ಬೆಂಗಳೂರು: ಕೆಲವು ದಿನಗಳಿಂದ ವಿಕ್ರಮ್ ಆಸ್ಪತ್ರೆಯಲ್ಲಿ ಅಸ್ತಮಾ ಹಾಗೂ ಉಸಿರಾಟದ ತೊಂದರೆಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ಸಂಪೂರ್ಣ ಗುಣಮುಖರಾಗಿದ್ದು, ಶುಕ್ರವಾರ ಮನೆಗೆ ತೆರಳಿದ್ದಾರೆ. ಮನೆಯಲ್ಲಿ ಕಟ್ಟುನಿಟ್ಟಿನ ಆಹಾರ ಪದಾರ್ಥಗಳ ಜತೆಗೆ ವಿಶ್ರಾಂತಿ ಪಡೆಯುವಂತೆ ವಿಕ್ರಂ ಆಸ್ಪತ್ರೆ ವೈದ್ಯರು ಅವರಿಗೆ ಸೂಚಿಸಿದ್ದಾರೆ.
ಮನೆಗೆ ತೆರಳುವ ಮುನ್ನ ಮಾಧ್ಯಮದವರ ಜತೆ ಮಾತನಾಡಿದ ಅವರು, “ನನ್ನ ಆರೋಗ್ಯ ವಿಚಾರಿಸಿದ ಹಾಗೂ ಬೇಗನೇ ಗುಣಮುಖವಾಗುವಂತೆ ಪ್ರಾರ್ಥಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮುಖ್ಯವಾಗಿ ಮಾಧ್ಯಮಗಳು ಪ್ರತಿ ನಿತ್ಯ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದವು. ನನಗಾಗಿ ಆಸ್ಪತೆ ಬಳಿ ಕಾಯುತ್ತಿದ್ದವು. ಬೇರೆ ಭಾಷೆಯ ಮಾಧ್ಯಮಗಳು ನನ್ನ ಆರೋಗ್ಯದ ಬಗ್ಗೆ ಹುಸಿ ಸುದ್ದಿ ಹಬ್ಬಿಸಿದ್ದವು. ಆದರೆ ನಮ್ಮ ಕನ್ನಡದ ಮಾಧ್ಯಮಗಳು ವಾಸ್ತವಾಂಶ ವನ್ನಷ್ಟೇ ಬಿತ್ತರಿಸಿದ್ದು ಹೆಮ್ಮೆ ಅನಿಸುತ್ತಿದೆ. ನನ್ನಿಂದ
ಯಾರಿಗಾದರೂ ತೊಂದರೆಯಾದರೆ ಕ್ಷಮಿಸಿ’ ಎಂದು ಭಾವುಕರಾದರು.
ಜಯಂತಿ ಪುತ್ರ ಕೃಷ್ಣಕುಮಾರ್ ಮಾತನಾಡಿ, ಅಮ್ಮನ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕೆಂದು ವೈದ್ಯರು ಪಟ್ಟಿಕೊಟ್ಟಿದ್ದಾರೆ. ಹತ್ತು ದಿನಗಳ ನಂತರ ಮತ್ತೆ ತಪಾಸಣೆಗೆ ಬರುವಂತೆ ಸೂಚಿಸಿದ್ದಾರೆ ಎಂದರು. ಜಯಂತಿ ಅವರಿಗೆ ಡಾ.ಸತೀಶ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.