಹಳೆ ಎಡತೊರೆಯ ಮೀನಾಕ್ಷಿ ಸಮೇತ ಶ್ರೀ ಅರ್ಕೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಶನಿವಾರ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

Advertisement

ಬೆಳಗ್ಗೆ 11.30 ರಿಂದ 12.30ರವರೆಗೆ ಸಲ್ಲುವ ಮೇಷ ಲಗ್ನದಲ್ಲಿ ರಥಸಪ್ತಮಿಯ ಅಂಗವಾಗಿ ನಡೆದ ರಥೋತ್ಸವದಲ್ಲಿ ಕೆ.ಆರ್‌.ನಗರ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿ ರಥೋತ್ಸವ ಕಣ್ತುಂಬಿಕೊಂಡರು.

ಉತ್ಸವ ಮೂರ್ತಿಗೆ ವಿಶೇಷ ಪೂಜೆ: ರಥೋತ್ಸವದ ಅಂಗವಾಗಿ ಬೆಳಗ್ಗೆ 5 ಗಂಟೆಯಿಂದಲೇ ತಹಶೀಲ್ದಾರ್‌ ಎಂ.ಮಂಜುಳಾ ಅವರ ನೇತೃತ್ವದಲ್ಲಿ ದೇವರಿಗೆ ಹೋಮ, ಹವನ ಮತ್ತಿತರ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ರಥೋತ್ಸವ ಆರಂಭಕ್ಕೂ ಮುನ್ನ ದೇವರ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಂಗಳ ವಾದ್ಯಗಳೊಂದಿಗೆ ದೇವಾಲಯದಿಂದ ಮೆರವಣಿಗೆಯಲ್ಲಿ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನೆರೆದಿದ್ದ ಭಕ್ತ ಸಮೂಹ ದೇವರಿಗೆ ಜೈ ಕಾರ ಹಾಕಿ ದೇವಾಲಯದ ಸುತ್ತ ಒಂದು ಸುತ್ತು ರಥ ಎಳೆದಾಗ ಹರ್ಷೋ ದ್ಗಾರಗೊಂಡ ಜನರು ಹಣ್ಣು-ದವನ ಎಸೆದು ಹರಕೆ ತೀರಿಸಿದರು.

ಅನ್ನ ಸಂತರ್ಪಣೆ: ಜಾತ್ರೆಗೆ ಬಂದಿದ್ದ ಭಕ್ತರು ಬೆಳಗ್ಗೆಯಿಂದ ರಾತ್ರಿಯವರೆಗೆ ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ನಂತರ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಹರಕೆ ಹೊತ್ತಿದ್ದ ಕೆಲವರು ದೇವಾಲಯದ ಆವರಣದಲ್ಲಿ ಮಜ್ಜಿಗೆ, ಪಾನಕ ಮತ್ತು ಆಹಾರ ಪದಾರ್ಥಗಳನ್ನು ತಯಾರಿಸಿ ಭಕ್ತರಿಗೆ ಬಡಿಸಿ ತಮ್ಮ ಹರಕೆಗಳನ್ನು ತೀರಿಸಿದರು.

Advertisement

ಜಿಪಂ ಸದಸ್ಯ ಡಿ.ರವಿಶಂಕರ್‌, ಪುರಸಭಾ ಸದಸ್ಯ ಕೆ.ಎಲ್‌.ಜಗದೀಶ್‌ ಸೇರಿದಂತೆ ಇತರೆ ಚುನಾಯಿತ ಜನಪ್ರತಿನಿಧಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಶಾಸಕ ಸಾ.ರಾ.ಮಹೇಶ್‌ ಪಾಲ್ಗೊಂಡರು.

ಉಪಭಾಗಾಧಿಕಾರಿ ಬಿ.ಎನ್‌.ವೀಣಾ, ತಹಶೀಲ್ದಾರ್‌ ಎಂ.ಮಂಜುಳಾ, ಮುಖ್ಯಾಧಿಕಾರಿ ಕೆ.ಶಿವಣ್ಣ, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೈ.ಎಸ್‌.ಕುಮಾರ್‌, ವ್ಯವಸ್ಥಾಪಕ ಲಕ್ಷ್ಮೀನಾರಾಯಣ, ನಿರ್ದೇಶಕ ಡಾ.ಎಂ.ಕೆ.ದೇವೇಂದ್ರ ಕುಮಾರ್‌, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಜಿ.ಡಿಂಡಿಮಶಂಕರ್‌ ಸೇರಿದಂತೆ ಇತರೆ ಚುನಾಯಿತ ಜನಪ್ರತಿನಿಧಿಗಳು ಮತ್ತು ಮುಖಂಡರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next