Advertisement

ಮೊದಲ ಟೆಸ್ಟ್‌ ಪಂದ್ಯದಿಂದಹೊರಬಿದ್ದ ಶಿಖರ್‌ ಧವನ್‌

06:15 AM Dec 31, 2017 | Team Udayavani |

ಹೊಸದಿಲ್ಲಿ: ದಕ್ಷಿಣ ಆಫ್ರಿಕಾದಲ್ಲಿ ಸುದೀರ್ಘ‌ ಕ್ರಿಕೆಟ್‌ ಸರಣಿ ಆಡಬೇಕಿರುವ ಭಾರತ, ಇದರ ಆರಂಭಕ್ಕೂ ಮೊದಲೇ ಆಘಾತಕ್ಕೆ ಸಿಲುಕಿದೆ. ಎಡಗೈ ಆರಂಭಕಾರ ಶಿಖರ್‌ ಧವನ್‌ ಗಾಯಾಳಾಗಿ ಮೊದಲ ಟೆಸ್ಟ್‌ ಪಂದ್ಯದಿಂದ ಹೊರಬಿದ್ದಿದ್ದಾರೆ. ವರ್ಷಾರಂಭದ ಈ ಟೆಸ್ಟ್‌ ಜ. 5ರಿಂದ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ ಅಂಗಳದಲ್ಲಿ ಆರಂಭವಾಗಲಿದೆ.

Advertisement

ಶಿಖರ್‌ ಧವನ್‌ ಕಳೆದ ಮಂಗಳವಾರ ಮುಂಬಯಿಯಲ್ಲಿ ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮ ಜೋಡಿಯ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದರು. ಅದೇ ದಿನ ಪಾದದ ನೋವಿಗೆ ಸಿಲುಕಿದರು. ಈಗ ನೋವು ತೀವ್ರಗೊಂಡಿದೆ. ಎಂಆರ್‌ಐ ಸ್ಕ್ಯಾನಿಂಗ್‌ ವರದಿ ಲಭಿಸಿದ್ದು, ಧವನ್‌ ಅವರಿಗೆ ಜ. 10ರ ತನಕ ವಿಶ್ರಾಂತಿ ಸೂಚಿಸಲಾಗಿದೆ. ಜ. 13ರಿಂದ ಆರಂಭವಾಗಲಿರುವ ಸೆಂಚುರಿಯನ್‌ ಟೆಸ್ಟ್‌ ಪಂದ್ಯಕ್ಕೆ ಧವನ್‌ ಲಭ್ಯರಾಗುವ ನಿರೀಕ್ಷೆ ಇದೆ.

ಈ ಸರಣಿಯಲ್ಲಿ ಶಿಖರ್‌ ಧವನ್‌ ಮತ್ತು ಮುರಳಿ ವಿಜಯ್‌ ಭಾರತದ ಮೊದಲ ಆಯ್ಕೆಯ ಆರಂಭಿಕರಾಗಿದ್ದರು. ಈಗ ಧವನ್‌ ಅನುಪಸ್ಥಿತಿಯಲ್ಲಿ ಕೆ.ಎಲ್‌. ರಾಹುಲ್‌ ಇನ್ನಿಂಗ್ಸ್‌ ಆರಂಭಿಸಲು ಇಳಿಯಬೇಕಿದೆ.

ವಿರಾಟ್‌ ಕೊಹ್ಲಿ ಅಸಮಾಧಾನ
ಶಿಖರ್‌ ಧವನ್‌ ಗಾಯಾಳಾಗಿ ಮೊದಲ ಟೆಸ್ಟ್‌ ಪಂದ್ಯದಿಂದ ಹೊರಬಿದ್ದಿರುವುದಕ್ಕೆ ನಾಯಕ ವಿರಾಟ್‌ ಕೊಹ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅತ್ಯಂತ ಮಹತ್ವದ ಹಾಗೂ ಕಠಿನ ಸರಣಿ ಎದುರಿದ್ದಾಗ ಧವನ್‌ ಎಚ್ಚರಿಕೆ ವಹಿಸಬೇಕಿತ್ತು ಎಂದಿದ್ದಾರೆ.

ಬೋಲ್ಯಾಂಡ್‌ ಪಾರ್ಕ್‌ನಲ್ಲಿ ಅಭ್ಯಾಸ
ಟೆಸ್ಟ್‌ ಸರಣಿಗೂ ಮುನ್ನ ಆಡಬೇಕಿದ್ದ 2 ದಿನಗಳ ಅಭ್ಯಾಸ ಪಂದ್ಯವನ್ನು ಭಾರತ ರದ್ದುಗೊಳಿಸಿದ ಕಾರಣ ನೇರವಾಗಿ ನೆಟ್‌ ಪ್ರ್ಯಾಕ್ಟೀಸ್‌ಗೆ ಇಳಿಯಲಿದೆ. ಇದಕ್ಕಾಗಿ ಪಾರ್ಲ್ನ “ಬೋಲ್ಯಾಂಡ್‌ ಪಾರ್ಕ್‌’ ಅಂಗಳವನ್ನು ಒದಗಿಸಲಾಗಿದೆ.

Advertisement

ಅಭ್ಯಾಸಕ್ಕಾಗಿ ಪಾರ್ಲ್ನ “ಸೆಂಟರ್‌ ಪಿಚ್‌’ ಅನ್ನೇ ಒದಗಿಸಬೇಕೆಂದು ತಂಡದ ಆಡಳಿತ ಮಂಡಳಿ ಬಿಸಿಸಿಐಗೆ ಮನವಿ ಮಾಡಿತ್ತು. ಭಾರತೀಯ ಕ್ರಿಕೆಟ್‌ ಮಂಡಳಿಯ ಕೋರಿಕೆಗೆ “ಕ್ರಿಕೆಟ್‌ ಸೌತ್‌ ಆಫ್ರಿಕಾ’ (ಸಿಎಸ್‌ಎ) ಅನುಮತಿ ನೀಡಿರಲಿಲ್ಲ. ಈಗ ಇದಕ್ಕೆ ಸಮ್ಮತಿಸಿದೆ. ಟೀಮ್‌ ಇಂಡಿಯಾ ಕ್ರಿಕೆಟಿಗರು ಸದ್ಯದಲ್ಲೇ ಇಲ್ಲಿ ಅಭ್ಯಾಸ ಆರಂಭಿಸಲಿದ್ದಾರೆ.
ಭಾರತ 2013-14ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಯೂ ಇಂಥದೇ ಮನವಿ ಮಾಡಿತ್ತು. ಆದರೆ ಇದಕ್ಕೆ ಅಂದು ಸಿಎಸ್‌ಎ ಅನುಮತಿ ಕೊಟ್ಟಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next