ಶಬರಿಮಲೆ: ಅಯ್ಯಪ್ಪ ವ್ರತಾಧಾರಿಗಳಿಗೆ ದಾರಿ ಮಧ್ಯೆ ಆಯಾಸ ನಿವಾರಿಸಲು ದೇವಸ್ವಂ ಮಂಡಳಿ 2 ಕೋಟಿ ಬಿಸ್ಕೆಟ್ ವಿತರಿಸಲಿದೆ. ದಿನಂಪ್ರತಿ 4.5 ಲಕ್ಷ ಬಿಸ್ಕೆಟ್, 20 ಸಾವಿರ ಲೀಟರ್ ಶುಂಠಿ ನೀರು ವಿತರಿಸುತ್ತಿದೆ. ಊರ್‌ಕುಳಿಯಿಂದ ನೀಲಿಮಲೆವರೆಗಿನ 73 ಕೇಂದ್ರಗಳಲ್ಲಿ ಶುಂಠಿ ನೀರು, ಶಬರಿ ಪೀಠದಿಂದ ಸನ್ನಿಧಾನದ ವರೆಗೆ ಬಿಸ್ಕೆಟ್ ವಿತರಿಸುತ್ತಿದೆ.
ಈಗಾಗಲೇ 85 ಲಕ್ಷ ಬಿಸ್ಕೆಟ್‌ಗಳನ್ನು ವಿತರಿಸಲಾಗಿದೆ. ಈ ವರ್ಷ ತೀರ್ಥಾಟನೆ ಕಾಲಾವಧಿಯಲ್ಲಿ 2 ಕೋಟ ಬಿಸ್ಕೆಟ್ ವಿತರಿಸಲು ಉದ್ದೇಶಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ತಿಳಿಸಿದ್ದಾರೆ. ಬಿಸ್ಕೆಟ್ ವಿತರಣೆಗೆ ಅಗತ್ಯವಾದ ಕಾರ್ಯಕರ್ತರನ್ನು ವಿವಿಧ ಖಾಸಗಿ ಏಜೆನ್ಸಿಗಳ ಸಹಕಾರದಿಂದ ಹೊಂದಿಸಿಕೊಳ್ಳಲಾಗಿದೆ.
ಶುಂಠಿ ನೀರು ವಿತರಣೆ ಸುಗಮವಾಗಿ ಸಾಗುತ್ತಿದೆ ಎಂದು ಕುಡಿಯುವ ನೀರು ವಿತರಣೆಯ ಸ್ಪೆಷಲ್ ಅಧಿಕಾರಿ ಪಿ. ಪ್ರವೀಣ್ ತಿಳಿಸಿದರು. ಹೊಸದಾಗಿ ನಿರ್ಮಿಸಿದ ಪೈಪ್‌ಲೈನ್ ಮೂಲಕ ಶುಂಠಿ ನೀರನ್ನು ವಿತರಣೆ ಕೇಂದ್ರಕ್ಕೆ ತಲುಪಿಸಲಾಗುತ್ತಿದೆ.
ಭಕ್ತರಿಗೆ ಶುಂಠಿ ನೀರು ಸಂಗ್ರಹಿಸಲು ಶರಂಕುತ್ತಿಯಿಂದ ಕ್ಯೂ ಕಾಂಪ್ಲೆಕ್ಸ್ ತನಕ 44 ನಳ್ಳಿಗಳ ವ್ಯವಸ್ಥೆ ಮಾಡಲಾಗಿದೆ. ಶಬರಿಮಲೆ ಚಪ್ಪರದಲ್ಲಿ 27 ನಳ್ಳಿಗಳನ್ನು ವ್ಯವಸ್ಥೆಗೊಳಿಸಲಾಗಿದೆ.
ದೊಡ್ಡ ಚಪ್ಪರದಲ್ಲಿ ಐದು ಟ್ರಾಲಿಗಳಲ್ಲಿ ದಿನ ಪೂರ್ತಿ ಶುಂಠಿ ನೀರು ವಿತರಿಸಲಾಗುತ್ತಿದೆ. 614 ಮಂದಿ ತಾತ್ಕಾಲಿಕ ನೌಕರರನ್ನು ಇದಕ್ಕಾಗಿ ದೇವಸ್ವಂ ಮಂಡಳಿ ನೇಮಿಸಿದೆ.