Advertisement

IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!

01:30 PM Nov 19, 2024 | Team Udayavani |

ಪಣಜಿ: ನವಿಲಿನ ಚಿತ್ರಕ್ಕೆಈಗ ಹೊಸ ಬಣ್ಣ !ರಂಗೋಲಿಗಳ ಬಣ್ಣದೊಳಗೆ ನವಿಲಿನ ಗರಿಯ ಕಣ್ಣ ಬಣ್ಣ ಕಳೆದು ಹೋದರೂ ಅಚ್ಚರಿ ಇಲ್ಲ.

Advertisement

ಐವತ್ತೈದನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಇಫಿ) ಕ್ಕೆ ಸಜ್ಮುಗೊಳ್ಳುತ್ತಿರುವ ಪಣಜಿ ಐನಾಕ್ಸ್‌ ಆವರಣಕ್ಕೆ ಕಾಲಿಟ್ಟರೆ ಕಾಣಸಿಗುವುದು ಇದೇ ದೃಶ್ಯಾವಗಳಿಗಳು.

ಬುಧವಾರದಿಂದ (ನ.20) ಈ ನವಿಲು ಗರಿ ಬಿಚ್ಚಿ ಕುಣಿಯಬೇಕು. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಎನ್‌ ಎಫ್‌ ಡಿ ಸಿ ಹಾಗೂ ಇಎಸ್‌ ಜಿ (ಎಂಟರ್‌ ಟೈನ್‌ ಮೆಂಟ್‌ ಸೊಸೈಟಿ ಆಫ್‌ ಗೋವಾ) ಸಂಯುಕ್ತವಾಗಿ ಈ ಉತ್ಸವವನ್ನು ಆಯೋಜಿಸುತ್ತಿವೆ. 2004 ರಲ್ಲಿ ಚಿತ್ರೋತ್ಸವದ ರಥ ಗೋವಾಕ್ಕೆ ಬಂದು ನಿಂತಿತು. ಅದು 35ನೇ ಚಿತ್ರೋತ್ಸವ. ಬಳಿಕ ಗೋವಾದ ಪಣಜಿಯನ್ನೇ ಚಿತ್ರೋತ್ಸವದ ಕಾಯಂ ತಾಣವಾಗಿ ಕೆಲವು ವರ್ಷಗಳಲ್ಲೇ ಘೋಷಿತವಾಯಿತು. ಹಾಗೆ ಗೋವಾದಲ್ಲಿ ನಡೆಯುತ್ತಿರುವ 21ನೇ ಉತ್ಸವವಿದು. ನ. 20 ರಿಂದ 28 ರವರೆಗೆ ಈ ಚಿತ್ರೋತ್ಸವ ನಡೆಯಲಿದೆ.

ಈ ಬಾರಿ ಚಿತ್ರ ನವಿಲಿಗೆ ಹೊಸ ಬಣ್ಣ ಬಂದಿರುವುದು ನಿಜ. ಅದು ದೇಸೀ ಬಣ್ಣ. ಈ ಬಾರಿಯ ಥೀಮ್‌ ದೇಸಿ. ದೇಶದ ವಿವಿಧ ರಾಜ್ಯಗಳಲ್ಲಿನ ರಂಗೋಲಿಯ ಸಂಸ್ಕೃತಿಯನ್ನು ಉಣ ಬಡಿಸಲಾಗುತ್ತಿದೆ. ನವಿಲಿನ ಗರಿಯ ಕಣ್ಣ ಮೇಲೂ ಮಿರಿ ಮಿರಿ ಮಿಂಚುವುದು ಈ ರಂಗೋಲಿಗಳೇ. ಹಾಗಾಗಿಯೇ ನವಿಲಿನ ಗರಿಯ ಕಣ್ಣಿನ ಬಣ್ಣಗಳು ಈ ರಂಗೋಲಿಯಲ್ಲಿ ಕಳೆದು ಹೋದರೂ ಅಚ್ಚರಿ ಎನಿಸದು.

Advertisement

ಕೆಂಪು ಹಾಸಿನಿಂದ (ರೆಡ್‌ ಕಾರ್ಪೆಟ್) ಹಿಡಿದು ಪತ್ರಿಕಾಗೋಷ್ಠಿಯ ತಾಣ, ಸಂವಾದಗಳ ತಾಣ, ಐನಾಕ್ಸ್‌ ಥಿಯೇಟರ್‌ ಗಳ ಪರಿಸರ ಎಲ್ಲವೂ ಅಲಂಕೃತಗೊಂಡಿರುವುದು ಈ ಕೊಲ್ಲಂ ಮತ್ತಿತರ ದೇಸಿ ರಂಗೋಲಿಗಳ ಸಾಲಿನಿಂದ ಹಾಗೂ ಬಣ್ಣಗಳಿಂದ.

ಬೆಳಗ್ಗೆಯೊಳಗೆ ಚಿತ್ರಾವತಿ !:

ಇಂದ್ರನ ಅಮರಾವತಿ ಎಲ್ಲರಿಗೂ ತಿಳಿದೇ ಇದೆ. ಗೋವಾದ ಪಣಜಿ ಇನ್ನು ಹತ್ತು ದಿನಗಳಂತೂ ಚಿತ್ರಗಳ ನಗರಿ ಚಿತ್ರಾವತಿ (ಚಿತ್ರಗಳ ನಗರಿ ಎಂಬ ಕಲ್ಪಿತ ಹೆಸರು) ಎಂದುಕೊಳ್ಳಬಹುದು. ಬಸ್‌ ಸ್ಟ್ಯಾಂಡಿನಿಂದ ಹಿಡಿದು ಐನಾಕ್ಸ್‌ ಥಿಯೇಟರ್‌ ಗಳು, ಕಲಾ ಅಕಾಡೆಮಿ, ಮಿರಾಮಾರ್‌ ಬೀಚ್‌ ನ ವೃತ್ತದವರೆಗೂ ರಸ್ತೆಯ ಎರಡೂ ಬದಿಗಳು ವಿದ್ಯುತ್‌ ದೀಪಗಳಿಂದ ಅಲಂಕೃತವಾಗುತ್ತವೆ.

ಪ್ರತಿ ವೃತ್ತಗಳಲ್ಲೂ ಇಫಿಯ ಪೋಸ್ಟರ್‌ ಗಳು, ಬ್ಯಾನರ್‌ ಗಳು ರಾರಾಜಿಸುತ್ತವೆ. ಥಿಯೇಟರ್‌ ಗಳ ಎದುರು ಚಿತ್ರಗಳ ಪೋಸ್ಟರ್‌ ಗಳು ಮಿಂಚತೊಡಗುತ್ತವೆ. ಇದರ ಮಧ್ಯೆ ಸಿನಿಮಾ ನಟರು, ಉದ್ಯಮಿಗಳು, ತಂತ್ರಜ್ಞರು ಹಾಗೂ ಸಿನಿಮಾಸಕ್ತರ ಓಡಾಟ ಆರಂಭವಾಗಿದೆ. ಒಟ್ಟೂ ಪಣಜಿಯ ಈ ಆವರಣ ಬುಧವಾರದಿಂದ ಬರೀ ಸಿನಿಮಾದವರದ್ದೇ. ಅದಕ್ಕೇ ಈ ಆವರಣ ಇನ್ನೂ ಚಿತ್ರಾವತಿಯ ಆವರಣ.

ಲಭ್ಯ ಮಾಹಿತಿಗಳ ಪ್ರಕಾರ ಇದುವರೆಗೆ 6 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಸಿನಿಮಾ ಉದ್ಯಮಿಗಳು ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದಾರೆ.

ರಾಜ್ಯ ಸರಕಾರದ ಲೆಕ್ಕಾಚಾರ:

ಗೋವಾ ಈಗಾಗಲೇ ಪ್ರವಾಸೋದ್ಯಮ ನಗರಿಯಾಗಿ ಜನಪ್ರಿಯವಾಗಿದೆ. ವಿಶೇಷವಾಗಿ ಮನರಂಜನ ಉದ್ಯಮದ ನಗರಿಯಾಗಿಯೂ ಪ್ರಸಿದ್ಧವಾಗಿದೆ. ಇದಕ್ಕೆ ಹೊಂದಿಕೊಂಡಂತೆಯೇ ಚಿತ್ರ ನಿರ್ಮಾಣ ನಗರಿಯಾಗಿ ಮಾರ್ಪಡಿಸುವ ಉದ್ದೇಶ ಸ್ಥಳೀಯ ರಾಜ್ಯ ಸರಕಾರದ್ದು. ಇದೇ ಹಿನ್ನೆಲೆಯಲ್ಲೇ ಗೋವಾವನ್ನು ಚಿತ್ರೋದ್ಯಮ ಸ್ನೇಹಿ ನಗರವಾಗಿ ರೂಪಿಸಲು ಯೋಜಿಸಿದೆ. ಇವೆಲ್ಲದರ ಯೋಜನೆಯ ಹಿನ್ನೆಲೆಯಲ್ಲೇ ಇಫಿ ಚಿತ್ರೋತ್ಸವವೂ ಪುನರ್‌ ರೂಪಿತಗೊಳ್ಳುತ್ತಿದೆ.

ಗೋವಾ ಸಂಸ್ಕೃತಿ, ಗೋವಾ ಸಿನಿಮಾ, ಕಲೆ, ಗುಡಿ ಉದ್ಯಮ ಹಾಗೂ ಸ್ಥಳೀಯ ಉದ್ಯಮಗಳ ವಹಿವಾಟಿಗೂ ಪೂರಕ ವಾತಾವರಣ ಕಲ್ಪಿಸುವ ಲೆಕ್ಕಾಚಾರವೂ ರಾಜ್ಯ ಸರಕಾರದ್ದು. ಹೀಗಾಗಿ ರಾಜ್ಯ ಸರಕಾರದ ಇಲಾಖೆಗಳೂ ಈ ಉತ್ಸವದ ತಯಾರಿಯಲ್ಲಿ ತೊಡಗಿವೆ.

ಪ್ರಸ್ತುತ ಐನಾಕ್ಸ್‌ ಆವರಣದಲ್ಲಿ ಸಿನಿಮಾ ಉತ್ಸವ ನಡೆಯುತ್ತಿದೆ. ಈ ಆವರಣ ಇಎಸ್‌ ಜಿ ಆಡಳಿತದಲ್ಲಿದೆ. ಈ ಹಿನ್ನೆಲೆಯಲ್ಲಿ ಇಫಿ ತನ್ನದೇ ಆದ ಆವರಣವನ್ನು ಹೊಂದಲು ನಿರ್ಧರಿಸಿದೆ. ಡೋನಪೌಲಾದಲ್ಲಿ ಆವರಣವನ್ನು ಹೊಂದುವ ಆಲೋಚನೆ ಇತ್ತು. ಆದರೆ ಇಂದಿಗೂ ಆ ಕನಸಿನ ನವಿಲು ಇನ್ನೂ ಮೊಟ್ಟೆಯ ಹಂತದಲ್ಲೇ ಇದೆ.

ಸದ್ಯ ಹತ್ತು ದಿನಗಳ ಕಾಲ ಇನ್ನು ಪಣಜಿ ಚಿತ್ರ ನಗರಿ !

-ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next