Advertisement

Udupi: ಶಿರ್ವ ಕೋಡು ಪಂಜಿಮಾರು ಪರಿಸರದಲ್ಲಿ ಚಿರತೆ ಹಾವಳಿ

03:55 PM Dec 03, 2024 | Team Udayavani |

ಶಿರ್ವ: ಇಲ್ಲಿನ ಗ್ರಾ. ಪಂ.ವ್ಯಾಪ್ತಿಯ ಕೋಡು ಪಂಜಿಮಾರು ಪರಿಸರದಲ್ಲಿ ಕಳೆದ ಕೆಲವು ಸಮಯಗಳಿಂದ ಚಿರತೆ ಓಡಾಡುತ್ತಿದ್ದು ಗ್ರಾಮಸ್ಥರು ಭಯ ಭೀತರಾಗಿದ್ದಾರೆ.

Advertisement

ಮಂಗಳವಾರ (ಡಿ.03) ಬೆಳಗ್ಗೆ ಪಂಜಿಮಾರು ಮಠದ ಕಾಡಿನ ಬಳಿ ಚಿರತೆಯೊಂದು ಪಂಜಿಮಾರು-ಸೋದೆ ಮಠದ ರಸ್ತೆಯಲ್ಲಿ ಅಡ್ಡ ಬಂದಿದ್ದು, ದ್ವಿಚಕ್ರ ವಾಹನದಲ್ಲಿ ತಾಯಿಯನ್ನು ಬಸ್ಸಿಗೆ ಬಿಟ್ಟು ಮನೆಗೆ ಹಿಂತಿರುಗುತ್ತಿದ್ದ ಹುಡುಗನೋರ್ವ ಚಿರತೆಯನ್ನು ಕಂಡು ಭಯಭೀತನಾಗಿದ್ದಾನೆ.

ಕಳೆದೆರಡು ದಿನಗಳಲ್ಲಿ ಪಂಜಿಮಾರು ಪಡುಮನೆ ಬಳಿಯ ಮನೆಯೊಂದರ ನಾಯಿ ಮತ್ತು ಪಂಜಿಮಾರು ಆನಂದ ಕುಲಾಲ್‌ ಅವರ ಮನೆಯ ಸಾಕುನಾಯಿಗಳನ್ನು ಚಿರತೆ ಬೇಟೆಯಾಡಿ ತಿಂದು ಹಾಕಿದೆ. ಸ್ಥಳೀಯ ಗ್ರಾ.ಪಂ ಸದಸ್ಯ ರಾಜೇಶ್‌ ಶೆಟ್ಟಿ ಚಿರತೆ ಓಡಾಡುತ್ತಿದ್ದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ರಕ್ಷಕ ಚರಣ್‌ ಜೋಗಿ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೋನು ತಂದಿರಿಸಿದ್ದಾರೆ.

ಕುಂಜಾರು, ಕುರ್ಕಾಲು, ಪಡುಬೆಳ್ಳೆ, ಪಾಂಬೂರು ಪರಿಸರದಲ್ಲಿ ಚಿರತೆ ಹಾವಳಿ ಇದ್ದು, ಕೆಲವು ವರ್ಷಗಳ ಹಿಂದೆ ಪಾಂಬೂರು ಪರಿಸರದಲ್ಲಿ ರಸ್ತೆಯಲ್ಲಿ ಓಡಾಡುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆಯವರು ಇರಿಸಿದ ಬೋನಿಗೆ ಬಿದ್ದಿತ್ತು. ಸ್ವಲ್ಪ ಸಮಯದ ಬಳಿಕ ಮತ್ತೊಂದು ಚಿರತೆ ಸಡಂಬೈಲು ಪರಿಸರದಲ್ಲಿ ನಾಯಿಯೊಂದನ್ನು ಮನೆಯವರ ಎದುರೇ ಕೊಂಡೊಯ್ದು ಕೊಂದು ಹಾಕಿತ್ತು.

ಈ ರಸ್ತೆಯಲ್ಲಿ ಪ್ರತಿದಿನ ಶಿರ್ವದ ವಿವಿಧ ಶಾಲಾ ಕಾಲೇಜುಗಳಿಗೆ ಕಾಲ್ನಡಿಗೆಯಲ್ಲಿ ಹೋಗುವ ವಿದ್ಯಾರ್ಥಿಗಳು, ವಿವಿಧ ಸ್ಥಳಗಳಿಗೆ ಕೆಲಸಕ್ಕೆ ಹೋಗುವ ಪರಿಸರದ ನಾಗರಿಕರು, ವಾಹನ ಸವಾರರು ಭಯಭೀತರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next