ರಾಯಚೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ದೇಶದಲ್ಲಿಯೇ ಅತ್ಯಂತ ಭ್ರಷ್ಟ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಹುಶಃ ಕನ್ನಡಿ ನೋಡಿ ಟೀಕೆ ಮಾಡಿರಬೇಕು ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರವೂ ಆಡಳಿತ ನಡೆಸಿತ್ತು. ಆ ಸರ್ಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಸಚಿವರು ಅಕ್ರಮ, ಭ್ರಷ್ಟಾಚಾರದ ಆರೋಪದಡಿ ಜೈಲು ಸೇರಿದ್ದರು. ಇದನ್ನು ನೋಡಿಯೇ ಅಮಿತ್ ಶಾ ಮಾತ ನಾಡುತ್ತಿರಬೇಕು ಎಂದು ಪ್ರತಿಕ್ರಿಯೆ ನೀಡಿದರು.
ಮನವಿ ಮಾಡಿದರೆ ಪರಿಶೀಲನೆ: ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಬೇಕೇ ಹೊರತು ಮಕ್ಕಳಿಂದ ರಾಜಕೀಯ ಪಾಠ ಮಾಡಿಸುವುದು ಸರಿಯಲ್ಲ. ಮಕ್ಕಳಿಂದ ದೊಡ್ಡದಾಗಿ ಮಾತನಾಡಿಸುವುದು ಶೋಭೆ ತರುವಂಥದ್ದಲ್ಲ. ಕಲ್ಲಡ್ಕ ಪ್ರಭಾಕರ ಭಟ್ಟರ ಶಿಕ್ಷಣ ಸಂಸ್ಥೆಗೆ ಶಿಕ್ಷಣ ಇಲಾಖೆ ಅನುದಾನ ನೀಡುತ್ತಿಲ್ಲ. ಆದರೆ, ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿತ್ತು. ಈಗ ಅದನ್ನು
ಸ್ಥಗಿತಗೊಳಿಸಲಾಗಿದೆ. ಲಕ್ಷಾಂತರ ಮಕ್ಕಳಿಗೆ ಬಿಸಿಯೂಟ ಪೂರೈಸುವ ಸರ್ಕಾರಕ್ಕೆ ಆ ಶಾಲೆ ಭಾರವಲ್ಲ. ಆದರೆ ಶಿಕ್ಷಣ ಸಂಸ್ಥೆ ಅನುದಾನಕ್ಕೆ ಒಳಪಡಿಸಿಕೊಳ್ಳಲು ಸರ್ಕಾರಕ್ಕೆ ಮನವಿ ಮಾಡಿದರೆ ಪರಿಶೀಲಿಸಲಾಗುವುದು ಎಂದರು.