ಕೊಪ್ಪ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬ ತಾಲೂಕಿನ ಕಮ್ಮರಡಿ ಸಮೀಪದ ಕುಡೆ°ಲ್ಲಿಯ ಉಮಾಮಹೇಶ್ವರ ದೇವಸ್ಥಾನದಲ್ಲಿ ಶತರುದ್ರಹೋಮ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಕೈಗೊಂಡಿದೆ.
ಶುಕ್ರವಾರ ಯಾಗದ ಸಂಕಲ್ಪ ನಡೆದಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಚಿವ ಎಚ್.ಡಿ. ರೇವಣ್ಣ ಮತ್ತು ಕುಟುಂಬದ ಸದಸ್ಯರು ದೇವಾಲಯಕ್ಕೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.
ಈ ದೇವಸ್ಥಾನ ಪ್ರಸಿದ್ಧ ಜ್ಯೋತಿಷಿ ದೈವಜ್ಞ ಸೋಮಯಾಜಿ ಸಹೋದರ ಗಣೇಶ ಸೋಮಯಾಜಿ ಕುಟುಂಬದವರದ್ದಾಗಿದೆ. ಇವರ ಸಲಹೆ ಸೂಚನೆ ಮೇರೆಗೆ ಈ ಯಾಗ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ. ಮುಖ್ಯಮಂತ್ರಿಗಳ ಕುಟುಂಬ 2 ದಿನಗಳ ಕಾಲ ಇಲ್ಲಿ ನಡೆಯುವ ಪೂಜೆಯಲ್ಲಿ ಪಾಲ್ಗೊಳ್ಳಲಿದೆ.
ಶುಕ್ರವಾರ ಸಂಜೆ 4ರ ಹೊತ್ತಿಗೆ ಆಗಮಿಸಿದ ಸಿಎಂ ಕುಮಾರಸ್ವಾಮಿ, ಶನಿವಾರ ಆಯೋಜಿಸಿರುವ ಶತ ರುದ್ರಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮದ ಸಂಕಲ್ಪ ಮಾಡಿದರು. ರಾತ್ರಿ 8ರ ಹೊತ್ತಿಗೆ ಅವರು ಕುಟುಂಬ ಸಹಿತ ತಲವಾನೆಯಲ್ಲಿರುವ ರೆಸಾರ್ಟ್‌ಗೆ ತೆರಳಿ ಶನಿವಾರ ಬೆಳಗ್ಗೆ 6.30ಕ್ಕೆ ಪುನಃ ದೇವಾಲಯಕ್ಕೆ ಆಗಮಿಸಿಲಿದ್ದಾರೆ. ಶನಿವಾರ ಬೆಳಗ್ಗೆ 10ರ ಹೊತ್ತಿಗೆ ರುದ್ರಹೋಮ ಸೇರಿದಂತೆ ವಿವಿಧ ಪೂಜೆ ನಡೆಯಲಿದೆ.
ಪೊಲೀಸರ ನಿರ್ಬಂಧ: ಮುಖ್ಯಮಂತ್ರಿ ಖಾಸಗಿ ಭೇಟಿ ನಿಮಿತ್ತ ದೇವಸ್ಥಾನದ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ದೇವಾಲಯದಿಂದ ಸುಮಾರು 200 ಮೀ. ದೂರದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಡಿಷನಲ್‌ಎಸ್ಪಿ ಶೃತಿ, ಡಿವೈಎಸ್ಪಿ ಜಹಗೀರಾªರ್, ಸಿಪಿಐ, ಎಸ್‌ಐ ಅಲ್ಲದೆ 50ಕ್ಕೂ ಹೆಚ್ಚು ಪೊಲೀಸರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ದೇವಸ್ಥಾನದ ಬಳಿ ಪೊಲೀಸರು ನಿಗದಿತ ವ್ಯಕ್ತಿಗಳನ್ನು ಹೊರತುಪಡಿಸಿ ಬೇರೆಯವರನ್ನು ಒಳ ಬಿಡುತ್ತಿರಲಿಲ್ಲ. ಮಾಧ್ಯಮದವರನ್ನು ದೂರ ಇರಿಸಲಾಗಿತ್ತು. ಮೊಬೈಲ್ ಫೋನ್ ಬಳಕೆ ನಿಷೇಧಿಸಲಾಗಿತ್ತು. ಸಮೀಪದ ಪಂಜುರ್ಲಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ಪೊಲೀಸರ ಕಿರಿಕಿರಿಯಿಂದಾಗಿ ದೇವಸ್ಥಾನಕ್ಕೆ ತೆರಳಲು ಆಗದೆ ಗೊಣಗುತ್ತಿರುವ ದೃಶ್ಯ ಕಂಡು ಬಂದಿತು.
ಲೋಕಸಭಾ ಚುನಾವಣೆಗೂ ಮುನ್ನ ಶೃಂಗೇರಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಯಾಗ ಕೈಗೊಂಡಿದ್ದ ದೇವೇಗೌಡರ ಕುಟುಂಬ ಈಗ ಚುನಾವಣಾ ಫಲಿತಾಂಶಕ್ಕೂ ಮುನ್ನ ಮತ್ತೆ ಯಾಗ ಕೈಗೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ದೇವೆಗೌಡರಿಗಾಗಿ ಪೂಜೆ: ಈ ಕುರಿತು ಶಾಸಕ ಟಿ.ಡಿ. ರಾಜೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಕೇವಲ ದೇವೇಗೌಡರಿಗಾಗಿ ಈ ಪೂಜೆ ಮಾಡಲಾಗುತ್ತಿದೆ. ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ಈ ಪೂಜೆ ಮಾಡಲಾಗುತ್ತಿದೆ ಎಂದರು.