Advertisement

Karnataka: ಸೆ. 12: “ನನ್ನ ಮೈತ್ರಿ” ಯೋಜನೆ ಆರಂಭ

11:24 PM Sep 02, 2023 | Team Udayavani |

ಬೆಂಗಳೂರು: ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಪದವಿಪೂರ್ವ ವಿದ್ಯಾರ್ಥಿನಿಯರ ಆರೋಗ್ಯ ಸಂರಕ್ಷಣೆಗಾಗಿ ಪ್ರಾಯೋಗಿಕವಾಗಿ ಋತುಸ್ರಾವ ಕಪ್‌ (ಮೆನ್‌ಸ್ಟ್ರೆಯಲ್‌ ಕಪ್‌) ನೀಡುವ ಮಹತ್ವದ ನಿರ್ಣಯವನ್ನು ರಾಜ್ಯ ಸರಕಾರ ಕೈಗೊಂಡಿದ್ದು, ಸೆ. 12ರಂದು ಇದಕ್ಕೆ ಚಾಲನೆ ನೀಡಲಾಗುವುದು.

Advertisement

ಇದಕ್ಕಾಗಿ ಆರೋಗ್ಯ ಇಲಾಖೆಯು 2022ರ ಜುಲೈಯಲ್ಲಿ 17ರಿಂದ 18 ವರ್ಷದೊಳಗಿನ ಹೆಣ್ಣು ಮಕ್ಕಳು ಋತುಸ್ರಾವದ ಅವಧಿಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ ಬದಲಾಗಿ ಋತುಸ್ರಾವ ಕಪ್‌ ಬಳಕೆಗೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಚಾಮರಾಜ ನಗರದ ಯಳಂದೂರಿನ ತಲಾ 150 ವಿದ್ಯಾರ್ಥಿನಿಯರಂತೆ ಒಟ್ಟು 300 ವಿದ್ಯಾರ್ಥಿನಿಯರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.
ಶನಿವಾರ ವಿಕಾಸಸೌಧದಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಕಪ್‌ ಬಳಕೆಯೇ ಸುರಕ್ಷಿತ ಎಂಬ ಅಭಿಪ್ರಾಯ ಶೇ.90ರಷ್ಟು ವಿದ್ಯಾರ್ಥಿನಿಯರು ಮತ್ತು ಪೋಷಕರಿಂದ ವ್ಯಕ್ತವಾಗಿದೆ ಎಂದು ಹೇಳಿದರು.

15,000 ಕಪ್‌ ವಿತರಣೆಗೆ ಕ್ರಮ
ರಾಜ್ಯದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾದ ದಕ್ಷಿಣಕನ್ನಡ ಜಿಲ್ಲೆಯಲ್ಲಿ 11,000 ವಿದ್ಯಾರ್ಥಿನಿಯರು ಹಾಗೂ ಚಾಮರಾಜ ನಗರದ 4,000 ವಿದ್ಯಾರ್ಥಿನಿಯರಿಗೆ ಕಪ್‌ ವಿತರಣೆಯಾಗಲಿದೆ. ಸರಕಾರಿ ಹಾಗೂ ಅನುದಾನಿತ ಕಾಲೇಜಿನಲ್ಲಿ ಕಲಿಯುತ್ತಿರುವ 17-18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ತಲಾ ಒಂದರಂತೆ ಒಟ್ಟು 15,000 ಕಪ್‌ ವಿತರಿಸಲಾಗುತ್ತದೆ. ಈಗಾಗಲೇ ಆರೋಗ್ಯ ಇಲಾಖೆಯಿಂದ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಪ್‌ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಪ್ರಯೋಗ ಯಶಸ್ವಿಯಾದ ಬಳಿಕ ಉಳಿದ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ವಿವರಿಸಿದರು.

ದೇಶದಲ್ಲೇ ಮೊದಲ ಬಾರಿಗೆ ಇಲಾಖೆ ಕೈಗೊಂಡ ಸಮೀಕ್ಷೆಗೆ ಉತ್ತಮ ಸ್ಪಂದನೆ ದೊರೆತಿದೆ. ತತ್ಪರಿಣಾಮವಾಗಿ ಮುಟ್ಟಿನ ಕಪ್‌ ವಿತರಣೆಯೇ ಸುರಕ್ಷಿತ ಎಂಬ ನಿರ್ಣಯಕ್ಕೆ ಬರಲಾಗಿದ್ದು, 5 ರಿಂದ 8 ವರ್ಷಗಳ ಮರುಬಳಕೆ ಮಾಡಬಹುದಾಗಿದೆ. ಪ್ರತಿ ಕಪ್‌ಗೆ 100 ರೂ. ಖರ್ಚಾಗಲಿದೆ. ಖರೀದಿ ಪ್ರಕ್ರಿಯೆಯೂ ಪೂರ್ಣಗೊಂಡಿದೆ.

 -ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ

Advertisement

ದಕ್ಷಿಣ ಕನ್ನಡ ಹಾಗೂ ಚಾಮರಾಜನಗರದ 17ರಿಂದ 18 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಋತುಸ್ರಾವ ಕಪ್‌ ವಿತರಿಸಲಾಗುತ್ತದೆ. ಸಮೀಕ್ಷೆಯಲ್ಲಿ ಹೆಣ್ಣುಮಕ್ಕಳು ಕಪ್‌ ಬಳಕೆ ಉತ್ತಮ ಎನ್ನುವುದಾಗಿ ಪ್ರತಿಕ್ರಿಯಿಸಿದ್ದಾರೆ. ಒಂದು ಕಪ್‌ ಸಾಮಾನ್ಯವಾಗಿ 5ರಿಂದ 8 ವರ್ಷಗಳ ವರೆಗೆ ಬಳಕೆ ಮಾಡಬಹುದಾಗಿದೆ.
-ಡಾ| ವೀಣಾ ವಿ., ನಿರ್ದೇಶಕಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ

Advertisement

Udayavani is now on Telegram. Click here to join our channel and stay updated with the latest news.

Next