ಪಟ್ನಾ : ಉತ್ತರ ಬಿಹಾರದ ಸೀತಾಮಡಿ ಜಿಲ್ಲೆಯಲ್ಲಿ ಇಂದು ಶನಿವಾರ ಘಟಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಪೊಲೀಸರು ಮತ್ತು ಓರ್ವ ಮಾವೋ ವಿಚಾರಣಾ ಕೈದಿ ಸೇರಿದಂತೆ ಒಟ್ಟು 8 ಮಂದಿ ಅಸುನೀಗಿದರು.
ಮೃತರನ್ನು ಮುನ್ನಾ ಸಿಂಗ್ (ಚಾಲಕ), ಕುಲೇಶ್ವರ್ ಚೌಧರಿ, ಸಂಜಯ್ ಕುಮಾರ್, ಕೃಷ್ಣ ಸಿಂಗ್, ಮದನ್ ಸಹಾ, ಉಮೇಶ್ ಮಿಶ್ರಾ ಮತ್ತು ಚುಮೂನ್ ಸಿಂಗ್ (ಎಲ್ಲರೂ ಕಾನ್‌ಸ್ಟೆಬಲ್‌ಗಳು) ಮತ್ತು ಹೇಮಂತ ಕುಮಾರ್ (ವಿಚಾರಣಾಧೀನ ಕೈದಿ) ಎಂದು ಗುರುತಿಸಲಾಗಿದೆ.
ಪೊಲೀಸರು ಹಾಗೂ ಮಾವೋ ವಿಚಾರಣಾ ಕೈದಿ ಇದ್ದ ವ್ಯಾನ್ ರುನ್ನಿಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಎನ್‌ಎಚ್ 77ರ ಸಮೀಪದಲ್ಲಿ, 25 ಕಿ.ಮೀ. ದಕ್ಷಿಣದಲ್ಲಿರುವ ಸೀತಾಮಡಿಯ ಗಾಯಿಘಾಟ್ ಗ್ರಾಮದಲ್ಲಿ ನಿಂತಿದ್ದ ಟ್ರಕ್ ಗೆ ಢಿಕ್ಕಿ ಹೊಡೆಯಿತು.
8 ಮಂದಿ ಮೃತಪಟ್ಟ ಈ ದುರ್ಘಟನೆಯಲ್ಲಿ ಇತರ ಏಳು ಪೊಲೀಸರು ಮತ್ತು ಒಬ್ಬ ಮಾವೋ ವಿಚಾರಣಾಧೀನ ಕೈದಿ ಗಾಯಗೊಂಡಿದ್ದು ಅವರನ್ನು ಇಲ್ಲಿಂದ 62 ಕಿ.ಮೀ.ದೂರದ ಮುಜಫರಪುರದಲ್ಲಿನ ಖಾಸಗಿ ನರ್ಸಿಂಗ್ ಹೋಮ್ ಗೆ ದಾಖಲಿಸಲಾಗಿದೆ.
ಪೂರ್ವ ಬಿಹಾರದ ಭಾಗಲ್ಪುರದಿಂದ 14 ಮಂದಿ ಪೊಲೀಸರು ಇಬ್ಬರು ವಿಚಾರಣಾಧೀನ ಕೈದಿಗಳನ್ನು ಒಯ್ಯುತ್ತಿದ್ದ ವ್ಯಾನ್ ಜಲ್ಲಿಕಲ್ಲು ತುಂಬಿದ್ದ ಟ್ರಕ್ಕಿಗೆ ಸೀತಾಮಡಿ – ಮುಜಫರ್‌ಪುರದ ಎನ್‌ಎಚ್ 77ರ ಪಟ್ಟಿಯಲ್ಲಿ ಢಿಕ್ಕಿ ಹೊಡೆಯಿತು. ಪೊಲೀಸ್ ವ್ಯಾನ್ ಯಮ ವೇಗದಲ್ಲಿ ಸಾಗುತ್ತಿತ್ತು. ಅದರ ಚಾಲಕನಿಗೆ ಕತ್ತಲೆಯಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್ಕನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.