Advertisement
ಬೆಂಗಳೂರು: ಕೇವಲ 9 ತಿಂಗಳ ಹಿಂದೆ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಇಬ್ಬರು ಪ್ರಮುಖ ಲಿಂಗಾಯತ ನಾಯಕರನ್ನು ಕಾಂಗ್ರೆಸ್, ತನ್ನ ಮನೆಗೆ ಕರೆತರುವುದರೊಂದಿಗೆ ಬಿಜೆಪಿ ವಿರುದ್ಧ “ಲಿಂಗಾಯತ ಸ್ವಾಭಿಮಾನದ ಅಸ್ತ್ರ’ ಪ್ರಯೋಗಿಸಿತ್ತು. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಆ ಇಬ್ಬರ ಪೈಕಿ ಒಬ್ಬ ನಾಯಕರನ್ನು ಬಿಜೆಪಿ ವಾಪಸ್ ತನ್ನ ಮನೆಗೆ ಕರೆತಂದಿದೆ. ಈ ಮೂಲಕ ತಿರುಮಂತ್ರಕ್ಕೆ ನಾಂದಿ ಹಾಡಿದೆ.
Related Articles
Advertisement
ಜಗದೀಶ್ ಶೆಟ್ಟರ್ “ಘರ್‌ವಾಪ್ಸಿ’ ಮೂಲಕ ರಾಜ್ಯದಲ್ಲಿ ಪಕ್ಷ ಮತ್ತೆ ಗಟ್ಟಿಯಾಗುತ್ತಿದೆ ಎಂದು ಬಿಂಬಿಸಲು ಬಿಜೆಪಿ ಮುಂದಾಗಿದ್ದು, ಚದುರಿದ ಮತಬ್ಯಾಂಕನ್ನು ಭದ್ರಪಡಿಸಿಕೊಳ್ಳುವುದಕ್ಕೆ ಈ ಮೂಲಕ ತಂತ್ರಗಾರಿಕೆ ಹೆಣೆಯಲಾಗುತ್ತಿದೆ.
ವಿಧಾನಸಭಾ ಟಿಕೆಟ್ ನಿರಾಕರಿಸಿದ ಕಾರಣಕ್ಕೆ ವರಿಷ್ಠರ ವಿರುದ್ಧವೇ ಮುನಿಸಿಕೊಂಡಿದ್ದ ಶೆಟ್ಟರ್ ಕಾಂಗ್ರೆಸ್ ಸೇರಿದ್ದರು. ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ವಿರುದ್ಧ ಹೀನಾಯವಾಗಿ ಸೋತಿದ್ದರೂ ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಮತಬ್ಯಾಂಕ್ ಕಂಪಿಸುವಂತೆ ಮಾಡಿದ್ದರು. ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದ್ದನ್ನು ಅಲ್ಲಗಳೆಯುವಂತಿಲ್ಲ.
ಈ ಕಾರಣಕ್ಕಾಗಿಯೇ ಸೋತ ಶೆಟ್ಟರ್‌ಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಿ ಕಾಂಗ್ರೆಸ್ ಋಣ ತೀರಿಸಿಕೊಂಡಿತ್ತು. ಆದರೆ ಕಷ್ಟದ ಸಮಯದಲ್ಲಿ ಕೈ ಹಿಡಿದ ಕಾಂಗ್ರೆಸ್ ಬಿಟ್ಟು ಮಾತೃಪಕ್ಷಕ್ಕೆ ಶೆಟ್ಟರ್ ಪುನರಾಗಮನವಾಗಿದೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಸಹಜವಾಗಿಯೇ ಬಿಜೆಪಿಗೆ ಲಾಭವಾಗಲಿದ್ದು, ಉತ್ತರ ಕರ್ನಾಟಕದ ಬೆಳಗಾವಿ, ಚಿಕ್ಕೋಡಿ, ಧಾರವಾಡ, ಹಾವೇರಿ, ಗದಗ ಹೀಗೆ ಐದಾರು ಕ್ಷೇತ್ರಗಳಲ್ಲಿ ಲಿಂಗಾಯತ ಮತಬ್ಯಾಂಕ್ ಕ್ರೋಢೀಕರಣಕ್ಕೆ ಅನುಕೂಲ ವಾಗಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ “ಆಪರೇಷನ್ ಹಸ್ತ’ದ ಹೆಸರಿನಲ್ಲಿ ಬಿಜೆಪಿ ಶಾಸಕರನ್ನು ಸೆಳೆಯುತ್ತೇವೆ ಎಂದು ಬೆದರಿಕೆಯೊಡ್ಡುತ್ತಿದ್ದ ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು ನೀಡಿದಂತಾಗಿದೆ.
ಬಿಜೆಪಿ ಮೂಲಗಳ ಪ್ರಕಾರ ಉತ್ತರ ಪ್ರಾಂತ್ಯದ ಆರೆಸ್ಸೆಸ್ ನಾಯಕರು ಶೆಟ್ಟರ್ ಸಹಿತ ಪಕ್ಷ ತೊರೆದವರನ್ನು ಮರಳಿ ಕರೆತರುವ ಬಗ್ಗೆ ವರಿಷ್ಠರ ಬಳಿ ಪ್ರಸ್ತಾವವಿಟ್ಟಿದ್ದರು. ಶೆಟ್ಟರ್ ಕೂಡ ಪಕ್ಷಕ್ಕೆ ಮರಳಲು ಸಿದ್ಧ ಎಂದು ಆಪ್ತರ ಮೂಲಕ ಸಂಘದ ಹಿರಿಯರಿಗೆ ಸಂದೇಶ ರವಾನಿಸಿದ್ದರು. ಸೂಕ್ತ ಸಮಯದಲ್ಲಿ ಶೆಟ್ಟರ್ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಅಮಿತ್ ಶಾ ಹೇಳಿದ್ದರು. ಹೀಗಾಗಿ ರಾಮಮಂದಿರ ಪ್ರತಿಷ್ಠಾಪನೆ ಮುಗಿ ಯುತ್ತಿದ್ದಂತೆ ರಾಜಕೀಯ “ಘರ್ ವಾಪ್ಸಿ’ಗೆ ಹೈಕಮಾಂಡ್ ಹಸುರು ನಿಶಾನೆ ತೋರಿಸಿದ್ದು, ಸುಮಾರು 1 ತಿಂಗಳಿಂದ ನಡೆಯುತ್ತಿದ್ದ ಬೆಳವಣಿಗೆಗೆ ತೆರೆ ಬಿದ್ದಂತಾಗಿದೆ.