ಬೆಂಗಳೂರು: ಉದ್ಯಮಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ಮನೆಕೆಲಸಗಾರ ಮತ್ತು ಭದ್ರತಾ ಸಿಬ್ಬಂದಿಯನ್ನು ಕೊಲೆಗೈದು, ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿರುವ ಘಟನೆ ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದಾವಣಗೆರೆ ಮೂಲದ ಕರಿಯಪ್ಪ(52) ಮತ್ತು ನೇಪಾಳ ಮೂಲದ ದಿಲ್ ಬಹದ್ದೂರ್ (50) ಕೊಲೆಯಾದವರು. ಕೃತ್ಯ ಎಸಗಿರುವ ಹಂತಕರು ಮನೆಯಲ್ಲಿದ್ದ ಐದು ಲಕ್ಷ ರೂ. ನಗದು, 100 ಗ್ರಾಂಗೂ ಅಧಿಕ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಕೃತ್ಯ ಎಸಗಿದ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ. ಕೋರಮಂಗಲದ 6ನೇ ಬ್ಲಾಕ್ ನಲ್ಲಿರುವ ದಾವಣಗೆರೆ ಮೂಲದ ರಾಜಗೋಪಾಲರೆಡ್ಡಿ ಎಂಬವರ ಮನೆಯಲ್ಲಿ ಭಾನುವಾರ ನಸುಕಿನಲ್ಲಿ ದುರ್ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು.
ರಾಜಗೋಪಾಲ ರೆಡ್ಡಿ ಶಿಕ್ಷಣ ಸಂಸ್ಥೆಯ ಪಾಲುದಾರರಾಗಿದ್ದಾರೆ. ಕರಿಯಪ್ಪ 30 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ದಿಲ್ ಬಹದ್ದೂರ್ 2 ವರ್ಷಗಳಿಂದ ಭದ್ರತಾ ಸಿಬ್ಬಂದಿಯಾಗಿದ್ದ. ಶನಿವಾರ ಸಂಬಂಧಿಕರೊಬ್ಬರ ಮದುವೆಗಾಗಿ ರಾಜಗೋಪಾಲರೆಡ್ಡಿ ಕುಟುಂಬ ಸಮೇತ ಅನಂತಪುರಕ್ಕೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಕೆಲಸಗಾರ ಕರಿಯಪ್ಪ ಮತ್ತು ಭದ್ರತಾ ಸಿಬ್ಬಂದಿ ದಿಲ್ ಬಹದ್ದೂರ್ ಇಬ್ಬರೇ ಇದ್ದರು. ಭಾನುವಾರ ನಸುಕಿನ 12.30ರ ಸುಮಾರಿಗೆ ಮನೆಗೆ ನುಗ್ಗಿರುವ ಹಂತಕರು ಮೊದಲಿಗೆ ಕರಿಯಪ್ಪನ ಮೇಲೆ ಹಲ್ಲೆ ನಡೆಸಿ, ಕೈ ಮತ್ತು ಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ. ಬೆಳಗ್ಗೆ ಇತರೆ ಮನೆಕೆಲಸಗಾರರು ಮನೆಗೆ ಬಂದಾಗ ಕರಿಯಪ್ಪನ ಕೊಲೆ ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಕೋರಮಂಗಲ ಪೊಲೀಸರು ಸ್ಥಳ ಮಹಜರು ಆರಂಭಿಸಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ದಿಲ್ ಬಹದ್ದೂರ್ ಕೆಲಸಗಾರನನ್ನು ಕೊಂದು ದರೋಡೆ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿತ್ತು.
ಸೆಕ್ಯೂರಿಟಿ ಗಾರ್ಡ್ ಹತ್ಯೆ: ಆದರೆ ಮೂರು ನೀರಿನ ಸಂಪ್‌ಗ್ಳ ಶೋಧಿಸಿದಾಗ ಸಂಜೆ ವೇಳೆಗೆ ಒಂದು ಸಂಪ್‌ನಲ್ಲಿ ಭದ್ರತಾ ಸಿಬ್ಬಂದಿ ದಿಲ್ ಬಹದ್ದೂರ್ ಮೃತದೇಹ ಪತ್ತೆಯಾಗಿದೆ. ಆತನ ಮೇಲೂ ಹಲ್ಲೆ ನಡೆಸಿ ಕೈ, ಕಾಲು ಕಟ್ಟಿ ನೀರಿನ ಸಂಪ್‌ನಲ್ಲಿ ಹಾಕಲಾಗಿದೆ. ಪ್ರಾಥಮಿಕ ವಿಚಾರಣೆ ಯಲ್ಲಿ ದಿಲ್ ಬಹದ್ದೂರ್ ನೇಪಾಳ ಮೂಲದವ ನಾಗಿದ್ದು, ಅಸ್ಸಾಂ ನಿವಾಸಿ ಎಂದು ಆಧಾರ್ ಕಾರ್ಡ್ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು. ಆರೋಪಿಗಳ ಪತ್ತೆಯಾಗಿ ಎರಡು ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಡಿವಿಆರ್ ಕದ್ದು ಆರೋಪಿಗಳು ಎಸ್ಕೇಪ್: ಜೋಡಿ ಕೊಲೆಗೈದ ಹಂತಕರು ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ. ಜತೆಗೆ ಸಾಕ್ಷ್ಯನಾಶ ಪಡಿಸುವ ಉದ್ದೇಶದಿಂದ ಮನೆಯ ಸಿಸಿ ಕ್ಯಾಮೆರಾಗಳನ್ನು ಹಾನಿಗೊಳಿಸಿದ್ದು, ಅದರ ಡಿವಿಆರ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ. ಹೀಗಾಗಿ ಪೊಲೀಸರು ಮನೆಯ ಸುತ್ತ-ಮುತ್ತಲ ಕಟ್ಟಡಗಳ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ಹಂತಕರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಮತ್ತೂಂದೆಡೆ ಕೃತ್ಯದ ಮಾದರಿ ಗಮನಿಸಿದರೆ, ರಾಜಗೋಪಾಲ ರೆಡ್ಡಿ ಮತ್ತು ಅವರ ಮನೆ ಕೆಲಸಗಾರರ ಬಗ್ಗೆ ತಿಳಿದುಕೊಂಡಿರುವ ವ್ಯಕ್ತಿಗಳೇ ಕರಿಯಪ್ಪ ದಿಲ್ ಬಹದ್ದೂರ್ ಕೊಲೆಗೈದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದರು.
ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಎರಡು ತಂಡ ರಚಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ನಗದು, ಚಿನ್ನಾಭರಣಕ್ಕಾಗಿ ಕೊಲೆಗೈಯಲಾಗಿದೆ ಎಂಬುದು ಗೊತ್ತಾಗಿದೆ
. -ಸಿ.ಕೆ.ಬಾಬಾ, ಆಗ್ನೇಯ ವಿಭಾಗ ಡಿಸಿಪಿ