ಬೆಂಗಳೂರು: ನೇತ್ರಾವತಿ, ಕುಮಾರಧಾರಾ, ಕಾವೇರಿ, ಕೃಷ್ಣಾ, ಕಾಳಿ ಸಹಿತ ರಾಜ್ಯದ 17 ಪ್ರಮುಖ ನದಿಗಳು ಮತ್ತು ಉಪನದಿಗಳು ಮಲಿನಗೊಂಡಿದ್ದು, ಇವುಗಳಿಗೆ ಎಲ್ಲಿ ತ್ಯಾಜ್ಯ ಸೇರುತ್ತಿದೆ ಎಂಬುದನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪತ್ತೆಹಚ್ಚಿದೆ.
ಮಾಲಿನ್ಯ ತಪ್ಪಿಸುವ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಗರಾಭಿವೃದ್ಧಿ ಇಲಾಖೆ, ಜಲಮಂಡಳಿ, ಸ್ಥಳೀಯ ಸಂಸ್ಥೆಗಳ ಸಹಿತ ಇಲಾಖೆಗಳಿಗೆ ನಿರ್ದೇಶನ ನೀಡಿದೆ.
ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನ ಸಭೆ ಯಲ್ಲಿ ನದಿ ಗಳಿಗೆ ಯಾವ ನಿರ್ದಿಷ್ಟ ಭಾಗದಲ್ಲಿ ಹೊಲಸು ಸೇರುತ್ತಿದೆ, ಎಷ್ಟು ಕಿ.ಮೀ., ಯಾವ ಪ್ರದೇಶದಿಂದ ಯಾವ ನಿರ್ದಿಷ್ಟ ಪ್ರದೇಶದಲ್ಲಿ ಸಮಸ್ಯೆ ಇದೆ ಮತ್ತು ಇದನ್ನು ಸರಿಪಡಿಸುವುದು ಹೇಗೆ ಎಂಬ ಬಗ್ಗೆ ಚರ್ಚೆ ಮಾಡಲಾಗಿದೆ.
ಮಂಡಳಿ ಗುರುತಿಸಿರುವ ಪ್ರಮುಖ 17 ನದಿಗಳು ಮತ್ತು ಉಪನದಿಗಳಲ್ಲಿ ನೇತ್ರಾವತಿ, ಕುಮಾರಧಾರಾ, ತುಂಗಭದ್ರಾ, ಕಾವೇರಿ, ಕಬಿನಿ, ಕಾಳಿ ಸೇರಿವೆ.
ನದಿಗಳಿಗೆ ಕೈಗಾರಿಕೆ ತ್ಯಾಜ್ಯ, ಹಸಿ ಮತ್ತು ಒಣಕಸ ಹಾಗೂ ವೈದ್ಯಕೀಯ ತ್ಯಾಜ್ಯ ನದಿಗಳಿಗೆ ಸೇರ್ಪಡೆಯಾಗದಂತೆ ತಡೆಯುವ ಸಂಬಂಧ ಪ್ರಗತಿ ಪರಿಶೀಲನೆ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ವಿಜಯಕುಮಾರ್ ಗೋಗಿ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ರಾಜ್ಯದ ಜೀವನಾಡಿಗಳಾಗಿರುವ ಕಾವೇರಿ ನದಿಗೆ 50 ಕಿ.ಮೀ. ಭಾಗದಲ್ಲಿ, ಕೃಷ್ಣಾ ನದಿಯ 189 ಕಿ.ಮೀ. ಉದ್ದದ ಭಾಗ ಮಲಿನಗೊಂಡಿದೆ ಎಂದು ಗುರುತಿಸಲಾಗಿದೆ.
ಕೊಳಚೆ ನೀರು ಶುದ್ಧೀಕರಣ ಘಟಕ, ಕೊಳಚೆ ನೀರು ಮತ್ತು ತ್ಯಾಜ್ಯ ಸೇರು ವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
– ವಿಜಯಕುಮಾರ್ ಗೋಗಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ