ಬೆಂಗಳೂರು: ಪ್ರಕೃತಿ ನಿಯಮದ ವಿರುದ್ಧದ ನಡೆ ಮನುಷ್ಯ ಸಂಕುಲಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ಮಾತಾ ಅಮೃತಾನಂದಮಯಿ ಹೇಳಿದರು.
ಉಲ್ಲಾಳ ಉಪನಗರದ ಮಾತಾ ಅಮೃತಾನಂದಮಯಿ ಮಠ ಶುಕ್ರವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರಬಹುದು. ಆದರೆ ಪರಿಸರದ ಮುಂದೆ ಅವೆಲ್ಲವೂ ಶೂನ್ಯ.ಇದಕ್ಕೆ ಕೇರಳದಲ್ಲಿ ದಿಢೀರ್ ಎಂದು ಕಾಣಿಸಿಕೊಂಡ ಪ್ರಕೃತಿ ವಿಪತ್ತು ಸಾಕ್ಷಿ ಎಂದು ತಿಳಿಸಿದರು.
ಮನುಷ್ಯ ಸಂಕುಲಕ್ಕೆ ಪ್ರಕೃತಿ ಶುದ್ಧವಾದ ಗಾಳಿ, ನೀರು ಸೇರಿದಂತೆ ಎಲ್ಲವೂ ನೀಡುತ್ತದೆ. ಆದರೆ ಮನುಷ್ಯ ಮಾತ್ರ ಅದಕ್ಕೆ ಅಪಚಾರ ಮಾಡುತ್ತಲೇ ಇದ್ದಾನೆ. ಹಣದ ಹಿಂದೆ ಬಿದ್ದು ಸಂತೋಷ ಮರೆತಿದ್ದು, ಭೂದೇವಿ ಮುನಿಸಿಕೊಂಡರೆ ಆಪತ್ತು ತಪ್ಪಿದ್ದಲ್ಲ. ಆ ಹಿನ್ನೆಲೆಯಲ್ಲಿ ಪ್ರಕೃತಿಯನ್ನು ಯಾವಾಗಲೂ ನಾವು ಸ್ನೇಹಿತರಂತೆ ಕಾಣಬೇಕು ಎಂದರು.
ಆಚಾರ-ವಿಚಾರಗಳ ಕಣ್ಮರೆ: ಈ ಹಿಂದೆ ಪ್ರಕೃತಿಯನ್ನು ದೇವತೆ ರೀತಿ ನೋಡಲಾಗುತ್ತಿತ್ತು. ಹಬ್ಬದ ದಿನ ಭೂ ದೇವಿಯನ್ನು ಪೂಜಿಸಲಾಗುತ್ತಿತ್ತು. ಆದರೆ ಅವೆಲ್ಲವೂ ಈಗ ಮಾಯವಾಗಿವೆ. ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ನಾಶ ಮಾಡುತ್ತಿದ್ದು, ಮರ ಗಿಡಗಳನ್ನು ಬೆಳೆಸುವುದನ್ನೇ ಮರೆತಿದ್ದೇವೆ. ಹೀಗೆ ಮಾಡಿದರೆ ಪರಿಸರ ಉಳಿವು ಹೇಗಾಗುತ್ತದೆ ಎಂದರು.
ಮಹಿಳೆಯರಿಗೆ ಗೌರವ: ನಿವೃತ್ತ ನ್ಯಾ.ಕುಮಾರ್ ಮಾತನಾಡಿ, ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ನೀಡುವಷ್ಟು ಗೌರವ ಬೇರೆ ಯಾವ ಧರ್ಮದಲ್ಲೂ ಇಲ್ಲ. ಸನಾತನ ಧರ್ಮದಲ್ಲಿ ಮಹಿಳೆಯರಿಗೆ ಮೊದಲ ಸ್ಥಾನ ನೀಡಲಾಗಿದ್ದು, ತಾಯಿಯಾಗಿ, ಹೆಂಡತಿಯಾಗಿ, ಸ್ನೇಹಿತೆಯಾಗಿ ನಿಜವಾದ ಪ್ರೀತಿ ತೋರುತ್ತಾರೆ ಎಂದರು. ನಿವೃತ್ತ ನ್ಯಾ.ಅಶೋಕ್ ಹಿಂಚಗೇರಿ, ಸುಭಾಷ್ ಬಿ. ಆದಿ, ಇಸ್ರೇಲ್ ರಾಯಭಾರಿ ದಾನಖುಷ್ ಉಪಸ್ಥಿತರಿದ್ದರು.
ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 5 ಲಕ್ಷ ರೂ.: ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ವಿಧ್ವಂಸಕ ಕೃತ್ಯದಲ್ಲಿ ವೀರಮರಣವನ್ನಪ್ಪಿದ ಸಿಆರ್‌ಪಿಎಫ್‌ನ 40 ಯೋಧರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ನೆರವು ನೀಡಲು ಮಾತಾ ಅಮೃತಾನಂದಮಯಿ ಮಠ ನಿರ್ಧರಿಸಿದೆ. ಈ ಕುರಿತು ಸಂತಾಪ ಸೂಚಿಸಿರುವ ಶ್ರೀ ಮಾತಾ ಅಮೃತಾನಂದಮಯಿ ದೇವಿ (ಅಮ್ಮ) ಅವರು,
ದೇಶ ವೀರ ಯೋಧರನ್ನು ಕಳೆದುಕೊಳ್ಳುತ್ತಿರುವುದು ದುಃಖದ ಸಂಗತಿ. ದೇಶವನ್ನು ರಕ್ಷಿಸಲು ತಮ್ಮ ಜೀವವನ್ನೇ ಕಳೆದುಕೊಂಡ ಯೋಧರ ಕುಟುಂಬಗಳಿಗೆ ನೆರವಾಗುವುದು ನಮ್ಮ ಧರ್ಮ. ವೀರ ಯೋಧರ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿ ಕೊಡಲು, ಅಲ್ಲದೆ, ದೇಶದ ಶಾಂತಿ, ಯೋಗಕ್ಷೇಮಕ್ಕಾಗಿ ಪ್ರಾರ್ಥಿಸೋಣ ಎಂದು ತಿಳಿಸಿದ್ದಾರೆ.