ಮಾಂಟ್ರಿಯಲ್: ಮಳೆಯ ಬ್ರೇಕ್ ನಡುವೆ ಸಾಗಿದ ಮಾಂಟ್ರಿಯಲ್ ಡಬ್ಲ್ಯುಟಿಎ ಟೆನಿಸ್ ಪಂದ್ಯಾವಳಿಯ 3ನೇ ಸುತ್ತಿನ ಪಂದ್ಯದಲ್ಲಿ ರಶ್ಯದ ಮರಿಯಾ ಶರಪೋವಾ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಅವರು ತಮ್ಮದೇ ದೇಶದ ದರಿಯಾ ಕಸತ್ಕಿನಾ ವಿರುದ್ಧ 6-0, 6-2 ಸುಲಭ ಜಯ ಸಾಧಿಸಿದರು.
ಶರಪೋವಾ ಅವರಿನ್ನು ಫ್ರಾನ್ಸ್‌ನ 6ನೇ ಶ್ರೇಯಾಂಕಿತ ಆಟಗಾರ್ತಿ ಕ್ಯಾರೋಲಿನ್‌ವ ಗಾರ್ಸಿಯಾ ವಿರುದ್ಧ ಆಡಲಿದ್ದಾರೆ. ಗಾರ್ಸಿಯಾ ವಿರುದ್ಧ ಶರಪೋವಾ 4-1 ಗೆಲುವಿನ ದಾಖಲೆ ಹೊಂದಿದ್ದಾರೆ.
ಆದರೆ ವಿಂಬಲ್ಡನ್ ವಿಜೇತೆ ಆ್ಯಂಜೆಲಿಕ್ ಕೆರ್ಬರ್ ಇದೇ ಸುತ್ತಿನಲ್ಲಿ ಸೋಲನುಭವಿಸಿ ಹೊರಬಿದ್ದಿದ್ದಾರೆ. ಕೆರ್ಬರ್ ಅವರನ್ನು ಫ್ರಾನ್ಸ್‌ನ ಅಲಿಜೆ ಕಾರ್ನೆಟ್ 6-4, 6-1 ಅಂತರದಿಂದ ಪರಾಭವಗೊಳಿಸಿದರು.
ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಬೆಲ್ಜಿಯಂನ ಅಲಿಸನ್ ವಾನ್ ಯುಟ್ವಾಂಕ್ ಅವರನ್ನು 7-6 (7-9), 6-2 ಅಂತರದಿಂದ ಸೋಲಿಸಿದರೆ, ಹಾಲೆಂಡಿನ ಕಿಕಿ ಬರ್ಟೆನ್ಸ್ ಜೆಕ್ ಆಟಗಾರ್ತಿ ಕ್ಯಾರೊಲಿನಾ ಪ್ಲಿಸ್ಕೋವಾ ಅವರನ್ನು 6-2, 6-2ರಿಂದ ಹಿಮ್ಮೆಟ್ಟಿಸಿದರು.
ಹಾಲಿ ಚಾಂಪಿಯನ್ ಎಲಿನಾ ಸ್ವಿಟೋಲಿನಾ ಕೂಡ 3ನೇ ಸುತ್ತು ಪ್ರವೇಶಿಸಿದ್ದಾರೆ. ರೊಮೇನಿಯದ ಇನ್-ಫಾರ್ಮ್ ಎದುರಾಳಿ ಮಿಹೇಲಾ ಬಝರ್ನೆಸ್ಕಾ 3ನೇ ಸೆಟ್ ವೇಳೆ ಗಾಯಾಳಾಗಿ ಹಿಂದೆ ಸರಿದುದರಿಂದ ಸ್ವಿಟೋಲಿನಾಗೆ ಗೆಲುವು ಸುಲಭವಾಯಿತು. ಆಗ ಅವರು 6-3, 6-7 (5-7), 4-3 ಮುನ್ನಡೆಯಲ್ಲಿದ್ದರು. ಬಝರ್ನೆಸ್ಕಾ ಕಳೆದ ವಾರವಷ್ಟೇ ಸ್ಯಾನ್ ಜೋಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
ಯುಎಸ್ ಓಪನ್ ಚಾಂಪಿಯನ್ ಸ್ಲೋನ್ ಸ್ಟೀಫನ್ಸ್ ಅಮೆರಿಕದವರೇ ಆದ ಫ್ರಾಂಕೊಯಿಸ್ ಅಬಂಡಾ ಅವರನ್ನು 6-0, 6-2ರಿಂದ ಸುಲಭದಲ್ಲಿ ಸೋಲಿಸಿದರು.