Advertisement

ರಾಣೆ ಸಂಪುಟಕ್ಕೆ ಬಂದ್ರೆ ಸರ್ಕಾರಕ್ಕೆ ಗುಡ್‌ಬೈ

10:53 AM Nov 02, 2017 | Team Udayavani |

ಮುಂಬಯಿ: ರಾಜ್ಯದ  ಮಾಜಿ ಮುಖ್ಯಮಂತ್ರಿ ನಾರಾಯಣ  ರಾಣೆ ಅವರನ್ನು ಸಚಿವ ಸಂಪುಟಕ್ಕೆ  ಸೇರ್ಪಡೆ ಗೊಳಿಸಿದ್ದೇ ಆದಲ್ಲಿ ಪಕ್ಷ  ಸರಕಾರದಿಂದ ಹೊರನಡೆಯಲಿದೆ ಎಂದು ಶಿವಸೇನೆ  ಮುಖ್ಯಮಂತ್ರಿ  ಫ‌ಡ್ನವೀಸ್‌ಗೆ ನೇರ ವಾಗಿ ಬೆದರಿಕೆ ಒಡ್ಡಿದೆ ಎನ್ನಲಾಗಿದೆ. ಶಿವಸೇನೆ  ವರಿಷ್ಠ ಉದ್ಧವ್‌ ಠಾಕ್ರೆ  ಅವರ  ಆಪ್ತ ಸಹಾಯಕ ಮಿಲಿಂದ್‌ ನಾರ್ವೇಕರ್‌ ಅವರ ಮೂಲಕ  ಮುಖ್ಯಮಂತ್ರಿಯವರಿಗೆ ಈ  ಸಂದೇಶವನ್ನು  ರವಾನಿಸಲಾಗಿದೆ ಎನ್ನಲಾಗಿದೆ. ಆದರೆ ಮುಖ್ಯಮಂತ್ರಿ  ದೇವೇಂದ್ರ ಫ‌ಡ್ನವೀಸ್‌ ಶಿವಸೇನೆಯ ಆಪ್ತ ಸಹಾಯಕನಿಂದ ಎಚ್ಚರಿಕೆಯನ್ನು ಪಡೆಯುವಷ್ಟು ಅನಿವಾರ್ಯ ಪರಿಸ್ಥಿತಿ ತನಗಿನ್ನೂ ಬಂದೊದಗಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 

Advertisement

ಮಿಲಿಂದ್‌ ನಾರ್ವೇಕರ್‌ ಅವರು ಕಳೆದ ವಾರ ಮುಖ್ಯಮಂತ್ರಿ  ದೇವೇಂದ್ರ ಫ‌ಡ್ನವೀಸ್‌ ಅವರನ್ನು  ಭೇಟಿ ಯಾಗಿ  ನಾರಾಯಣ ರಾಣೆ ಸಂಪುಟ ಸೇರ್ಪಡೆಯನ್ನು  ಶಿವಸೇನೆ  ವರಿಷ್ಠ  ಉದ್ಧವ್‌ ವಿರೋಧಿಸುತ್ತಿರುವ  ಮಾಹಿತಿಯನ್ನು ಅವರಿಗೆ ತಲುಪಿಸಿದರು ಎನ್ನಲಾಗಿದೆ. 

ಒಂದೇ ವೇಳೆ  ರಾಣೆ ಅವರನ್ನು  ಸಂಪುಟಕ್ಕೆ  ಸೇರ್ಪಡೆಗೊಳಿಸಿದ್ದೇ  ಆದಲ್ಲಿ  ಸರಕಾರದ  ಸ್ಥಿರತೆಯ  ಬಗೆಗೆ  ಶಿವಸೇನೆಯನ್ನು  ಅವಲಂಬಿಸದಿರುವಂತೆ  ನಾರ್ವೇಕರ್‌  ಸ್ಪಷ್ಟ ಮಾತುಗಳಲ್ಲಿ ಫ‌ಡ್ನವೀಸ್‌ಗೆ  ಎಚ್ಚರಿಕೆಯನ್ನು  ನೀಡಿದ್ದಾರೆ ಎನ್ನಲಾಗಿದೆ.                   

ಫ‌ಡ್ನವೀಸ್‌  ತಿರುಗೇಟು
ಆದರೆ ಈ ಕುರಿತಾಗಿನ  ವರದಿಗಳ  ಬಗೆಗೆ  ಪ್ರತಿಕ್ರಿಯೆ ನೀಡಿದ  ಮುಖ್ಯಮಂತ್ರಿ ದೇವೇಂದ್ರ  ಫ‌ಡ್ನವೀಸ್‌ ಅವರು “ನಾರ್ವೇಕರ್‌  ಓರ್ವ ಸಭ್ಯ ವ್ಯಕ್ತಿ. ಆದರೆ ರಾಜಕಾರಣಿಯೋರ್ವರನ್ನು  ಎನ್‌ಡಿಎ  ತೆಕ್ಕೆಗೆ  ಸೇರ್ಪಡೆಗೊಳಿಸುವ  ಕುರಿತಂತೆ  ಅವರಿಂದ  ಪಾಠ ಹೇಳಿಸಿಕೊಳ್ಳುವಂತಹ  ಅನಿವಾರ್ಯತೆ ಸೃಷ್ಟಿಯಾಗಿಲ್ಲ’ ಎಂದರು. 

ನಾರಾಯಣ ರಾಣೆ ಅವರು  ಶಿವಸೇನೆ ನಾಯಕರಲ್ಲವಾಗಿದ್ದು  ಅವರ ಸೇರ್ಪಡೆಗೆ  ಸಂಬಂಧಿಸಿದಂತೆ  ಪಕ್ಷಕ್ಕೆ  ಯಾವುದೇ  ಆಕ್ಷೇಪವಿರಬಾರದು. ಈ ಹಿಂದೆ  ರಾಣೆ ಅವರು ಶಿವಸೇನೆಯಲ್ಲಿದ್ದರಾದರೂ ಆ ಬಳಿಕ  ಕಾಂಗ್ರೆಸ್‌ಗೆ  ಸೇರ್ಪಡೆಯಾಗಿದ್ದರು. ಇದೀಗ ಕಾಂಗ್ರೆಸ್‌  ತೊರೆದು  ತಮ್ಮದೇ ಆದ  ಪಕ್ಷವನ್ನು  ರಚಿಸಿದ್ದಾರೆ. ರಾಣೆ  ಅವರ  ಪಕ್ಷ  ಎನ್‌ಡಿಎಗೆ  ಬೆಂಬಲ ನೀಡಿದ್ದು  ಅವರು  ತನ್ನ  ಸಂಪುಟವನ್ನು  ಸೇರ್ಪಡೆಗೊಳ್ಳುವ ಅಭಿಲಾಷೆಯನ್ನು  ವ್ಯಕ್ತಪಡಿಸಿದ್ದಾರೆ. ರಾಣೆ ಅವರನ್ನು ಸಂಪುಟಕ್ಕೆ  ಸೇರ್ಪಡೆಗೊಳಿಸುವ ವಿಚಾರದಲ್ಲಿ ಪಕ್ಷ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು.  ಆದರೆ  ಶಿವಸೇನೆಯ ಯಾವನೇ ಓರ್ವ ನಾಯಕನನ್ನು ಬಿಜೆಪಿಗೆ ಸೇರ್ಪಡೆಗೊಳಿಸದಿರಲು  ಪಕ್ಷ  ನಿರ್ಧರಿಸಿದೆ ಎಂದವರು ಹೇಳಿದರು. ರಾಜ್ಯ ಮತ್ತು ರಾಷ್ಟ್ರ  ಮಟ್ಟದಲ್ಲಿ ಎನ್‌ಡಿಎಯನ್ನು ಬಲಪಡಿಸಲು ಎಲ್ಲಾ  ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ರಾಜ್ಯದಲ್ಲಿ ಹಲವಾರು ಸಣ್ಣ  ಪಕ್ಷಗಳು  ಎನ್‌ಡಿಎಯನ್ನು  ಬೆಂಬಲಿಸುತ್ತಿವೆ.ರಾಣೆ ಅವರೂ ಎನ್‌ಡಿಎಯನ್ನು ಬೆಂಬಲಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next