2017-18 ನೇ ಸಾಲಿಗೆ ಅನುದಾನ ಕೊಡಲು ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆ ತಿಳಿಸಿದ್ದು, ಮುಂದಿನ ವರ್ಷದಿಂದ ಮಡಿಲು ಯೋಜನೆಗೆ “ಎಳ್ಳು-ನೀರು’ ಬಿಡುವ ಸಾಧ್ಯತೆಯೇ ಹೆಚ್ಚಿದೆ.
Advertisement
“ಮಡಿಲು’ ಯೋಜನೆಗೆ ವಾರ್ಷಿಕ 35 ರಿಂದ 40 ಕೋಟಿ ರೂ.ಅಗತ್ಯವಾಗಿದ್ದು, ಅಷ್ಟು ಮೊತ್ತದ ಹಣವನ್ನು ಈಗಿನ ಪರಿಸ್ಥಿತಿಯಲ್ಲಿ ಕೊಡಲು ಸಾಧ್ಯವಿಲ್ಲ ಎಂಬುದು ಆರ್ಥಿಕ ಇಲಾಖೆಯ ಅಭಿಪ್ರಾಯ. ಹೀಗಾಗಿ, ಬಹುತೇಕ ಯೋಜನೆಯನ್ನು ಕೈ ಬಿಡುವ ತೀರ್ಮಾನಕ್ಕೆ ರಾಜ್ಯ ಸರ್ಕಾರ ಬಂದಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪೂರಕ ಎಂಬಂತೆ “ಮಡಿಲು’ ಯೋಜನೆಯಡಿ ವಿತರಿಸುವ ಕಿಟ್‌ಗಳ ಖರೀದಿಗೆ ಮುಂದಿನ ವರ್ಷಕ್ಕೆ ರಾಜ್ಯ ಸರ್ಕಾರ ಟೆಂಡರ್ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ.
Related Articles
ಆದರೆ, 2013ರಿಂದ 2016ರವರೆಗೆ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ ಎಚ್‌ಎಂ) ಅನುದಾನ ನೀಡಿತು. ಆದರೆ, ಏಕಾಏಕಿ ರಾಷ್ಟ್ರೀಯ ಆರೋಗ್ಯ ಮಿಷನ್ ಇದೀಗ ಅನುದಾನ ನಿಲ್ಲಿಸಿದ್ದು, ಇದು ರಾಜ್ಯ ಸರ್ಕಾರದ ಯೋಜನೆಯಾಗಿರುವುದರಿಂದ ಸರ್ಕಾರವೇ ಹಣ ಭರಿಸಲಿ ಎಂಬುದಾಗಿ ಹೇಳಿ ಕೈತೊಳೆದುಕೊಂಡಿದೆ.
Advertisement
ಈ ಮಧ್ಯೆ, ರಾಜ್ಯ ಹಣಕಾಸು ಇಲಾಖೆ ಸಹ ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಆದರೆ, ಯಾವ ಕಾರಣಕ್ಕಾಗಿ ಹಣ ನೀಡುತ್ತಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಮುಂದಿನ ವರ್ಷದ “ಮಡಿಲು’ ಯೋಜನೆಗೆ ಈಗಾಗಲೇ ಟೆಂಡರ್ ಕರೆದು ಕಿಟ್ ಖರೀದಿ ಪ್ರಕ್ರಿಯೆ ನಡೆಸಬೇಕಿತ್ತು. ಆದರೆ, ಹಣಕಾಸು ಇಲಾಖೆಯ ಒಪ್ಪಿಗೆ ದೊರೆಯದ ಕಾರಣ ಟೆಂಡರ್ಪ್ರಕ್ರಿಯೆ ನಡೆದಿಲ್ಲ. ಇದರಿಂದಾಗಿ ಏಪ್ರಿಲ್ ನಂತರ ಯೋಜನೆ ಜಾರಿ ಅನುಮಾನವಾಗಿದೆ. ಸಿಎಸ್‌ಆರ್‌ಯಡಿ ಪೂರೈಕೆಗೆ ಮನವಿ “ಮಡಿಲು’ ಕಿಟ್ ಯೋಜನೆಗೆ ಎನ್‌ಎಚ್‌ಎಂ ಮತ್ತು ರಾಜ್ಯ ಸರ್ಕಾರಗಳೆರಡೂ ಅನುದಾನ ನೀಡಲು ಹಿಂದೇಟು ಹಾಕಿರುವುದರಿಂದ ಆರೋಗ್ಯ ಇಲಾಖೆ, ಕಾರ್ಪೋರೇಟ್ ಕಂಪನಿಗಳಿಗೆ ಪತ್ರ ಬರೆದಿದೆ. ಸಿಎಸ್ ಆರ್‌ಯಡಿ ಕಿಟ್‌ಗಳ ಖರೀದಿಗೆ ಸಹಾಯ ಹಸ್ತ ಚಾಚುವಂತೆ ಮನವಿ ಮಾಡಿದೆ. ಆದರೆ, ಯಾವುದೇ ಕಾರ್ಪೋರೇಟ್ ಸಂಸ್ಥೆಗಳು ಮುಂದೆ ಬಂದಿಲ್ಲ. “ಮಡಿಲು’ ಕಿಟ್ ಪೂರೈಕೆಗೆ ಆರೋಗ್ಯ ಇಲಾಖೆ ಕಾಳಜಿ ಹೊಂದಿದ್ದರೂ, ಯಾವ ಕಡೆಯಿಂದಲೂ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ ಎಂದು ಹೇಳಲಾಗಿದೆ. *ಪ್ರಭುಸ್ವಾಮಿ ನಟೇಕರ್