ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಶಾಸಕ, ಆಮ್ ಆದ್ಮಿ ಪಕ್ಷದ ಸದಸ್ಯ ಸುಖ್ಬೀರ್ ದಲಾಲ್ ಶನಿವಾರ (ಡಿ.21) ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಈ ಮೂಲಕ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಹಿನ್ನಡೆಯಾದಂತಾಗಿದೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಹರ್ಷ ಮಲ್ಹೋತ್ರಾ, ಬಿಜೆಪಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್ ದೇವ್ ಹಾಗೂ ಇತರ ಹಿರಿಯ ಮುಖಂಡರು ದಲಾಲ್ ಬಿಜೆಪಿ ಸೇರ್ಪಡೆ ಕುರಿತು ಮಾಹಿತಿ ನೀಡಿದರು.
ಸುಖ್ಬೀರ್ ದಲಾಲ್ ಅವರು ಆಮ್ ಆದ್ಮಿ ಪಕ್ಷದ ಶಾಸಕರಾಗಿದ್ದು ಮುಂಡ್ಕಾ ಕ್ಷೇತ್ರವನ್ನು ಪ್ರತಿನಿಧಿಯಾಗಿದ್ದರು. ತನಗೆ ಟಿಕೆಟ್ ನಿರಾಕರಿಸಿದ್ದರಿಂದ ತಾನು ಬಿಜೆಪಿಗೆ ಸೇರ್ಪಡೆಗೊಂಡಿಲ್ಲ ಎಂದು ದಲಾಲ್ ಸ್ಪಷ್ಟನೆ ನೀಡಿದ್ದು, ಬಿಜೆಪಿಯ ಅಭಿವೃದ್ಧಿ ಕಾರ್ಯಗಳಿಂದ ತಾನು ಆಪ್ ತೊರೆದು ಬಿಜೆಪಿ ಸೇರಿರುವುದಾಗಿ ತಿಳಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ನಿರ್ಮಿಸಿರುವ ಶೇಷ ಮಹಲ್ ನಲ್ಲಿ ಭ್ರಷ್ಟಾಚಾರದ ತಾಂಡವವಾಡುತ್ತಿದ್ದು, ಆಪ್ ತನ್ನೆಲ್ಲಾ ಮಿತಿಯನ್ನು ದಾಟಿರುವುದಾಗಿ ದಲಾಲ್ ಈ ಸಂದರ್ಭದಲ್ಲಿ ಆರೋಪಿಸಿದರು.
ಭ್ರಷ್ಟಾಚಾರದಿಂದಾಗಿ ಆಪ್ ಸರ್ಕಾರ ದೆಹಲಿಯ ಗ್ರಾಮೀಣ ಪ್ರದೇಶದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ. ಅಲ್ಲದೇ ಬಿಜೆಪಿ ಗ್ರಾಮೀಣ ದೆಹಲಿ ಪ್ರದೇಶಗಳ ಅಭಿವೃದ್ಧಿಗೆ ಬೆಂಬಲ ನೀಡುತ್ತಿದೆ ಎಂದು ದಲಾಲ್ ಹೇಳಿದರು.