ಖಾನಾಪುರ: ತಾಲೂಕಿನಲ್ಲಿ ಈ ವರ್ಷ ಅಂದಾಜು ಎರಡು ಸಾವಿರ ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ ಬೆಳೆದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಬಿಡುಗಡೆ ಮಾಡಿದ ಸಬ್ಸಿಡಿ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಿದೆ.
ಉತ್ತಮ ಇಳುವರಿ ಬಂದಿದ್ದರೂ ರೈತರಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತಾಗಿದೆ. ಮಾ. 23ರಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಮೆಣಸಿನ ಕಾಯಿ ಮಾರುಕಟ್ಟೆಯಲ್ಲಿ ಕೆಜಿಗೆ 2 ರೂ.ಗೆ ಕುಸಿದಿತ್ತು. ನಂತರ ಒಂದಿಷ್ಟು ಚೇತರಿಸಿಕೊಂಡು 8 ರೂ. ದರ ದೊರಕಿತು. ಆದರೆ ರೈತರಿಗೆ ಕೂಲಿ ಹಣ ಮತ್ತು ರಸಗೊಬ್ಬರ ಖರ್ಚು ಕೂಡ ಮರಳಲಿಲ್ಲ. ಇದೀಗ ಕೆಜಿಗೆ 14 ರೂ. ದರ ಇದ್ದರೂ ರೈತರಿಗೆ ಸಂತೃಪ್ತಿಯಾಗಿಲ್ಲ. ಈ ವರ್ಷ 4 ಸಾವಿರ ರೈತರು ಮೆಣಸಿನ ಬೆಳೆ ಬೆಳೆದಿದ್ದು, ಸರ್ಕಾರದ ಘೋಷಿಸಿದ ಸಬ್ಸಿಡಿ ಮರೀಚಿಕೆಯಾಗಿದೆ.
ಸರ್ಕಾರದ ನಿಯಮಾವಳಿಯಲ್ಲಿ 462 ಹೆಕ್ಟೇರ್ ಮೆಣಸಿನ ಬೆಳೆಯ ಫಲಾನುಭವಿಗಳು ಇದ್ದು, ಕೇವಲ 450 ಜನರು ಮಾತ್ರ ಫಲಾನುಭವಿಗಳು ಆಗುತ್ತಾರೆ. ಮಾ. 23ರಿಂದ ಹತ್ತು ದಿನಗಳ ಕಾಲ ಮಾರುಕಟ್ಟೆ ಇಲ್ಲದ ಸಮಯದಲ್ಲಿ ಮೆಣಸಿನ ಬೆಳೆ ಮಾರಾಟ ಮಾಡುತ್ತಿದ್ದ ರೈತರು ಮಾತ್ರ ಸಬ್ಸಿಡಿ ಪಡೆಯಲು ಅರ್ಹರಾಗುತ್ತಾರೆ ಎನ್ನುವುದು ತೋಟಗಾರಿಕೆ ಇಲಾಖೆ ಅಭಿಪ್ರಾಯ.
ರೈತರ ಬಗ್ಗೆ ಅಧಿಕಾರಿಗಳ ನೀತಿ ಕೂಡ ಗೊಂದಲಮಯವಾಗಿದೆ. ತೋಟಗಾರಿಕೆ ಇಲಾಖೆ ಖಾಸಗಿ ವ್ಯಕ್ತಿಗಳಿಂದ ಜನವರಿ-ಫೆಬ್ರವರಿಯಲ್ಲಿ ಮೆಣಸಿನಕಾಯಿ ಬೆಳೆದ ರೈತರ ಗದ್ದೆಗಳ ಸರ್ವೇ ಮಾಡಿಸಿದೆ. ಸರ್ವೇಯಲ್ಲಿ ಸಾಕಷ್ಟು ಲೋಪಗಳಿದ್ದು, ಗೊಂದಲಗಳಿಂದ ರೈತರು ಫಲಾನುಭವಿಗಳಾಗುತ್ತಿಲ್ಲ. ರೈತರು ಕಬ್ಬು ಮತ್ತು ಭತ್ತ ಫಸಲು ಮಾತ್ರ ತೋರಿಸಿ ಕೃಷಿ ಸಾಲ ಪಡೆಯುತ್ತಾರೆ. ಮೆಣಸಿನ ಬೆಳೆ ಪ್ರತ್ಯೇಕವಾಗಿ ತೋರಿಸುವುದಿಲ್ಲ. ಭತ್ತ ಮತ್ತು ಕಬ್ಬು ಕಟಾವು ನಂತರ ಮೆಣಸಿನ ಬೆಳೆ ಬೆಳೆಯಲಾಗುತ್ತದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಪ್ರಕಾರ ರೈತರು ಮೆಣಸಿನ ಬೆಳೆ ಕುರಿತು ಫಸಲು ತೋರಿಸದೇ ಇರುವುದರಿಂದ ಇವರಿಗೆ ಸಬ್ಸಿಡಿ ದೊರೆಯುವುದು ಕಷ್ಟ ಎನ್ನುತ್ತಾರೆ. ಖಾನಾಪುರ, ಬೀಡಿ ಮತ್ತು ಜಾಂಬೋಟಿ ಹೋಬಳಿಗಳಲ್ಲಿ ಅಧಿಕ ಮೆಣಸಿನ ಬೆಳೆ ಬೆಳೆಯಲಾಗುತ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿ ಚಿಕ್ಕದಿನಕೊಪ್ಪ ಮತ್ತು ಕಡತನಬಾಗೇವಾಡಿ ಗ್ರಾಮಗಳಲ್ಲಿ ಮೆಣಸಿನ ಬೆಳೆಗೆ ಮಾರುಕಟ್ಟೆ ಕಲ್ಪಿಸಲಾಗಿದ್ದರೂ ದಲ್ಲಾಳಿಗಷ್ಟೇ ಲಾಭವಾಗಿದೆ.
ಮೆಣಸಿನ ಬೆಳೆ ಫಲಾನುಭವಿಗಳ ಆಯ್ಕೆ ವಿಷಯದಲ್ಲಿ ಯಾವ ಹಸ್ತಕ್ಷೇಪವೂ ಇಲ್ಲ. ನಿಯಮಾವಳಿ ಪ್ರಕಾರವೇ ಫಲಾನುಭವಿಗಳ ಆಯ್ಕೆ ಇಲ್ಲಿ ನಡೆಯುತ್ತದೆ.
–ಶಮಂತ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ
ಮೆಣಸಿನ ಬೆಳೆ ಬೆಳೆದ ರೈತ ಫಲಾನುಭವಿಗಳ ಆಯ್ಕೆ ಅವೈಜ್ಞಾನಿಕವಾಗಿದೆ. ಮೆಣಸಿನ ಬೆಳೆ ಬೆಳೆದ ರೈತರೆಲ್ಲರೂ ಫಲಾನುಭವಿಗಳಾಗಬೇಕು.
–ಯಶವಂತ ಕೊಡೋಳ್ಳಿ, ನಿರ್ದೇಶಕ ಟಿಎಪಿಸಿಎಂಎಸ್ ನಂದಗಡ -ಮೆಣಸಿನ ಬೆಳೆ ಬೆಳೆದ ರೈತರು
ಸಂಕಷ್ಟದಲ್ಲಿದ್ದು ಸರ್ಕಾರ ನೆರವಿಗೆ ಬರಬೇಕು. ಸರ್ಕಾರದ ನಿಯಮಗಳು ರೈತರಿಗೆ ಅನ್ಯಾಯ ಮಾಡುವಂತಿವೆ.
-ಹಣಮಂತ ಪಾಟೀಲ, ಬಿಜೆಪಿ ಮುಖಂಡ
-ಜಗದೀಶ ಹೊಸಮನಿ