Advertisement

ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಶಾ

10:57 PM Jan 19, 2020 | Lakshmi GovindaRaj |

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಕ್ಕಳಿಗೆ ಪಲ್ಸ್‌ ಪೋಲಿಯೋ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಭಾನುವಾರ ಇಲ್ಲಿನ ಭವಾನಿ ನಗರದಲ್ಲಿರುವ ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರ ನಿವಾಸದ ಮುಂಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕಿದರು.

Advertisement

ಶನಿವಾರ ಸಂಜೆ ನಗರದ ನೆಹರು ಮೈದಾನದಲ್ಲಿ ಪಕ್ಷದಿಂದ ಆಯೋಜಿಸಿದ್ದ ಸಿಎಎ ಮಹಾ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ನಗರದಲ್ಲಿ ತಂಗಿದ್ದ ಅವರು, ಬೆಳಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನಿವಾಸಕ್ಕೆ ಉಪಾಹಾರಕ್ಕೆ ಆಗಮಿಸಿದ್ದರು.

ಇದೇ ಸಂದರ್ಭದಲ್ಲಿ ಪಲ್ಸ್‌ ಪೋಲಿಯೋ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಕುಂತಲಾ ಸೋಳಂಕೆ, ಶರೀಫಾ ಕಳ್ಳಿಭಾವಿ ಹಾಗೂ ಮರಿಯಮ್ಮ ಬಳ್ಳಾರಿ ಅವರು ಇಲ್ಲಿನ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ ಎರಡು ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಲಸಿಕೆ ಹಾಕಿ ಅಭಿಯಾನಕ್ಕೆ ಚಾಲನೆ ನೀಡಿದರು.

ಭದ್ರತೆ ದೃಷ್ಟಿಯಿಂದ ನವಜಾತ ಶಿಶುಗಳನ್ನು ಸಚಿವ ಜೋಶಿ ನಿವಾಸದ ಮುಂದೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಕರೆದುಕೊಂಡು ಬರಲಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಡಿಸಿಎಂ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌, ಜಿಲ್ಲಾಧಿಕಾರಿ ದೀಪಾ ಚೋಳನ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ|ಯಶವಂತ, ಡಾ|ಎಸ್‌.ಎಂ.ಹೊನಕೇರಿ ಇನ್ನಿತರರಿದ್ದರು.

ಸಿದ್ಧಾರೂಢರ ಭಾವಚಿತ್ರ ನೀಡಿದ ಪುಟಾಣಿಗಳು: ಜೋಶಿ ನಿವಾಸಕ್ಕೆ ಅಮಿತ್‌ ಶಾ ಆಗಮಿಸಲಿದ್ದಾರೆನ್ನುವ ಮಾಹಿತಿ ತಿಳಿದು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸಿದ್ದರು. ಪೋಷಕರೊಂದಿಗೆ ಆಗಮಿಸಿದ್ದ ಪುಟಾಣಿಗಳಿಬ್ಬರು ಶ್ರೀ ಸಿದ್ಧಾರೂಢ ಸ್ವಾಮೀಜಿಯವರ ಭಾವಚಿತ್ರ ಹಾಗೂ ಗುಲಾಬಿ ಹೂವು ನೀಡಿದರು. ರೈತ ಮುಖಂಡರ ಪೈಕಿ ಮಹಿಳೆಯೊಬ್ಬರು ಹಸಿರು ಶಾಲು ನೀಡಿದರು. ಭದ್ರತೆ ದೃಷ್ಟಿಯಿಂದ ಜನರನ್ನು ಬಿಡದಿದ್ದರೂ ಶಾ ಜನರ ಬಳಿ ಹೋಗಿ, ತಂದಿದ್ದ ಮಾಲೆ-ಶಾಲು ಪಡೆದು ಹಸ್ತಲಾಘವ ಮಾಡಿ, ಜನರತ್ತ ಕೈಬೀಸಿ ನಡೆದರು.

Advertisement

ಜೋಶಿ ಮನೆಯಲ್ಲಿ ಉಪಾಹಾರ: ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಸಚಿವ ಅಮಿತ್‌ ಶಾ ಅವರು, ಭಾನುವಾರ ಬೆಳಗ್ಗೆ ಭವಾನಿ ನಗರದಲ್ಲಿರುವಸಚಿವ ಪ್ರಹ್ಲಾದ ಜೋಶಿ ಅವರ ನಿವಾಸಕ್ಕೆ ಆಗಮಿಸಿದರು. ಶಾ ಅವರನ್ನು ಜೋಶಿ ಕುಟುಂಬ ದವರು ಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ಜೋಶಿ ಅವರ ಮನೆಯಲ್ಲಿ ಸಿದ್ಧಪಡಿಸಿದ ಚೌಚೌ ಬಾತ್‌, ಪೂರಿ ಹಾಗೂ ಸಿಹಿ ತಿನಿಸು ಸವಿದರು. ಸುಮಾರು ಅರ್ಧ ಗಂಟೆ ಜೋಶಿಯವರ ನಿವಾಸದಲ್ಲಿದ್ದ ಅವರು, ಅಲ್ಲಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next