Advertisement
ಸುಮಾರು 5.78 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಕಾಪು ಪುರಸಭೆಯ ನೂತನ ಪುರಸೌಧ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಳೆದ ಜನವರಿ 8ರಂದು ಉದ್ಘಾಟಿಸಿದ್ದರು. ಅಂದು ತರಾತುರಿ ಯಲ್ಲಿ ನೂತನ ಪುರಸೌಧ ಕಟ್ಟಡ ಉದ್ಘಾಟನೆಗೊಂಡಿದ್ದರೂ ವಿವಿಧ ಕೆಲಸಗಳು ಬಾಕಿಯುಳಿದಿದ್ದ ಹಿನ್ನೆಲೆಯಲ್ಲಿ ಪುರಸಭೆ ಆಡಳಿತ ವ್ಯವಸ್ಥೆಯ ಸ್ಥಳಾಂತರ ಸಹಿತ ಕಾರ್ಯಾರಂಭ ಪ್ರಕ್ರಿಯೆಯು ವಿಳಂಬವಾಗಿತ್ತು.
ಸ್ವಚ್ಛ ಕಾಪು – ಸುಂದರ ಕಾಪು ಎಂಬ ಕಲ್ಪನೆಯೊಂದಿಗೆ 2015ರ ಮೇ 22ರಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದ ಕಾಪು ಪುರಸಭೆ ಅಲ್ಪ ಅವಧಿಯಲ್ಲೇ ಬಹಳಷ್ಟು ಪ್ರಸಿದ್ಧಿಗೆ ಬಂದಿತ್ತು. ನೂತನ ಪುರಸಭೆಗಳ ಪೈಕಿ ನಂ.1 ಪುರಸಭೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, ಕಡಿಮೆ ಅವಧಿಯಲ್ಲೇ ದೊಡ್ಡ ಮೊತ್ತದ ಅನುದಾನ ಸಹಿತವಾಗಿ ನೂತನ ಕಟ್ಟಡ ಮಂಜೂರಾಗಿತ್ತು. ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಂಡರೂ, ಆ ಬಳಿಕ ಎದುರಾದ ಚುನಾವಣಾ ಪ್ರಕ್ರಿಯೆಗಳು, ಮುಖ್ಯಾಧಿಕಾರಿಯ ವರ್ಗಾವಣೆ ಇತ್ಯಾದಿ ಕಾರಣಗಳಿಂದಾಗಿ ಕಾಮಗಾರಿ ಮುಂದುವರಿಸಲು ಮತ್ತು ಆಡಳಿತಾತ್ಮಕವಾದ ಸ್ಥಳಾಂತರ ಪ್ರಕ್ರಿಯೆಗೆ ತಾಂತ್ರಿಕ ಅಡಚಣೆ ಎದುರಾಗಿತ್ತು. ಇದೀಗ ಪುರಸಭೆಯ ಆಡಳಿತ ಮತ್ತು ವಿಪಕ್ಷದ ಸತತ ಆಗ್ರಹ, ಮುಖ್ಯಾಧಿಕಾರಿ ರಾಯಪ್ಪ ನೇತೃತ್ವದಲ್ಲಿ ಎಂಜಿನಿಯರ್‌ಗಳು ನಡೆಸಿರುವ ಸತತ ಪ್ರಯತ್ನ ಹಾಗೂ ಗುತ್ತಿಗೆದಾರ ಕೆ. ವಾಸುದೇವ ಶೆಟ್ಟಿ ಅವರ ನಿರಂತರ ಶ್ರಮದ ಫಲವಾಗಿ ಪುರಸೌಧ ಕಟ್ಟಡವು ಪೂರ್ಣ ಸ್ಥಿತಿಯಲ್ಲಿ ಜೋಡಣೆಯಾಗಿದ್ದು ಅಧಿಕೃತವಾಗಿ ಕಾರ್ಯಾರಂಭಕ್ಕೆ ಸನ್ನದ್ಧವಾಗಿದೆ.
Related Articles
2015ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಪು ಪುರಸಭೆಗೆ ಒಟ್ಟು 92 ಹುದ್ದೆಗಳು ಮಂಜೂರಾಗಿದ್ದು, ಇದರಲ್ಲಿ ಪೌರ ಕಾರ್ಮಿಕರು ಮತ್ತು ಹೊರ ಗುತ್ತಿಗೆ ಆಧಾರದ ಸಿಬಂದಿಗಳೂ ಸೇರಿದಂತೆ 60 ಮಂದಿ ಕಾರ್ಯನಿರ್ವಹಣೆಯಲ್ಲಿ ತೊಡಗಿದ್ದಾರೆ. ಉಳಿದಂತೆ 30ಕ್ಕೂ ಅಧಿಕ ಹುದ್ದೆಗಳು ಇನ್ನೂ ಖಾಲಿಯಾಗಿಯೇ ಉಳಿದಿವೆೆ. ಪರಿಸರ ಅಭ್ಯಂತರರು – 1, ಹಿರಿಯ ಆರೋಗ್ಯ ನಿರೀಕ್ಷಕ – 2, ಕಂದಾಯ ನಿರೀಕ್ಷಕ-1, ಪ್ರಥಮ ದರ್ಜೆ ಸಹಾಯಕ – 1, ಪೌರ ಕಾರ್ಮಿಕರು – 7 ಹುದ್ದೆಗಳು ಖಾಲಿಯಿದ್ದು, ಈ ಹುದ್ದೆಗಳ ಭರ್ತಿಗೆ ಸರಕಾರ ವಿಶೇಷ ಕ್ರಮ ತೆಗೆದುಕೊಳ್ಳಬೇಕಿದೆ.
Advertisement
ಜು. 9ರಿಂದ ನೂತನ ಪುರಸೌಧದಲ್ಲಿ ಆಡಳಿತ ನಿರ್ವಹಣೆ ಜು. 7ರಂದು ನೂತನ ಪುರಸೌಧ ಕಟ್ಟಡದಲ್ಲಿ ಧಾರ್ಮಿಕ ಪೂಜೆ ನಡೆಯಲಿದೆ. ಪೂಜೆಯ ಬಳಿಕ ದಾಖಲಾತಿ, ಕಚೇರಿಗಳ ಸ್ಥಳಾಂತರ ಪ್ರಕ್ರಿಯೆಗಳು ನಡೆದು ಜು. 9ರಿಂದ ಅಧಿಕೃತವಾಗಿ ಪುರಸಭೆಯ ಕಾರ್ಯ ಚಟುವಟಿಕೆಗಳು ಪುರಸೌಧ ಕಟ್ಟಡದಲ್ಲಿ ಪ್ರಾರಂಭಗೊಳ್ಳಲಿವೆ. ಸಂಪೂರ್ಣ ಇ ಆಡಳಿತ ವ್ಯವಸ್ಥೆಯೊಂದಿಗೆ ನೂತನ ಪುರಸೌಧದಲ್ಲಿ ಆಡಳಿತ ನಿರ್ವಹಣೆ ನಡೆಯಲಿದ್ದು, ಸಾರ್ವಜನಿಕರು ಪುರಸಭೆಯ ಎಲ್ಲಾ ಕಚೇರಿ ಕೆಲಸ ಕಾರ್ಯಗಳಿಗೆ ನೂತನ ಕಟ್ಟಡಕ್ಕೆ ಆಗಮಿಸಬೇಕು.
– ರಾಯಪ್ಪ , ಮುಖ್ಯಾಧಿಕಾರಿ, ಪುರಸಭೆ ಪುರಸಭೆ ರಚನೆಯಲ್ಲಿ ಸೊರಕೆ ಪಾತ್ರ ಮಹತ್ವದ್ದು
ಕಾಪು ಸರ್ವಾಂಗೀಣ ಅಭಿವೃದ್ಧಿ ಹೊಂದಿದ ಕ್ಷೇತ್ರವಾಗಬೇಕೆಂಬ ಸಂಕಲ್ಪದೊಂದಿಗೆ ಅಂದಿನ ನಗರಾಭಿವೃದ್ಧಿ ಸಚಿವರೂ ಮತ್ತು ಕಾಪು ಕ್ಷೇತ್ರದ ಶಾಸಕರೂ ಆಗಿದ್ದ ವಿನಯಕುಮಾರ್ ಸೊರಕೆ ಅವರು ವಿಶೇಷ ಮುತುವರ್ಜಿ ವಹಿಸಿ ಕಾಪುವನ್ನು ಪುರಸಭೆಯನ್ನಾಗಿ ರಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅತೀ ಕಡಿಮೆ ಅವಧಿಯಲ್ಲಿ ಕರ್ನಾಟಕ ಸರಕಾರದಿಂದ ಅನುಮೋದನೆ ಪಡೆದು ಸುಂದರ ಪುರಸೌಧ ಕಟ್ಟಡ ನಿರ್ಮಾಣಕ್ಕೆ ಅನುದಾನ ಜೋಡಿಸಿದ್ದು, ಇದಕ್ಕೆ ಕಾರಣರಾದ ಮಾಜಿ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರಿಗೆ ನಾವು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
– ಮಾಲಿನಿ ಅಧ್ಯಕ್ಷರು, ಕಾಪು ಪುರಸಭೆ