ಕೆ.ಆರ್.ಪುರ: “ಕೆರೆಯಂಗಳದ ಕೊಳೆಗೇರಿ ಪ್ರದೇಶದಲ್ಲಿ ಮನೆ ನಿರ್ಮಿಸಿ ಕೊಂಡಿರುವವರಿಗೆ ಸ್ಪೀಕರ್ ಕೊಳಿವಾಡ ಸಮಿತಿ ವರದಿ ಪರಿಶೀಲಿಸಿ ಹಕ್ಕುಪತ್ರ ನೀಡಲಾಗುವುದು,” ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ ಜೆ ಜಾರ್ಜ್ ಭರವಸೆ ನೀಡಿದ್ದಾರೆ.
ಕೆ.ಆರ್.ಪುರ ಕ್ಷೇತ್ರದ ನಗರೇಶ್ವರ ನಾಗೇನಹಳ್ಳಿ, ಕ್ಯಾಲಸನಹಳ್ಳಿ, ಮುನೇಶ್ವರ ನಗರ, ವಿಜಿನಾಪುರ ಬಳಿಯ ಅಂಬೇಡ್ಕರ್‌ನಗರ ಮತ್ತು ಲಕ್ಷ್ಮಣ್‌ಮೂರ್ತಿನಗರ ಪ್ರದೇಶದ ಕೊಳೆಗೇರಿ ಬಡಾವಣೆಗಳಿಗೆ ಗುರುವಾರ ಭೇಟಿ ಪರಿಶೀಲನೆ ನಡೆಸಿದ ಅವರು, “ನಗರ ವ್ಯಾಪ್ತಿಯಲ್ಲಿರುವ ಕೆಲವು ಕೊಳೆಗೇರಿ ಪ್ರದೇಶಗಳು ಕೆರೆವ್ಯಾಪ್ತಿಗೆ ಒಳಪಟ್ಟಿದೆ. ಹೀಗಾಗಿ ಸ್ವೀಕರ್ ಕೋಳಿವಾಡ ಸಮಿತಿ ವರದಿ ಆಧರಿಸಿ ಕೆಳಯಂಗಳ ಮತ್ತು ಕೊಳೆಗೇರಿಯಲ್ಲಿರುವ ಬಡವರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು.
ಕೆ ಆರ್ ಪುರ ಕ್ಷೇತ್ರದಲ್ಲಿ ಈಗಾಗಲೆ 1619 ಫಲಾನುಭವಿಗಳನ್ನು ಗುರುತಿಸಲಾಗಿದೆ. ಶಿಥಿಲಾವ್ಯವಸ್ಥೆಯ ಮನೆಗಳನ್ನು ಹೊಂದಿರುವ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಶೀಘ್ರದಲ್ಲೆ ಅನುದಾನ ಬಿಡುಗಡೆ ಮಾಡಿ, ಹಂತ ಹಂತವಾಗಿ ಮನೆಗಳನ್ನು ನಿರ್ಮಿಸಿಕೊಡಲಾಗುವುದು,” ಎಂದರು. ಈ ವೇಳೆ “ಕ್ಷೇತ್ರದಲ್ಲಿ ಈಗಾಗಲೆ 1619 ಫಲಾನುಭವಿಗಳನ್ನು ಗುರುತಿಸಲಾಗಿದೆ, ಅವರಿಗೆ ಆದಷ್ಟು ಬೇಗನೆ ಮನೆ ನಿರ್ಮಾಣ ಮಾಡಿಕೊಡಬೇಕು,” ಎಂದು ಸ್ಥಳೀಯ ಶಾಸಕರು ಮನವಿ ಮಾಡಿದರು.
ಯಾರು ಫ್ಲೆಕ್ಸ್ ಹಾಕಿದವರನ್ನೇ ಕೇಳಿ: ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಮತ್ತು ಫ್ಲೆಕ್ಸ್ ಅಳವಡಿಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದರೂ ಇದೇ ತಿಂಗಳ 4 ರಂದು ಸ್ಥಳೀಯ ಶಾಸಕ ಬಸವರಾಜ್ ರವರ ಹುಟ್ಟು ಹಬ್ಬದ ಹಿನ್ನಲೆ ಕ್ಷೇತ್ರದಾಧ್ಯಂತ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ ಇದರಿಂದ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಇದರ ಬಗ್ಗೆ ಸಚಿವ ಜಾರ್ಜ್‌ರನ್ನು ಪ್ರಶ್ನೆಗೆ ಉತ್ತರಿಸಿದ ಅವರು ನನ್ನ ಹುಟ್ಟು ಹಬ್ಬಕ್ಕೆ ಯಾವುದೇ ರೀತಿ ಫ್ಲೆಕ್ಸ್ ಅಳವಡಿಸುವುದಿಲ್ಲ.
ಯಾರ ಹುಟ್ಟು ಹಬ್ಬಕ್ಕೆ ಅಳವಡಿಸಿದ್ದಾರೋ ಅವರನ್ನೇ ಕೇಳಿ ಎಂದು ಶಾಸಕರೆದುರೇ ಹೇಳಿದರು. ಕೇತ್ರದಲ್ಲಿ ಯಾವುದೇ ರೀತಿಯ ಫ್ಲೆಕ್ಸ್‌ಗಳನ್ನು ಅಳವಡಿಸದಂತೆ ಕಾರ್ಯಕರ್ತರಿಗೆ ಸೂಚಿಸದರು ಕಾರ್ಯಕರ್ತರು ಅಭಿಮಾನದಿಂದ ಅಳವಡಿಸಿದ್ದಾರೆ. ಇದಕ್ಕೆ ಬಿಬಿಎಂಪಿವತಿಯಿಂದ ದಂಡ ವಿಧಿಸಿದರೆ ಭರಿಸಲು ಸಿದ್ಧ ಎಂದು ಶಾಸಕ ಬಿ.ಎ.ಬಸವರಾಜ ಸರ್ಮಥಿಸಿಕೊಂಡರು. ಈ ವೇಳೆ ಪಾಲಿಕೆ ಸದಸ್ಯರು ಬಿಬಿಎಂಪಿ ಅಧಿಕಾರಿಗಳೂ ಸ್ಥಳದಲ್ಲೇ ಇದ್ದರು.