Advertisement

ಸಂಘ ಪರಿವಾರ-ಬಿಜೆಪಿ ಮಧ್ಯೆ ಒಗ್ಗಟ್ಟು ಮೂಡಿಸಿದ ಶಾ

09:41 AM Aug 15, 2017 | |

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅಂತರ ಕಾಯ್ದುಕೊಳ್ಳುತ್ತಿರುವ ಸಂಘ ಪರಿವಾರ ಮತ್ತು ಬಿಜೆಪಿಯನ್ನು ಮತ್ತೆ ಒಟ್ಟುಗೂಡಿಸುವ ಪ್ರಯತ್ನಕ್ಕೆ ಮುಂದಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಮುಂದಿನ ದಿನಗಳಲ್ಲಿ ಇಬ್ಬರೂ ಒಟ್ಟಾಗಿ ಕಾರ್ಯತಂತ್ರಗಳನ್ನು ರೂಪಿಸಲು ವೇದಿಕೆ ಸಿದ್ಧಪಡಿಸಿದ್ದಾರೆ.

Advertisement

ಸೋಮವಾರ ಬೆಳಗ್ಗೆ ಚಾಮರಾಜಪೇಟೆಯಲ್ಲಿರುವ ಕೇಶವ ಕೃಪಾದಲ್ಲಿ ಸಂಘ ಪರಿವಾರದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಅವರು, ಪಕ್ಷ ಮತ್ತು ಸಂಘ ಪರಿವಾರದ ನಡುವೆ ಹಿಂದೆ ಇದ್ದ ಸಾಮರಸ್ಯ ಸ್ವಲ್ಪ ಮಟ್ಟಿಗೆ ಕೆಡಲು ಕಾರಣಗಳನ್ನು ತಿಳಿದುಕೊಂಡರಲ್ಲದೆ, ಪರಿವಾರದ
ಮುಖಂಡರನ್ನು ದೂರವಿಟ್ಟು ಯಾವುದೇ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ಬಿಜೆಪಿ ನಾಯಕರಿಗೆ ನಿರ್ದೇಶನ ನೀಡುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದರು ಎಂದು ಮೂಲಗಳು ಹೇಳಿವೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ನಡೆದಿರುವ ಹಿಂದೂ ಸಂಘಟನೆಯ ಕಾರ್ಯಕರ್ತರ
ಹತ್ಯೆ ಸಂಬಂಧ ಕೇಂದ್ರ ಸರ್ಕಾರ ಇನ್ನಷ್ಟು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆರ್‌ಎಸ್‌ಎಸ್‌ ಮುಖಂಡರು ಒತ್ತಾಯಿಸಿದಾಗ, ಈ ವಿಚಾರದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಕಾನೂನು ಚೌಕಟ್ಟು ಮತ್ತು ತಮ್ಮ ವ್ಯಾಪ್ತಿಯೊಳಗೆ ಸಾಧ್ಯವಿರುವ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದೆ. ರಾಜಕೀಯ ಪಕ್ಷವಾಗಿ ನಾವೇನು ಮಾಡಬಹುದೋ ಅದನ್ನು ಖಂಡಿತವಾಗಿಯೂ ಮಾಡುತ್ತೇವೆ. ಇದರ ಜತೆಗೆ ಸಂಘ ಪರಿವಾರದ ಕಡೆಯಿಂ ದಲೂ ಹೋರಾಟ ಕೈಗೊಳ್ಳುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿ ಸುವ ಕೆಲಸ ಆಗಬೇಕು ಎಂದು ಹೇಳಿದರು ಎನ್ನಲಾಗಿದೆ.

ಶೇ.60ರಷ್ಟು ಹೊಸಬರಿಗೆ ಟಿಕೆಟ್‌?: ಪಕ್ಷ ಸಂಘಟನೆ ಹಾಗೂ ಚುನಾವಣೆ ಸಂಬಂಧಿಸಿದಂತೆ ಯುವಕರನ್ನು ಹಾಗೂ ಹೊಸಬರನ್ನು ಪಕ್ಷಕ್ಕೆ ಕರೆತರುವ ಕೆಲಸ ನಡೆಯುತ್ತಿದೆ. ಹೊಸಬರಿಗೆ ಹೆಚ್ಚಿನ ಅವಕಾಶ ಹಾಗೂ ಜವಾಬ್ದಾರಿ ನೀಡುತ್ತಿದ್ದೇವೆ. ಪಕ್ಷದಲ್ಲಿ ತುಂಬಾ ಬದಲಾವಣೆ ಮಾಡಲಿದ್ದೇವೆ. ಹಾಗೆಯೇ ಮುಂದಿನ ವಿಧಾನ ಚುನಾವಣೆಯಲ್ಲಿ ಶೇ.60ರಷ್ಟು ಹೊಸಬರಿಗೆ ಹಾಗೂ ಯುವಕರಿಗೆ ಸೀಟು ನೀಡಲಿದ್ದೇವೆ. ಶಾಸಕರಾಗಿರಲಿ ಅಥವಾ ಮಾಜಿ ಶಾಸಕರಾಗಿರಲಿ, ಅವರ ಕಾರ್ಯವೈಖರಿಯ ಆಧಾರದಲ್ಲಿ ಸೀಟು ನೀಡಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸುತ್ತೇವೆ. ಅನೇಕರು ನಾನೇ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಳ್ಳುತಿರುವುದು ಗಮನಕ್ಕೆ ಬಂದಿದೆ. ಅದಕ್ಕೆಲ್ಲ ಕಡಿವಾಣ ಹಾಕಲಿದ್ದೇವೆ ಎಂಬುದನ್ನು ಆರ್‌ಎಸ್‌
ಎಸ್‌ ಮುಖಂಡರಿಗೆ ಶಾ ಮಾಹಿತಿ ನೀಡಿದರು. 

ಅಲ್ಪಸಂಖ್ಯಾತರ ಓಲೈಕೆ ಮಾಡಲ್ಲ: ನರೇಂದ್ರ ಮೋದಿಯವರು ಇತ್ತೀಚೆಗೆ ಘೋಷಣೆ ಮಾಡಿದ ಶಾದಿ ಶಗೂನ್‌ ಯೋಜನೆಯ ಬಗ್ಗೆ ಆರ್‌ಎಸ್‌ಎಸ್‌ ನಾಯಕರು ಆಕ್ಷೇಪ ವ್ಯಕ್ತಪಡಿಸಿದಾಗ, ಅಲ್ಪಸಂಖ್ಯಾತರ ಓಲೈಕೆಗಾಗಿ ಈ ಕೆಲಸ ಮಾಡುತ್ತಿಲ್ಲ. ಅವರಿಗೆ ನಿಗದಿಪಡಿಸಿರುವ ಅನುದಾನ
ಸದ್ಬಳಕೆಯಾಗಬೇಕು ಎಂಬ ದೃಷ್ಟಿಯಿಂದ ಮತ್ತು ಒಂದು ಸರ್ಕಾರವಾಗಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರೆನ್ನಲಾಗಿದೆ.ಕೇಂದ್ರ ಸಚಿವರಾದ ಅನಂತ್‌ ಕುಮಾರ್‌, ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಸಂಘಟನಾ ಕಾರ್ಯದರ್ಶಿ ಅರುಣ್‌
ಕುಮಾರ್‌, ಆರ್‌ಎಸ್‌ಎಸ್‌ ಪ್ರಮುಖರಾದ ಮುಕುಂದ್‌, ಶ್ರೀಧರ್‌ ಸ್ವಾಮಿ, ತಿಪ್ಪೇಸ್ವಾಮಿ, ಗುರುಪ್ರಸಾದ್‌, ಸುಧೀರ್‌ ಸೇರಿದಂತೆ ಎಬಿವಿಪಿ, ವಿಶ್ವಹಿಂದು ಪರಿಷತ್‌, ಸೇವಾ ಭಾರತಿ, ಕಿಸಾನ್‌ ಸಂಘ, ವನವಾಸಿ ಕಲ್ಯಾಣಾಶ್ರಮ, ಶಿಕ್ಷಣ ಭಾರತಿ ಮೊದಲಾದ ಸಂಘ ಪರಿವಾರದ ಪ್ರಮುಖರು
ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next