ಹೊಸದಿಲ್ಲಿ : ವಿದ್ಯಾರ್ಥಿನಿಯರಿಗೆ IIT ಯಲ್ಲಿ ಮೀಸಲಾತಿ ಇರಬೇಕೇ ? ಮಂಡಳಿಯೊಂದು ವಿದ್ಯಾರ್ಥಿನಿಯರಿಗೆ IITಯಲ್ಲಿ ಮೀಸಲಾತಿ ಶಿಫಾರಸು ಮಾಡಿದೆ.
ಪ್ರತಿಷ್ಠಿತ ಉನ್ನತ ಶಿಕ್ಷಣಾಲಯಗಳಿಗೆ ವಿದ್ಯಾರ್ಥಿನಿಯರ ಸೇರ್ಪಡೆ ಸಂಖ್ಯೆ ಇಳಿಮುಖವಾಗುತ್ತಿರುವ ಸಮಸ್ಯೆಗೆ ಐಐಟಿಯಂತಹ ಉನ್ನತ ವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರಿಗೆ ಮೀಸಲಾತಿ ಕಲ್ಪಿಸುವುದರಲ್ಲೇ ಪರಿಹಾರವಿದೆ ಎಂದು ಮಂಡಳಿಯು ತನ್ನ ಶಿಫಾರಸಿನಲ್ಲಿ ಹೇಳಿದೆ.
ಐಐಟಿಯಲ್ಲಿ ಲಭ್ಯವಿರುವ ಒಟ್ಟು ಸೀಟುಗಳಲ್ಲಿ ವಿದ್ಯಾರ್ಥಿನಿಯರಿಗೆ ಶೇ.20 ಸೂಪರ್ ನೂಮ್ಯರಿ (supernumerary) ಸೀಟುಗಳನ್ನು ಸೃಷ್ಟಿಸುವಂತೆ ಮಂಡಳಿಯು ಶಿಫಾರಸು ಮಾಡಿದೆ.
ಮಂಡಳಿಯ ಈ ಶಿಫಾರಸಿನ ಬಗೆಗಿನ ಅಂತಿಮ ನಿರ್ಧಾರವನ್ನು ಜಂಟಿ ಪ್ರವೇಶ ಮಂಡಳಿಯು ತನ್ನ ಸಭೆಯಲ್ಲಿ ಕೈಗೊಳ್ಳಲಿದೆ. ಈ ಮಂಡಳಿಯು ವಿದ್ಯಾರ್ಥಿನಿಯರಿಗೆ ಮೀಸಲಾತಿ ಕಲ್ಪಿಸುವುದನ್ನು 2018ರಿಂದ ಆರಂಭಿಸಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸಲಿದೆ.
ಐಐಟಿಗೆ ವಿದ್ಯಾರ್ಥಿನಿಯರು ಸೇರುವ ಸಂಖ್ಯೆಯು ಈಚಿನ ವರ್ಷಗಳಲ್ಲಿ ಇಳಿಮುಖವಾಗುತ್ತಿರುವ ಬಗ್ಗೆ ಕಳವಳ ಹೊಂದಿರುವ ಜಂಟಿ ಪ್ರವೇಶ ಮಂಡಳಿಯು, ಪ್ರೊ| ತಿಮೋಥಿ ಗೊನ್ಸಾಲ್ವಿಸ್ ಅಧ್ಯಕ್ಷತೆಯಲ್ಲಿ ಉಪ ಸಮಿತಿಯೊಂದನ್ನು ರೂಪಿಸಿದೆ. ಈ ಉಪಸಮಿತಿಯು ವಿದ್ಯಾರ್ಥಿನಿಯರ ಪ್ರವೇಶಕ್ಕೆ ಸಂಬಂಧಿಸಿದ ಲೋಪದೋಷಗಳು ಹಾಗೂ ನ್ಯೂನತೆಗಳನ್ನು ಸರಿಪಡಿಸಲಿದೆ.
ವಿದ್ಯಾರ್ಥಿನಿಯರಿಗೆ ಐಐಟಿಯಲ್ಲಿ ಮೀಸಲಾತಿ ಕಲ್ಪಿಸುವುದರಿಂದ ಪುರುಷ ವಿದ್ಯಾರ್ಥಿಗಳಿಗೆ ಲಭ್ಯವಿರುವ ಸೀಟುಗಳ ಪ್ರಮಾಣ ಕಡಿಮೆಯಾಗುವುದಿಲ್ಲ; 2020ರೊಳಗೆ ಒಂದು ಲಕ್ಷ ಸೀಟುಗಳ ಐಐಟಿ ಗುರಿಯನ್ನು ತಲುಪುವುದು, ವಿದ್ಯಾರ್ಥಿನಿಯರಿಗೆ ಮೀಸಲಾತಿ ಕಲ್ಪಿಸುವುದರಿಂದ ಸುಲಭವೇ ಆಗಲಿದೆ ಎಂದು ಮಂಡಳಿ ಹೇಳಿದೆ. ಅಲ್ಲದೆ ಜೆಇಇ-ಅಡ್ವಾನ್ಸ್‌ಡ್ ಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳನ್ನು ಕೂಡ ಪರಿಗಣಿಸಲಾಗುವುದು ಎಂದು ಮಂಡಳಿ ತಿಳಿಸಿದೆ.