Advertisement

ಮಹಾಮೈತ್ರಿಯ ಹಳಿ ತಪ್ಪಿಸಿದ ಶಾ ಮಾಸ್ಟರ್ ಪ್ಲಾನ್

08:34 PM May 24, 2019 | Lakshmi GovindaRaj |

ಲೋಕಸಭೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಉತ್ತರಪ್ರದೇಶದಲ್ಲಿ ಎರಡು ಪ್ರಾದೇಶಿಕ ದಿಗ್ಗಜ ಪಕ್ಷಗಳು ಒಂದಾದರೂ, ಮೋದಿ ಸುನಾಮಿಯನ್ನು ಎದುರಿಸಲಾಗದೇ ಕೊಚ್ಚಿಹೋಗಿವೆ. ಬಿಜೆಪಿಯ ಚಾಣಕ್ಯನ ಕಾರ್ಯತಂತ್ರದ ಮುಂದೆ ಎಸ್‌ಪಿ-ಬಿಎಸ್‌ಪಿ ತಂತ್ರಗಾರಿಕೆ ಮಣ್ಣು ಮುಕ್ಕಿವೆ. ಈ ಎರಡು ಪ್ರಬಲ ಪಕ್ಷಗಳನ್ನು ಎದುರುಹಾಕಿಕೊಂಡು, ಬಿಜೆಪಿ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದ್ದಾದರೂ ಹೇಗೆ? ಈ ದೊಡ್ಡ ರಾಜ್ಯದಲ್ಲಿ ಚಾಣಕ್ಯನ ತಂತ್ರಗಾರಿಕೆ ಏನಾಗಿತ್ತು? ನೋಡೋಣ.

Advertisement

ಸಾಮಾಜಿಕ ಮೈತ್ರಿ: ಮೊದಲನೆಯದ್ದು 60-40 ಫಾರ್ಮುಲಾ. ಉತ್ತರಪ್ರದೇಶದಲ್ಲಿ ಒಟ್ಟು ಮತದಾರರ ಪೈಕಿ ಯಾದವರು, ಮುಸ್ಲಿಮರು ಮತ್ತು ಜಾಟವರ ಪ್ರಮಾಣ ಶೇ.40ರಷ್ಟಿದೆ. ಹೀಗಾಗಿ ಉಳಿದ ಶೇ.60ರಷ್ಟನ್ನು ಒಗ್ಗೂಡಿಸುವ ಕೆಲಸವನ್ನು ಬಿಜೆಪಿ ಮಾಡಿತು. ಮೇಲ್ವರ್ಗದವರು, ಯಾದವರನ್ನು ಹೊರತುಪಡಿಸಿ ಉಳಿದ ಹಿಂದುಳಿದ ವರ್ಗಗಳು, ಜಾಟವರನ್ನು ಹೊರತುಪಡಿಸಿದ ಎಲ್ಲ ದಲಿತ ವರ್ಗಗಳನ್ನು ಸೆಳೆಯಲು ಬಿಜೆಪಿ ಪ್ಲಾನ್‌ ಮಾಡಿತು. ಜನರಲ್‌ ಕೆಟಗರಿಯ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ಘೋಷಿಸುವ ಮೂಲಕ ಮೇಲ್ವರ್ಗದ ಮತದಾರರನ್ನು ಬಿಜೆಪಿ ತನ್ನಲ್ಲೇ ಉಳಿಸಿಕೊಂಡಿತು. ಆರೆಸ್ಸೆಸ್‌, ವಿಎಚ್‌ಪಿ ಹಾಗೂ ಹಿಂದೂ ಸಂತರನ್ನು ಭೇಟಿಯಾಗಿ, ಮೇಲ್ವರ್ಗದವರಿಗೆ ಬಿಜೆಪಿ ಮೇಲಿದ್ದ ಸಿಟ್ಟನ್ನು ತಣಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಲಾಯಿತು.

ನಂತರ ಬಾಲಕೋಟ್‌ ದಾಳಿಯನ್ನು ಪ್ರಸ್ತಾಪಿಸಿ ರಾಷ್ಟ್ರೀಯವಾದದ ಹೆಸರಲ್ಲಿ ಮತ ಕೇಳಲಾಯಿತು. ಅಷ್ಟರಲ್ಲಿ ಮೇಲ್ವರ್ಗದ ಮತ ಮತ್ತೆ ಕಮಲದತ್ತ ವಾಲಿತು. ಇನ್ನು, ಹಿಂದುಳಿದ ವರ್ಗಗಳನ್ನು ಸೆಳೆಯುವ ತಂತ್ರದ ಭಾಗವಾಗಿ ಅಪ್ನಾ ದಳ್‌ನ ಅನುಪ್ರಿಯಾ ಪಟೇಲ್‌, ನಿಶಾದ್‌ ಪಾರ್ಟಿ ಮತ್ತಿತರ ಸಣ್ಣ ಪುಟ್ಟ ಪಕ್ಷಗಳನ್ನು ತನ್ನೊಡನೆ ಸೇರಿಸಿಕೊಂಡಿತು. ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯು ಹಿಂದುಳಿದ ವರ್ಗಗಳನ್ನು ಆಕರ್ಷಿಸಿತು. ಇನ್ನು ತಮ್ಮ ಪ್ರಚಾರ ಭಾಷಣಗಳಲ್ಲಿ ಅಂಬೇಡ್ಕರ್‌ ಹೆಸರನ್ನು ಪ್ರಸ್ತಾಪಿಸುತ್ತಾ, ಅವರನ್ನು ಗೌರವಿಸಲು ಸರ್ಕಾರ ಕೈಗೊಂಡ ಕಾರ್ಯಕ್ರಮಗಳನ್ನು ಪ್ರಸ್ತಾಪಿಸುತ್ತಾ ದಲಿತರನ್ನು ಬಿಜೆಪಿ ಸೆಳೆಯಿತು.

ಯೋಜನೆಗಳು-ಸೌಲಭ್ಯಗಳು: ಗೃಹ ನಿರ್ಮಾಣ, ಶೌಚಾಲಯಗಳ ನಿರ್ಮಾಣ, ಗ್ಯಾಸ್‌ ಸಿಲಿಂಡರ್‌ಗಳು, ವಿದ್ಯುದೀಕರಣ, ಆಯುಷ್ಮಾನ್‌ ಭಾರತ್‌… ಹೀಗೆ ಸರ್ಕಾರದ ಯೋಜನೆಗಳನ್ನು ಹೇಳಿಕೊಂಡು ಗ್ರಾಮೀಣ ಪ್ರದೇಶಗಳ ಮತದಾರರನ್ನು ಸೆಳೆಯಲಾಯಿತು. ಕೇಂದ್ರದ ಯೋಜನೆಗಳ ಬಗ್ಗೆ, ಅದರಿಂದಾದ ಅನುಕೂಲತೆಗಳ ಬಗ್ಗೆ ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ಕೆಲಸವನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರಕ್ಕೆ ವಹಿಸಲಾಯಿತು.

ಪ್ರತಿ ಗ್ರಾಮಕ್ಕೂ, ಪ್ರತಿ ಬೂತ್‌ಗೂ ಬಿಜೆಪಿ ಕಾರ್ಯಕರ್ತರು ತೆರಳಿದರು. ಯಾರ ಮನೆಗಳಲ್ಲಿ ಶೌಚಾಲಯ ಕಟ್ಟಲಾಗಿದೆಯೋ ಅಲ್ಲಿಗೆ ತೆರಳಿ “ಇದು ಮೋದಿಜೀಯಿಂದಾಗಿ ನಿರ್ಮಾಣವಾದ ಶೌಚಾಲಯ’ ಎಂದು ಮನವರಿಕೆ ಮಾಡಿದರು. ಯಾರಿಗೆ ಮನೆ ನಿರ್ಮಾಣಕ್ಕೆ ಹಣ ಸಿಕ್ಕಿದೆಯೋ ಅವರ ಬಳಿ ಹೋಗಿ, ಇದು ಮೋದೀಜೀಯಿಂದಾಗಿ ಸಿಕ್ಕಿದ ಹಣ ಎಂದು ಒತ್ತಿ ಒತ್ತಿ ಹೇಳಲಾಯಿತು. ಈ ಮೂಲಕ ಬಡ, ಗ್ರಾಮೀಣ ಜನರ ಮತಗಳು ಬಿಜೆಪಿ ಕಡೆಗೆ ಬರುವಂತೆ ಮಾಡಲಾಯಿತು.

Advertisement

ನರೇಂದ್ರ ಮೋದಿ: ಎಲ್ಲದಕ್ಕಿಂತಲೂ ಹೆಚ್ಚಾಗಿ ಈ ಚುನಾವಣೆಯಲ್ಲಿ ವಕೌಟ್‌ ಆಗಿದ್ದು “ಮೋದಿ, ಮೋದಿ ಮತ್ತು ಮೋದಿ.’ ರಾಜ್ಯದ ಎಲ್ಲ 80 ಕ್ಷೇತ್ರಗಳಲ್ಲೂ ಸ್ವತಃ ಮೋದಿಯೇ ಸ್ಪರ್ಧಿಸುತ್ತಿದ್ದಾರೆ ಎಂಬಂತೆ ಬಿಂಬಿಸಲಾಯಿತು. ಬೇರೆ ಯಾವ ಪ್ರಶ್ನೆಗೂ ಅವಕಾಶವೇ ಇಲ್ಲದಂತೆ, “ನಿಮಗೆ ಮೋದಿ ಪ್ರಧಾನಿ ಆಗಬೇಕೇ, ಬೇಡವೇ’ ಎಂದು ಕೇಳಲಾಯಿತು. ಜನ “ಆಗಬೇಕು’ ಎಂದು ಉತ್ತರಿಸಿದರು. ಮೋದಿ ಅಲೆಯು ಎಲ್ಲೆಡೆ ಎದ್ದು ಕಾಣುತ್ತಿತ್ತು.

ಯಾರನ್ನು ಕೇಳಿದರೂ ಮೋದಿ ಪ್ರಧಾನಿಯಾಗಬೇಕು ಎಂದು ಹೇಳುತ್ತಿದ್ದರು ಎನ್ನುತ್ತಾರೆ ಪಕ್ಷದ ನಾಯಕರು. ಮೋದಿಯವರನ್ನು ಕರೆಸಿ 30 ರ್ಯಾಲಿಗಳನ್ನು ಮಾಡಿಸಲಾಯಿತು. ಒಟ್ಟಿನಲ್ಲಿ ಮೋದಿಯವರ ವರ್ಚಸ್ಸು, ಪಕ್ಷ ಸಂಘಟನೆ, ಸಾಮಾಜಿಕ ಮೈತ್ರಿ, ಜಾತಿ ಸಮೀಕರಣ, ಸರ್ಕಾರದ ಯೋಜನೆಗಳು, ರಾಷ್ಟ್ರೀಯವಾದದ ಸ್ಲೋಗನ್‌ಗಳು ಉತ್ತರಪ್ರದೇಶದಲ್ಲಿ ಬಿಜೆಪಿಗೆ ಮತ್ತೂಮ್ಮೆ ಉತ್ತಮ ಫ‌ಲಿತಾಂಶವನ್ನು ತಂದುಕೊಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next