Advertisement

ಶಿರಾಡಿ, ಚಾರ್ಮಾಡಿ ಮಾರ್ಗ ಎರಡೂ ಬಂದ್‌

11:53 AM Jun 13, 2018 | |

ಚಿಕ್ಕಮಗಳೂರು/ಮಂಗಳೂರು: ಶಿರಾಡಿ ಘಾಟ್‌ ಹೆದ್ದಾರಿಯಲ್ಲಿ ಕಾಂಕ್ರೀಟ್‌ ಕಾಮಗಾರಿಯಿಂದಾಗಿ ಸಂಚಾರ ಸ್ಥಗಿತಗೊಂಡಿದೆ. ಇದಕ್ಕೆ ಪರ್ಯಾಯವಾಗಿ ಬಳಕೆಯಾಗುತ್ತಿದ್ದ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಭೂಕುಸಿತದಿಂದ ತೊಂದರೆಯಾಗಿದೆ. ಬೆಂಗಳೂರು- ಮಂಗಳೂರು ಸಂಪರ್ಕಕ್ಕೆ ಹೆಬ್ಟಾಗಿಲಿನಂತಿರುವ ಈ ಎರಡೂ ಹೆದ್ದಾರಿಗಳಲ್ಲಿ ಸಂಚಾರ ಸ್ಥಗಿತಗೊಂಡ ಕಾರಣ ಜನರು ಪರ್ಯಾಯ ಮಾರ್ಗದ ಅನಿವಾರ್ಯತೆ ಎದುರಾಗಿದೆ.

Advertisement

ಮಳೆಗಾಲದಲ್ಲಿ ಚಾರ್ಮಾಡಿ ಘಾಟ್‌ ಹೆದ್ದಾರಿಯಲ್ಲಿ ಪ್ರತಿವರ್ಷ ಅಲ್ಲಲ್ಲಿ ಭೂಕುಸಿತ ಉಂಟಾಗುತ್ತದೆ. ಮರ ಬಿದ್ದು ವಾಹನಗಳ ಓಡಾಟಕ್ಕೆ ತೊಂದರೆಯಾಗುವುದು ಸಾಮಾನ್ಯ. ಆಗ ಶಿರಾಡಿ ರಸ್ತೆಯ ಮೂಲಕ ಸಂಚಾರ ನಡೆಯುತ್ತದೆ.

ಆದರೆ ಈ ಬಾರಿ ಶಿರಾಡಿ ರಸ್ತೆಯಲ್ಲಿ ಕಾಂಕ್ರೀಟ್‌ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಕಳೆದ ಜನವರಿಯಿಂದಲೇ ಬಂದಾಗಿದೆ. ಸುಳ್ಯ-ಮಡಿಕೇರಿ ಹೆದ್ದಾರಿ ಹೊರತುಪಡಿಸಿದರೆ ಬೆಂಗಳೂರು- ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಅತಿಕಡಿಮೆ ದೂರದ ರಸ್ತೆ ಚಾರ್ಮಾಡಿ ಘಾಟ್‌ ಹೆದ್ದಾರಿ. ಈ ಕಾರಣಕ್ಕಾಗಿ ಹೆಚ್ಚಿನ ವಾಹನಗಳು ಈಗ ಅದೇ ಮಾರ್ಗದಲ್ಲಿ ಸಂಚರಿಸುತ್ತಿವೆ.

ಬಂದ್‌ ಸಾಧ್ಯತೆ: ಸೋಮವಾರ ಈ ಘಾಟ್‌ನಲ್ಲಿ ಉಂಟಾಗಿರುವ ಭೂಕುಸಿತದಿಂದ ಪ್ರಯಾಣಿಕರು ಹಾಗೂ ವಾಹನ ಚಾಲಕರು ಸುಮಾರು ಒಂದು ದಿನಪೂರ್ತಿ ರಸ್ತೆಯಲ್ಲೇ ಕಳೆಯಬೇಕಾದ ಪರಿಸ್ಥಿತಿ ಬಂದಿದೆ. ಈ ರಸ್ತೆಗೆ ಮಳೆಯಿಂದ ಸಾಕಷ್ಟು ಹಾನಿ ಸಂಭವಿಸಿದ್ದು, ಇನ್ನೂ ಎರಡು ದಿನಗಳ ಕಾಲ ಸಂಪೂರ್ಣ ಬಂದ್‌ ಆಗಲಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಜನರು ಪರ್ಯಾಯ ಮಾರ್ಗಗಳನ್ನು ಹುಡುಕುವ ಪರಿಸ್ಥತಿ ತಲೆದೋರಿದೆ.

ಶಿರಾಡಿ ಘಾಟ್‌ ಸಂಚಾರಕ್ಕೆ ಇನ್ನೂ 15 ದಿನ: ಶಿರಾಡಿ ಘಾಟ್‌ಯಲ್ಲಿ ಕಾಂಕ್ರೀಟ್‌ ಕಾಮಗಾರಿ ಸದ್ಯ ಕೊನೆಯ ಹಂತದಲ್ಲಿದ್ದು, ಜುಲೈ ಮೊದಲ ವಾರದಲ್ಲಿ ಸಂಚಾರಕ್ಕೆ ತೆರವಾಗಲಿದೆ. ಅಲ್ಲಿಯ ವರೆಗೆ ಚಾರ್ಮಾಡಿ ರಸ್ತೆಯೂ ದೊರಕದಿದ್ದರೆ ಪ್ರಯಾಣಿಕರು ಪರ್ಯಾಯ ರಸ್ತೆಗಳನ್ನೇ ಅವಲಂಬಿಸಬೇಕಾಗಿದೆ.

Advertisement

ಖಾಸಗಿ ಬಸ್‌ ಪ್ರಯಾಣಿಕರಿಗೆ ತೊಂದರೆಯಿಲ್ಲ: ಶಿರಾಡಿ ಕಾಮಗಾರಿ ಹಿನ್ನೆಲೆಯಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರಿಗೆ ತೆರಳುವ ಮತ್ತು ಬರುವ ಬಹುತೇಕ ಎಲ್ಲ ಖಾಸಗಿ ಬಸ್‌ಗಳು ಪುತ್ತೂರು- ಸುಳ್ಯ- ಮಡಿಕೇರಿ ಮಾರ್ಗದಲ್ಲಿ ತೆರಳುತ್ತಿವೆ. ಮಂಗಳೂರಿನಿಂದ ನಿತ್ಯ ಸುಮಾರು 80ರಷ್ಟು ಖಾಸಗಿ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಚಾರ್ಮಾಡಿ ರಸ್ತೆಯಲ್ಲಿ ಖಾಸಗಿ ಬಸ್‌ ಪ್ರಯಾಣಕ್ಕೆ ಅವಕಾಶ ನೀಡದ ಕಾರಣ ಚಾರ್ಮಾಡಿ ಘಾಟ್‌ನ ಅವ್ಯವಸ್ಥೆ ಖಾಸಗಿ ಬಸ್‌ ಮೇಲೆ ಆಗಿಲ್ಲ.

ಕೆಎಸ್‌ಆರ್‌ಟಿಸಿ ರೂಟ್‌ ಬದಲಾವಣೆ: ಚಾರ್ಮಾಡಿ ಘಾಟ್‌ ರಸ್ತೆ ಸಂಚಾರ ಬಂದ್‌ ಆಗಿರುವುದರಿಂದ ಮಂಗಳೂರು, ಧರ್ಮಸ್ಥಳ ಮತ್ತು ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗಕ್ಕೆ ಆಗಮಿಸುವ ಬಸ್‌ಗಳು ನಿಗದಿಗಿಂತ ತಡವಾಗಿ ಆಗಮಿಸಿದೆ. ಧರ್ಮಸ್ಥಳ ಡಿಪೋದಿಂದ 12 ಬಸ್‌ಗಳು ನಿತ್ಯ ಬೆಂಗಳೂರಿಗೆ ಚಾರ್ಮಾಡಿ ಮೂಲಕ ಸಂಚರಿಸುತ್ತಿವೆ.

ಮುಂದೆ ಈ ಪೈಕಿ ಕೆಲವು ಕುದುರೆಮುಖ ಮಾರ್ಗವಾಗಿ ಸಂಚರಿಸಿದರೆ ಇನ್ನು ಕೆಲವು ಉಪ್ಪಿನಂಗಡಿ- ಪುತ್ತೂರು-ಸುಳ್ಯ- ಸಂಪಾಜೆ ಮೂಲಕ ಚಲಿಸಲಿವೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ. ಧರ್ಮಸ್ಥಳ ಡಿಪೋಗೆ ಬಂದು ಹುಬ್ಬಳ್ಳಿ -ಗುಲ್ಬರ್ಗ ಸೇರಿದಂತೆ ಉತ್ತರ ಕರ್ನಾಟಕದ ವಿವಿಧೆಡೆಗೆ ತೆರಳುವ ಕೆಎಸ್ಸಾರ್ಟಿಸಿ ಬಸ್‌ಗಳನ್ನು ಕೊಟ್ಟಿಗೆಹಾರ, ಕಳಸ, ಕೊಪ್ಪ ಮಾರ್ಗವಾಗಿ ಕಳುಹಿಸಲಾಗಿದೆ.

ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಬೆಂಗಳೂರಿಗೆ ಚಾರ್ಮಾಡಿ ಘಾಟ್‌ ಮಾರ್ಗವಾಗಿ 10 ಬಸ್‌ಗಳು ಸಂಚರಿಸುತ್ತವೆ. ಇವುಗಳಲ್ಲಿ ಮೂರು ಚಾರ್ಮಾಡಿ ಘಾಟ್‌ಯಲ್ಲಿ ಸಿಲುಕಿಕೊಂಡಿದ್ದವು. ಚಾರ್ಮಾಡಿ ಘಾಟ್‌ಯಲ್ಲಿ ಎರಡು ದಿನ ವಾಹನ ಸಂಚಾರ ನಿಷೇಧಿಸಿರುವುದರಿಂದ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಎಲ್ಲ ಬಸ್‌ಗಳು ಪುತ್ತೂರು, ಸುಳ್ಯ, ಸಂಪಾಜೆ, ಮಡಿಕೇರಿ ಮಾರ್ಗವಾಗಿ ತೆರಳುತ್ತದೆ. ಅಲ್ಲದೆ, ಚಿಕ್ಕಮಗಳೂರು ಕಡೆಗೆ ತೆರಳುವ ಬಸ್‌ಗಳು ಕುಂದಾಪುರ ಮಾರ್ಗದಲ್ಲಿ ಸಂಚರಿಸಲಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ಪರ್ಯಾಯ ಮಾರ್ಗಗಳು
* ಮಂಗಳೂರು-ಬಿ.ಸಿ. ರೋಡ್‌- ಮಾಣಿ- ಪುತ್ತೂರು- ಸುಳ್ಯ- ಸಂಪಾಜೆ- ಮಡಿಕೇರಿ- ಮೈಸೂರು/ಚನ್ನರಾಯಪಟ್ಟಣ -ಬೆಂಗಳೂರು.
* ಧರ್ಮಸ್ಥಳ-ಬೆಳ್ತಂಗಡಿ- ನಾರಾವಿ-ಬಜಗೋಳಿ-ಕಳಸ-ಮೂಡಿಗೆರೆ-ಬೇಳೂರು-ಹಾಸನ-ಬೆಂಗಳೂರು.
* ಮಂಗಳೂರು-ಉಡುಪಿ-ಕುಂದಾಪುರ-ಮುರುಡೇಶ್ವರ-ಹೊನ್ನಾವರ-ಸಾಗರ-ಶಿವಮೊಗ್ಗ-ನೆಲಮಂಗಲ-ಬೆಂಗಳೂರು.
* ಮಂಗಳೂರು-ಕಾರ್ಕಳ-ಮಾಳಾಘಾಟ್‌-ಕುದುರೆಮುಖ-ಕಳಸ-ಕೊಟ್ಟಿಗೆಹಾರ-ಮೂಡಿಗೆರೆ-ಹಾಸನ-ಬೆಂಗಳೂರು.
* ಮಂಗಳೂರು-ಕಾರ್ಕಳ-ಹೆಬ್ರಿ-ಸೋಮೇಶ್ವರ-ಆಗುಂಬೆ ಘಾಟ್‌-ಶಿವಮೊಗ್ಗ.
* ಕುಂದಾಪುರ-ಸಿದ್ದಾಪುರ-ಹೊಸಂಗಡಿ-ಬಾಳೆಬಾರೆಘಾಟ್‌-ಮಾಸ್ತಿಕಟ್ಟೆ-ಹೊಸನಗರ-ಆಯನೂರು-ಶಿವಮೊಗ್ಗ-ಬೆಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next