Advertisement

ನಾವು ಇಲ್ಲಿಗೆ ಸೇರಿದವರಲ್ಲವೇ? ಕೊಲೆಯಾದ ಟೆಕ್ಕಿಯ ಪತ್ನಿ ಪ್ರಶ್ನೆ

03:50 AM Feb 26, 2017 | Team Udayavani |

ಹೂಸ್ಟನ್‌/ನವದೆಹಲಿ: ಅಮೆರಿಕದ ಕನ್ಸಾಸ್‌ನಲ್ಲಿ ಭಾರತೀಯ ಎಂಜಿನಿಯರ್‌ ಶ್ರೀನಿವಾಸ್‌ ಕುಚಿಭೋಟ್ಲಾ(32) ಹತ್ಯೆ ಪ್ರಕರಣದಿಂದ ತೀವ್ರ ಆಘಾತ ಹಾಗೂ ದುಃಖದಲ್ಲಿ ಮುಳುಗಿರುವ ಅವರ ಪತ್ನಿ ಸುನಯನ ದುಮಾಲಾ ಶನಿವಾರ ತಮ್ಮ ನೋವನ್ನು ಮಾಧ್ಯಮಳೊಂದಿಗೆ ಹಂಚಿಕೊಂಡಿದ್ದಾರೆ.

Advertisement

ಒಂದು ಹಂತದಲ್ಲಿ ಆಕ್ರೋಶಕ್ಕೊಳಗಾದ ಅವರು, “ನಾವು ಇಲ್ಲಿಗೆ ಸೇರಿದವರಲ್ಲವೇ? ಅಮೆರಿಕದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಜನಾಂಗೀಯ ದ್ವೇಷದ ಅಪರಾಧಗಳನ್ನು ತಡೆಗಟ್ಟಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಉತ್ತರಿಸಬೇಕು,’ ಎಂದರು.

ಶ್ರೀನಿವಾಸ್‌ ಕಾರ್ಯನಿರ್ವಹಿಸುತ್ತಿದ್ದ ಗಾರ್ಮಿನ್‌ ಕಂಪನಿ ಆಯೋಜಿಸಿದ್ದ ಸುದ್ದಿಧಿಗೋಷ್ಠಿಯಲ್ಲಿ ಸುನಯನ ಮಾತನಾಡಿದರು. “ಇಲ್ಲಿ ನಡೆಯುತ್ತಿದ್ದ ದಾಳಿಗಳನ್ನು ನೋಡುತ್ತಿದ್ದಾಗ, ನಾವು ಅಮೆರಿಕದಲ್ಲಿ ವಾಸಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದೆ. ಅದಕ್ಕೆ ಶ್ರೀನಿವಾಸ್‌, ಮುಂದೆ ಎಲ್ಲವೂ ಒಳ್ಳೆಯದಾಗಲಿದೆ ಎಂದಿದ್ದರು. ಅವರಿಗೆ ಇಂತಹ ಸಾವು ಬರಬಾರದಿತ್ತು,’ ಎನ್ನುತ್ತಾ ಸುನಯನ ಕಣ್ಣೀರಿಟ್ಟರು.

ಇದೇ ವೇಳೆ, ನಾವು ಇಲ್ಲಿನ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ಶ್ರೀನಿವಾಸ್‌ ಕುಟುಂಬಕ್ಕೆ ಹಾಗೂ ಕನ್ಸಾಸ್‌ನಲ್ಲಿರುವ ಇತರರಿಗೆ ಎಲ್ಲ ನೆರವು ನೀಡಲಿದ್ದೇವೆ ಎಂದು ಹೂಸ್ಟನ್‌ನಲ್ಲಿರುವ ಭಾರತದ ರಾಯಭಾರಿ ಅನುಪಮ್‌ ರೇ ಹೇಳಿದ್ದಾರೆ. ಘಟನೆಯ ಮಾಹಿತಿ ಸಿಕ್ಕೊಡನೆ ರಾಯಭಾರ ಕಚೇರಿ ಅಧಿಕಾರಿಗಳಾದ ಆರ್‌ ಡಿ ಜೋಷಿ ಹಾಗೂ ಎಚ್‌.ಸಿಂಗ್‌ ಕನ್ಸಾಸ್‌ಗೆ ಧಾವಿಸಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಹಿಂಸೆ, ಧರ್ಮಾಂಧತೆಗೆ ಜಾಗವಿಲ್ಲ: ನಾದೆಳಾ: ಭಾರತೀಯ ಟೆಕ್ಕಿ ಕೊಲೆಯನ್ನು ತೀವ್ರವಾಗಿ ಖಂಡಿಸಿರುವ ಮೈಕ್ರೋಸಾಫ್ಟ್ ಸಿಇಒ, ಭಾರತೀಯ ಮೂಲದ ಸತ್ಯ ನಾದೆಳಾ, “ನಮ್ಮ ಸಮಾಜದಲ್ಲಿ ಹಿಂಸೆ ಹಾಗೂ ಧರ್ಮಾಂಧತೆಗೆ ಜಾಗವಿಲ್ಲ,’ ಎಂದಿದ್ದಾರೆ. ಜತೆಗೆ, ಶ್ರೀನಿವಾಸ್‌ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇತ್ತೀಚೆಗಷ್ಟೇ ಭಾರತ ಭೇಟಿ ವೇಳೆ ನಾದೆಳಾÉ ಅವರು, ವೈವಿಧ್ಯತೆ ಮತ್ತು ಎಲ್ಲರನ್ನು ಒಳಗೊಂಡ ವಾತಾವರಣವು ಸಮಾಜಕ್ಕೆ ಎಷ್ಟು ಅಗತ್ಯ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

ಕನ್ಸಾಸ್‌ ಶೂಟಿಂಗ್‌ಗೂ, ವಲಸೆ ನೀತಿಯೂ ಸಂಬಂಧವಿಲ್ಲ: ಶ್ವೇತಭವನ: ವಲಸಿಗರ ಕುರಿತು ಅಧ್ಯಕ್ಷ ಟ್ರಂಪ್‌ ಅವರ ನಿಲುವು ಅಮೆರಿಕದಲ್ಲಿ ದ್ವೇಷದ ವಾತಾವರಣ ನಿರ್ಮಿಸುತ್ತಿದ್ದು, ಶ್ರೀನಿವಾಸ್‌ ಕೊಲೆಗೂ ಅದೇ ಕಾರಣ ಎಂಬ ವಾದವನ್ನು ಶ್ವೇತಭವನ ತಳ್ಳಿಹಾಕಿದೆ. ಒಬ್ಬ ವ್ಯಕ್ತಿಯು ಪ್ರಾಣ ಕಳೆದುಕೊಂಡಿರುವುದು ಬೇಸರದ ಸಂಗತಿ. ಆದರೆ, ಟ್ರಂಪ್‌ರ ವಲಸೆ ನೀತಿಗೂ, ಟೆಕ್ಕಿ ಕೊಲೆಗೂ ಯಾವುದೇ ಸಂಬಂಧವಿಲ್ಲ. ಆ ರೀತಿ ಸಂಬಂಧ ಕಲ್ಪಿಸುವುದು ಅಸಂಬದ್ಧ ಎಂದು ವೈಟ್‌ಹೌಸ್‌ ಮಾಧ್ಯಮ ಕಾರ್ಯದರ್ಶಿ ಸೀನ್‌ ಸ್ಪೈಸರ್‌ ಹೇಳಿದ್ದಾರೆ.

ಭಯದ ವಾತಾವರಣವಿಲ್ಲ: ವಿಶ್ವಸಂಸ್ಥೆ:  ಅಮೆರಿಕದಲ್ಲಿ ಕ್ಲೆನೋಫೋಬಿಯಾ (ಅನ್ಯದೇಶೀಯರ ಬಗ್ಗೆ ದ್ವೇಷ) ಹಾಗೂ ಇಸ್ಲಾಮೋಫೋಬಿಯಾ (ಮುಸ್ಲಿಮರ ಬಗ್ಗೆ ಭಯ)ದ ವಾತಾವರಣವಿಲ್ಲ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರಸ್‌ ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದೆಡೆ, ಅಮೆರಿಕದ ಸಂಸದರೂ ಜನಾಂಗೀಯ ಅಪರಾಧಗಳ ಕುರಿತು ಧ್ವನಿಯೆತ್ತಿದ್ದಾರೆ. ಜತೆಗೆ, ಕನ್ಸಾಸ್‌ ಶೂಟಿಂಗ್‌ ಅನ್ನು ಖಂಡಿಸಿದ್ದಾರೆ. “ದ್ವೇಷ ಯಾವತ್ತೂ ಗೆಲ್ಲದಂತೆ ನಾವು ನೋಡಿಕೊಳ್ಳಬೇಕು’ ಎಂದು ಭಾರತೀಯ-ಅಮೆರಿಕನ್‌ ಸೆನೇಟರ್‌ ಕಮಲಾ ಹ್ಯಾರಿಸ್‌ ಹೇಳಿದ್ದಾರೆ. ಟ್ರಂಪ್‌ ಅಧಿಕಾರಕ್ಕೇರಿದ ಬಳಿಕ, ಅವರ ಕೆಲವು ನೀತಿಗಳಿಂದಾಗಿ ಇಂತಹ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ ಎಂದು ಪ್ರಮೀಳಾ ಜಯಪಾಲ್‌ ಅಭಿಪ್ರಾಯಪಟ್ಟಿದ್ದಾರೆ. 

ಕನ್ಸಾಸ್‌ ಶೂಟಿಂಗ್‌: ಮಾಧ್ಯಮಗಳ ವರದಿ ಹೇಗಿತ್ತು?
ದಿ ನ್ಯೂಯಾರ್ಕ್‌ ಟೈಮ್ಸ್‌- ಅಮೆರಿಕದ ಈ ಪ್ರಮುಖ ಪತ್ರಿಕೆಯು ಶ್ರೀನಿವಾಸ್‌ ಕೊಲೆ, ಅದರ ಸುತ್ತಮುತ್ತಲಿನ ವಿದ್ಯಮಾನಗಳನ್ನು ಕೈಬಿಟ್ಟು, ಭಾರತ-ಅಮೆರಿಕ ಸಂಬಂಧಕ್ಕೇ ಹೆಚ್ಚು ಒತ್ತು ನೀಡಿತ್ತು. ಟೆಕ್ಕಿ ಕೊಲೆಯಿಂದಾಗಿ ಎರಡೂ ದೇಶಗಳ ನಡುವಿನ ಬಾಂಧವ್ಯದಲ್ಲಿ ಬಿರುಕು ಉಂಟಾಗಬಹುದೇ ಎಂಬುದರ ಬಗ್ಗೆಯಷ್ಟೇ ವರದಿ ಕೇಂದ್ರೀಕೃತವಾಗಿತ್ತು.

ದಿ ವಾಷಿಂಗ್ಟನ್‌ ಪೋಸ್ಟ್‌- ಘಟನೆ ಕುರಿತು ವಿಸ್ತೃತ ವರದಿ ನೀಡಿತ್ತಲ್ಲದೇ, ನಿಮ್ಮ ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸಬೇಡಿ ಎಂಬ ಶ್ರೀನಿವಾಸ್‌ ತಂದೆಯ ಹೇಳಿಕೆಯನ್ನೂ ಉಲ್ಲೇಖೀಸಿತ್ತು. ಕನ್ಸಾಸ್‌ ಸಿಟಿ ಸ್ಟಾರ್‌- ಶ್ರೀನಿವಾಸ್‌ ಕೊಲೆಯ ಜೊತೆಗೇ ಅವರ ವ್ಯಕ್ತಿಚಿತ್ರವನ್ನೂ ಕೊಡಲಾಗಿತ್ತು. ಅವರ ಕುಟುಂಬ, ಸ್ನೇಹಿತರ ವಿವರ, ಅವರಿಗಾದ ಆಘಾತ, ಕಂಪನಿಯ ಪ್ರಕಟಣೆ, ಮೃತದೇಹ ಒಯ್ಯಲು ನಿಧಿ ಸಂಗ್ರಹ ಮತ್ತಿತರ ಸುದ್ದಿಗಳನ್ನೂ ಕೊಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next